ಮನೆಯಲ್ಲ, ಮಹಿಳೆಯ ಪಾಲಿಗೆ ಭಯದ ನೆರಳು

ಇಂದು (ನವೆಂಬರ್ 25) ಅಂತರ್‌ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ.

Update: 2022-11-25 05:13 GMT

ವಿಶ್ವಸಂಸ್ಥೆ ವರದಿ ಮತ್ತು ಭಾರತದ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿ ಎರಡರಲ್ಲಿ ದಾಖಲಾಗಿರುವ ಅಂಕಿ-ಅಂಶಗಳು ಭಯಬೀಳಿಸುತ್ತವೆ. ತನ್ನವರಿಂದಲೇ ಮಹಿಳೆಗೆ ಅಪಾಯವಿರುವ ಭೀಕರತೆ ಬದಲಾಗುತ್ತಲೇ ಇಲ್ಲ. ಬದಲಾಗಿ ಹೆಚ್ಚುತ್ತಲೇ ಇದೆ. ಕೊರೋನ ಕಾಲದಲ್ಲಂತೂ ಮಹಿಳೆಯರು ಮನೆಯೊಳಗೇ ಬಂದಿಯಾಗಿ, ಅನುಭವಿಸುವ ಹಿಂಸೆಯೂ ಹೆಚ್ಚಾಯಿತು. ಜಗತ್ತಿನಲ್ಲಿ ಪ್ರತೀ 11ನಿಮಿಷಗಳಿಗೊಮ್ಮೆ ಸಂಗಾತಿಯಿಂದಲೇ ಮಹಿಳೆಯ ಹತ್ಯೆಯಾಗುತ್ತದೆ. ಪ್ರತೀ ಮೂವರಲ್ಲಿ ಒಬ್ಬರು ತನ್ನವರಿಂದಲೇ ಹಿಂಸೆಗೆ ಈಡಾಗುವುದು ಜಗತ್ತಿನಾದ್ಯಂತದ ವಾಸ್ತವ. ಭಾರತದಲ್ಲಿಯೂ ಗಂಡನೇ ಪರಮ ಕ್ರೂರಿ. ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವಲ್ಲಿಯೂ ಪುರುಷ ಪ್ರಾಧಾನ್ಯ ವ್ಯವಸ್ಥೆಯ ಕ್ರೌರ್ಯವೇ ಇದೆ.

ಜಗತ್ತಿನಲ್ಲಿ ಪ್ರತೀ 11 ನಿಮಿಷಗಳಿಗೊಮ್ಮೆ ಸಂಗಾತಿಯಿಂದಲೇ ಹತ್ಯೆ

ಪ್ರತೀ 11 ನಿಮಿಷಗಳಿಗೊಮ್ಮೆ ಜಗತ್ತಿನಲ್ಲಿ ಸಂಗಾತಿಯಿಂದಲೇ ಮಹಿಳೆಯರ ಹತ್ಯೆ ನಡೆಯುತ್ತದೆ ಎಂಬ ಘೋರ ಸತ್ಯವನ್ನು ವಿಶ್ವಸಂಸ್ಥೆ ತೆರೆದಿಟ್ಟಿದೆ. ವಿಶ್ವಸಂಸ್ಥೆ ಮುಖ್ಯಸ್ಥ ಆ್ಯಂಟೋನಿಯೊ ಗುಟೆರಸ್ ಈ ಅಂಶವನ್ನು ಬಹಿರಂಗಪಡಿಸಿದ್ದು, ವಿಶ್ವದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರವು ಅತ್ಯಂತ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರವೂ, ಪ್ರಪಂಚದಾದ್ಯಂತದ ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬರು ಗಂಡ, ಪ್ರಿಯಕರ, ಗೆಳೆಯ ಅಥವಾ ಇನ್ನಿತರ ನಿಕಟವರ್ತಿಗಳಿಂದಲೇ ದೈಹಿಕ, ಲೈಂಗಿಕ ಹಿಂಸೆಗೆ ತುತ್ತಾಗುತ್ತಾರೆ. ಅಂದರೆ ಜಗತ್ತಿನ ಸುಮಾರು 73 ಕೋಟಿ 60 ಲಕ್ಷ ಮಹಿಳೆಯರು ಎದುರಿಸುತ್ತಿರುವ ಸ್ಥಿತಿ ಇದು. ಯುವತಿಯರು ಮತ್ತು ಬಡದೇಶಗಳಲ್ಲಿನ ಮಹಿಳೆಯರು ಹೆಚ್ಚು ಅಪಾಯದಲ್ಲಿರುವವರಾಗಿದ್ದಾರೆ ಎನ್ನುತ್ತದೆ ವರದಿ.

ಈ ವರದಿ ಗಮನಿಸಿರುವಂತೆ, ಪುರುಷರಿಂದ ಹಿಂಸೆಯನ್ನು ಅನುಭವಿಸಿದ ಮಹಿಳೆಯರ ಒಟ್ಟಾರೆ ಅಂಕಿ ಅಂಶದಲ್ಲಿ ಕಳೆದಿಡೀ ದಶಕದಲ್ಲಿ ಕೊಂಚವೂ ಇಳಿಕೆಯಾಗಿಲ್ಲ. .ಸಂಬಂಧದಲ್ಲಿರುವ 15ರಿಂದ 24 ವರ್ಷ ವಯಸ್ಸಿನ ನಾಲ್ಕು ಯುವತಿಯರಲ್ಲಿ ಒಬ್ಬರು ತಮ್ಮ ಸಂಗಾತಿಯಿಂದಲೇ ಹಿಂಸೆಯನ್ನು ಅನುಭವಿಸುತ್ತಾರೆ. ಕಳೆದೊಂದು ವರ್ಷದಲ್ಲಿ ಇಂಥ ಅತಿ ಹೆಚ್ಚು ಅಂದರೆ ಶೇ.16ರಷ್ಟು ಯುವತಿಯರು ಸಂಗಾತಿಯಿಂದ ಹಿಂಸೆಗೊಳಗಾಗಿದ್ದಾರೆ ಎಂಬ ಅಂಶವನ್ನು ವರದಿ ದಾಖಲಿಸಿದೆ. ಬೇರೆ ಬೇರೆ ವಯೋಮಾನದಲ್ಲಿ ವರ್ಗೀಕರಿಸಲಾದ ಮಹಿಳೆಯರಲ್ಲಿಯೂ ಸುಮಾರು 64 ಕೋಟಿ 10 ಲಕ್ಷ ಮಹಿಳೆಯರು ಸಂಗಾತಿಯಿಂದಲೇ ದೌರ್ಜನ್ಯಕ್ಕೊಳಗಾಗಿದ್ದಾರೆ. ಸುಮಾರು ಶೇ.6ರಷ್ಟು ಮಹಿಳೆಯರು ಸಂಗಾತಿ ಅಥವಾ ನಿಕಟವರ್ತಿಗಳನ್ನು ಹೊರತುಪಡಿಸಿ ಬೇರೆಯವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಎನ್ನುತ್ತದೆ ವರದಿ.

ಮಹಿಳೆಯರ ಮೇಲಿನ ಹಿಂಸಾಚಾರವು ಅವರ ಒಟ್ಟಾರೆ ಮತ್ತು ಲೈಂಗಿಕ ಆರೋಗ್ಯದ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಈ ವರದಿ ಗುರುತಿಸಿರುವ ಮತ್ತೊಂದು ಅಂಶ. ಗಂಭೀರವಾದ ಗಾಯಗಳಲ್ಲದೆ, ಈ ಹಿಂಸಾತ್ಮಕ ಗುರುತು ಮತ್ತು ನೆನಪುಗಳು ಖಿನ್ನತೆ, ಆತಂಕ ಮತ್ತಿತರ ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸುಮಾರು ಶೇ.37ರಷ್ಟು ಮಹಿಳೆಯರು ನಿಕಟವರ್ತಿಗಳಿಂದ ದೈಹಿಕವಾಗಿ ಅಥವಾ ಲೈಂಗಿಕವಾಗಿ ನಿಂದನೆಗೆ ಒಳಗಾಗಿದ್ದಾರೆ. ಈ ಬಗೆಯು ಭಾರತ ಸೇರಿದಂತೆ ದಕ್ಷಿಣ ಏಶ್ಯ, ಓಷಿಯಾನಿಯಾ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿ ವ್ಯಾಪಕವಾಗಿ ಕಂಡುಬಂದಿದೆ.

ಹತ್ತಿರದವರಿಂದಲೇ ಮಹಿಳೆಯರು ಹಿಂಸೆಗೀಡಾಗುವ ಪ್ರಮಾಣ ಏಶ್ಯದಲ್ಲಿಯೇ ಹೆಚ್ಚು. ಆಗ್ನೇಯ ಏಶ್ಯದಲ್ಲಿ ಶೇ.21, ಪೂರ್ವ ಏಶ್ಯದಲ್ಲಿ ಶೇ.20 ಹಾಗೂ ಮಧ್ಯ ಏಶ್ಯದಲ್ಲಿ ಶೇ.18ರಷ್ಟು ಮಹಿಳೆಯರು ಹತ್ತಿರದವರಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಯುರೋಪ್‌ನಲ್ಲಿ ಈ ಪ್ರಮಾಣ ಶೇ.16ರಿಂದ 23ರಷ್ಟು. ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಿನವು ಬೇರೆ ಬೇರೆ ಕಾರಣಗಳಿಗಾಗಿ ವರದಿಯಾಗದೆ ಉಳಿದುಬಿಡುವುದರಿಂದ ಹಿಂಸೆಗೊಳಗಾದ ಮಹಿಳೆಯರ ನಿಜವಾದ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂಬುದನ್ನೂ ವರದಿ ಉಲ್ಲೇಖಿಸಿದೆ.

ಕೊರೋನ ಕಾಲದಲ್ಲಿ ಮಹಿಳೆಯರ ಮೇಲಿನ ದೈಹಿಕ ಮತ್ತು ಲೈಂಗಿಕ ದೌರ್ಜನ್ಯವು ಉಲ್ಬಣಗೊಂಡಿದೆ ಎಂಬ ಉಲ್ಲೇಖವೂ ವರದಿಯಲ್ಲಿದೆ.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ದೇಶಗಳು ಏನೇನು ವಿಧಾನಗಳನ್ನು ಅನುಸರಿಸಬಹುದು ಎಂಬ ಸಲಹೆಯನ್ನೂ ವರದಿ ಸೂಚಿಸಿದೆ. 1.ಲಿಂಗ ಪರಿವರ್ತಕ ನೀತಿಗಳು, ಶಿಶುಪಾಲನಾ ನೀತಿಗಳಿಂದ ಸಮಾನ ವೇತನದವರೆಗೆ ಲಿಂಗ ಸಮಾನತೆಯನ್ನು ಬೆಂಬಲಿಸುವ ಕಾನೂನುಗಳು; 2.ಸಮಗ್ರ ಲೈಂಗಿಕ ಶಿಕ್ಷಣ ಸೇರಿದಂತೆ ತಾರತಮ್ಯದ ವರ್ತನೆಗಳು ಮತ್ತು ನಂಬಿಕೆಗಳನ್ನು ನಿವಾರಿಸಬಲ್ಲ ರೀತಿಯಲ್ಲಿ ಶೈಕ್ಷಣಿಕ ನೆಲೆಯ ಕ್ರಮಗಳು; 3.ಸ್ಥಳೀಯ, ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಸಮರ್ಥನೀಯ ಮತ್ತು ಪರಿಣಾಮಕಾರಿ ಸಾಕ್ಷ್ಯ ಆಧಾರಿತ ತಡೆ ತಂತ್ರಗಳಲ್ಲಿ ಉದ್ದೇಶಿತ ಹೂಡಿಕೆ ಮತ್ತು ದತ್ತಾಂಶ ಸಂಗ್ರಹಣೆಯನ್ನು ಬಲಪಡಿಸುವುದು.

ಮಹಿಳೆಯರ ಮೇಲಿನ ದೌರ್ಜನ್ಯವು ಪ್ರತೀ ದೇಶ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಬೇರೆಬೇರೆಯಿದ್ದರೂ, ಲಕ್ಷಾಂತರ ಮಹಿಳೆಯರು ಮತ್ತವರ ಕುಟುಂಬಗಳ ಪಾಲಿನ ಯಾತನೆಯಾಗಿ ಇದು ಪರಿಣಮಿಸಿದೆ. ಮಹಿಳೆಯರ ವಿರುದ್ಧದ ಹಾನಿಕಾರಕ ವರ್ತನೆಗಳನ್ನು ಬದಲಾಯಿಸಲು, ಮಹಿಳೆಯರು ಮತ್ತು ಹುಡುಗಿಯರ ಜೀವನಸ್ಥಿತಿ ಉತ್ತಮಗೊಳಿಸುವಂಥ ಅವಕಾಶಗಳನ್ನು ಸುಧಾರಿಸಲು ಮತ್ತು ಆರೋಗ್ಯಕರ, ಪರಸ್ಪರ ಗೌರವಾನ್ವಿತ ಸಂಬಂಧಗಳನ್ನು ಬೆಳೆಸಲು ಸರಕಾರಗಳು, ಸಮುದಾಯಗಳು ಮತ್ತು ವ್ಯಕ್ತಿಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ ಎಂದು ವರದಿ ಭಾವಿಸುತ್ತದೆ.

ಹೆಣ್ಣಿನ ವಿರುದ್ಧದ ರಕ್ಕಸ ವ್ಯೆಹ

ಇತ್ತೀಚೆಗೆ ಶ್ರದ್ಧಾ ವಾಲ್ಕರ್ ಎಂಬ ಹೆಣ್ಣುಮಗಳು ತನ್ನ ಪ್ರಿಯಕರನಿಂದಲೇ ಹಿಂಸೆ ಅನುಭವಿಸಿ, ಕಡೆಗೆ ಅವನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಎಷ್ಟೊಂದು ಕೊಲೆ, ಅತ್ಯಾಚಾರ ಹಾಡಹಗಲಲ್ಲೇ ನಡೆದುಹೋಗುತ್ತಿರುವಾಗಲೂ ಹೆಣ್ಣಿಗೆ ರಕ್ಷೆಯೆಂಬುದನ್ನು ಖಾತ್ರಿಪಡಿಸುವ ವಾತಾವರಣವಿಲ್ಲ. ಯಾಕೆಂದರೆ ಅವಳನ್ನು ಕೊಲ್ಲುವವರು, ಹಿಂಸಿಸಿ ಕಾಡುವವರು ಇನ್ನೆಲ್ಲೋ ಇರದೆ ಅವಳ ಸುತ್ತಲೇ, ಅವಳ ಪರಿಚಯದವರಲ್ಲೇ ಇರುತ್ತಾರೆಂಬುದೇ ಘೋರ ವಾಸ್ತವ. 

ವಿಶ್ವಸಂಸ್ಥೆಯ ಪ್ರತೀ ಬಾರಿಯ ವರದಿಯಲ್ಲೂ ಇರುವ ಒಂದು ಸಾಮಾನ್ಯ ಅಂಶವೆಂದರೆ, ಮಹಿಳೆಯೊಬ್ಬಳು ತನ್ನ ಗಂಡ, ಪ್ರೇಮಿ ಅಥವಾ ಇನ್ನಿತರ ನಿಕಟವರ್ತಿಗಳಿಂದಲೇ ಹೆಚ್ಚು ಹಿಂಸೆ, ಲೈಂಗಿಕ ಕಿರುಕುಳ ಅನುಭವಿಸುವುದು ಅಥವಾ ಕೊಲೆಯಾಗುವುದು ಎಂಬ ಕಟು ವಾಸ್ತವ. ಯಾರನ್ನೋ ಮದುವೆಯಾಗಿ, ಯಾರದೋ ಹಿಂದೆ ಓಡಿಹೋಗಿ ತಮ್ಮ ಮರ್ಯಾದೆ ಕಳೆದಳೆಂದು ಮನೆಮಗಳನ್ನೇ ಕೊಲ್ಲುವ ‘ಮರ್ಯಾದಸ್ಥ’ರಿಗೆ ಬಲಿಯಾದವರೂ ಈ ಲೆಕ್ಕದಲ್ಲಿದ್ದಾರೆ. ಜಗತ್ತಿನಾದ್ಯಂತ ಪ್ರತೀ ತಾಸಿಗೆ 6 ಮಹಿಳೆಯರು ತಮಗೆ ಗೊತ್ತಿರುವ ವ್ಯಕ್ತಿಯಿಂದಲೇ ಕೊಲೆಯಾಗುತ್ತಿದ್ದಾರೆ. ಅಂದರೆ ಯಾವುದೇ ಕ್ಷಣದಲ್ಲೂ ಪ್ರಾಣಾಂತಕ ಸನ್ನಿವೇಶವು ಹೆಣ್ಣಿನೆದುರು ಧುತ್ತನೆ ಬಂದು ನಿಲ್ಲಬಹುದು.

ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.

ನಮ್ಮಲ್ಲಿಯೂ ನಿತ್ಯ ವರದಿಯಾಗುವ ಒಂದೊಂದು ಘಟನೆಗಳ ಬಗ್ಗೆ ಯೋಚಿಸಿದರೆ ಮನಸ್ಸು ಕಲಕಿಹೋಗುತ್ತದೆ. ಒಂದೊಂದು ರಾಜ್ಯದಲ್ಲೂ ವರ್ಷವೂ ಸಾವಿರ ಸಾವಿರಗಳ ಲೆಕ್ಕದಲ್ಲಿ ಹೆಣ್ಣಿನ ಮೇಲೆ ಹಿಂಸಾಚಾರ ಪ್ರಕರಣಗಳು ಘಟಿಸುತ್ತವೆ. ಅತ್ಯಾಚಾರ, ಅತ್ಯಾಚಾರವೆಸಗಿ ಕೊಲೆ ಮಾಡುವುದು, ಸ್ಟಾಕಿಂಗ್, ಇರಿದು ಕೊಲ್ಲುವುದು, ಗುಂಡಿಟ್ಟು ಸಾಯಿಸುವುದು, ಆ್ಯಸಿಡ್ ದಾಳಿ ಒಂದೆರಡಲ್ಲ. ಮತ್ತಿವುಗಳಲ್ಲೆಲ್ಲ ವಿಶ್ವಸಂಸ್ಥೆಯ ವರದಿ ಹೇಳುತ್ತಿರುವಂತೆ ಮಹಿಳೆ ಹೆಚ್ಚಾಗಿ ಬಲಿಯಾಗುತ್ತಿರುವುದು ಪರಿಚಿತರಿಗೇ.

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಹೇಳುವುದೂ ಇದನ್ನೇ. ನೆರೆಹೊರೆಯವರು, ಕುಟುಂಬದವರು, ಸಂಬಂಧಿಗಳು, ಅಪ್ಪ, ಗಂಡ ಅಥವಾ ಲೈವ್ ಇನ್ ಸಂಬಂಧದಲ್ಲಿದ್ದವರು, ಕೆಲಸ ಮಾಡುವ ಕಂಪೆನಿಯ ಮಾಲಕ ಅಥವಾ ಸಹೋದ್ಯೋಗಿಗಳು ಹೀಗೆ ಗೊತ್ತಿರುವವರೇ ಅಂದರೆ ಜೊತೆಜೊತೆಗಿರುವವರೇ ಕೊಲೆಗಡುಕ ಮನಃಸ್ಥಿತಿ ಹೊತ್ತವರಾಗಿರುತ್ತಾರೆ ಎಂಬುದು ಪ್ರತಿಯೊಬ್ಬ ಹೆಣ್ಣಿನ ಪಾಲಿಗೆ ಬಹುದೊಡ್ಡ ಕಠೋರ ಸತ್ಯ.

ಅತ್ಯಾಚಾರ ಪ್ರಕರಣಗಳಾದಾಗಲೆಲ್ಲ ಹೆಣ್ಣುಮಕ್ಕಳು ಪ್ರಚೋದನಾಕಾರಿ ಉಡುಪು ಧರಿಸುತ್ತಾರೆ, ನಡುರಾತ್ರಿಯಲ್ಲಿ ಮನೆಯಿಂದ ಹೊರಗಡೆ ಅವರಿಗೇನು ಕೆಲಸ ಎಂಬಿತ್ಯಾದಿ ತಕರಾರುಗಳೇ ಏಳುತ್ತವೆ. ಹೆಣ್ಣುಮಕ್ಕಳ ಉಡುಪಿನ ಬಗ್ಗೆ ತಕರಾರೆತ್ತುವ ಮತ್ತು ನಡುರಾತ್ರಿ ಅವರು ಹೊರಗೆ ಕಾಣಿಸಿಕೊಳ್ಳಬಾರದೆನ್ನುವ ಸಂಪ್ರದಾಯವಾದಿ ಮನಃಸ್ಥಿತಿಗಳಿಗೆ ಮೈತುಂಬ ಬಟ್ಟೆಯಿರುವ ಮುಗ್ಧೆ ಅತ್ಯಾಚಾರಕ್ಕೆ ತುತ್ತಾದಾಗಲಾಗಲೀ, ಹಾಡಹಗಲಲ್ಲೇ ಅತ್ಯಾಚಾರ ನಡೆದಾಗಲಾಗಲೀ ಬಾಯಿಯೇ ಬರುವುದಿಲ್ಲ. ಯಾವ ಅತ್ಯಾಚಾರಿಯ ತಾಯ್ತಂದೆಯರೂ ತಮ್ಮ ಮಗನನ್ನು ಬೆಳೆಸುವಲ್ಲಿ ಎಲ್ಲಿ ಎಡವಿದೆವು ಎಂದು ಯೋಚಿಸುವುದಿಲ್ಲ. ತನ್ನ ಅತ್ಯಾಚಾರಿ ಮಗನನ್ನು ರಕ್ಷಿಸಿಕೊಳ್ಳಲು ಚಡಪಡಿಸುವ ತಾಯಿಗೆ, ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳು ಅನುಭವಿಸುವ ನರಕವಾಗಲಿ, ಅವಳ ಕೊಲೆಯಾದರೆ ಆ ಸಾವಾಗಲೀ ಕೊಂಚವೂ ಕಾಡುವುದಿಲ್ಲವೆ?

2012ರ ನಿರ್ಭಯಾ ಪ್ರಕರಣದ ನಂತರ, ಲಂಡನ್‌ನಲ್ಲಿ ಕ್ರಿಮಿನಾಲಜಿ ಓದುತ್ತಿದ್ದ ದಿಲ್ಲಿಯ ಯುವತಿಯೊಬ್ಬರು ತಮ್ಮ ಥೀಸಿಸ್‌ಗಾಗಿ ಅತ್ಯಾಚಾರಿಗಳ ಮನಃಸ್ಥಿತಿ ಅಧ್ಯಯನಿಸಲು ಅತ್ಯಾಚಾರ ಆರೋಪ ಹೊತ್ತ 100 ಕೈದಿಗಳನ್ನು ತಿಹಾರ್ ಜೈಲಿನಲ್ಲಿ ಕಂಡು ಮಾತನಾಡಿಸುತ್ತಾರೆ. ಆಕೆ ಮಾತನಾಡಿಸಿದವರಲ್ಲಿ ಬಹುತೇಕರು ಅಶಿಕ್ಷಿತರು. ಮೂರು ನಾಲ್ಕನೇ ಇಯತ್ತೆಯನ್ನೂ ಮುಗಿಸದೆ ಶಾಲೆಯಿಂದ ಹೊರಬಿದ್ದವರು. ಅವರಿಗೆ ತಾವು ಮಾಡಿರುವುದು ಅತ್ಯಾಚಾರ ಎಂದಾಗಲೀ, ಹೆಣ್ಣನ್ನು ಕೂಡುವಾಗ ಆಕೆಯ ಸಮ್ಮತಿ ಬೇಕಿರುತ್ತದೆ ಎಂಬುದರ ಬಗ್ಗೆಯಾಗಲೀ ಗೊತ್ತಿಲ್ಲ ಎಂಬುದರೊಂದಿಗೆ, ಹೆಣ್ಣಿನ ವಿರುದ್ಧ ನಡೆಯುವ ಅಪರಾಧಗಳ ಹಿನ್ನೆಲೆ ಕುರಿತ ಸತ್ಯದ ಬಹುದೊಡ್ಡ ಭಾಗದ ಮೇಲೆ ನೆರಳು ಆವರಿಸಿಕೊಳ್ಳುತ್ತದೆ. ಇವರೇನೂ ರಕ್ಕಸರಲ್ಲ, ತೀರಾ ಸಾಮಾನ್ಯರು ಎನ್ನುವ ಆಕೆ, ಅವರೊಳಗೆ ತಪ್ಪುಮಾಡಿರುವ ಬಗ್ಗೆ ಬೇಸರವಿದೆ ಎನ್ನುತ್ತ ಕೊಡುವ ಉದಾಹರಣೆಯೊಂದನ್ನು ಗಮನಿಸಬೇಕು: ‘‘ಅವನು 49 ವರ್ಷದವನು. 5 ವರ್ಷದ ಹಸುಳೆಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದವನು. ತಾನವಳ ಬದುಕನ್ನು ಹಾಳು ಮಾಡಿದೆ, ಅವಳನ್ನು ಯಾರೂ ಮದುವೆಯಾಗದ ಹಾಗೆ ಮಾಡಿದೆ ಎಂದು ಪರಿತಪಿಸುವ ಆತ ತಾನೇ ಅವಳನ್ನು ಸ್ವೀಕರಿಸಲು ಸಿದ್ಧ, ಜೈಲಿನಿಂದ ಬಿಡುಗಡೆಯಾದ ಮೇಲೆ ಅವಳನ್ನು ಮದುವೆಯಾಗುವೆ ಎನ್ನುತ್ತಾನೆ. ಅವನ ಪಶ್ಚಾತ್ತಾಪದ ಮುಂದೆ, ಆಗಲೂ ಅನಂತರವೂ ನರಕವೇ ಆದ ಆ ಹೆಣ್ಣುಮಗಳ ಸ್ಥಿತಿ ಮರೆತೇಹೋಗುತ್ತದಲ್ಲ?’’

ಮನಃಶಾಸ್ತ್ರೀಯ ತೀರ್ಮಾನ ಕೊಡುವ ಇಂತಹ ಅಧ್ಯಯನಗಳು ಭಾವನಾತ್ಮಕವಾಗಿದ್ದರೆ ಮಾತ್ರ ಸಾಲದು. ಅದು ಸಿಲುಕಿಕೊಂಡ ಮಿತಿಯ ಬಗ್ಗೆಯೂ ಎಚ್ಚರವಿರಬೇಕು. ಮೂರು ವರ್ಷಗಳಲ್ಲಿ ಈ ವಿದ್ಯಾರ್ಥಿನಿಯ ಸಂದರ್ಶನಕ್ಕೆ ಒಳಪಡುವವರು ಪಾಪದವರು ಮಾತ್ರ. ದೊಡ್ಡ ಸಮಾಜದ ಅತ್ಯಾಚಾರಿಗಳ್ಯಾರೂ ಈ ಸಂದರ್ಶನದ ವ್ಯಾಪ್ತಿಗೆ ಬರಲಿಲ್ಲ; ಅಥವಾ ಅಂತಹವರು ಜೈಲಿನೊಳಗೇ ಇಲ್ಲ. ಅತ್ಯಾಚಾರವೆಂದರೇನೆಂದು ಗೊತ್ತೇ ಇಲ್ಲದವರಿಂದ ಮಾತ್ರವಲ್ಲ; ಅದರ ಬಗ್ಗೆ ಚೆನ್ನಾಗಿಯೇ ತಿಳಿದವರಿಂದಲೂ, ಕಾನೂನಿನ ಎಲ್ಲ ಕಟ್ಟುಗಳಿಂದ ತಪ್ಪಿಸಿಕೊಳ್ಳಲು ರಂಗೋಲಿಯ ಅಡಿ ನುಸುಳಬಲ್ಲ ಚಾಣಾಕ್ಷರಿಂದಲೂ ಅತ್ಯಾಚಾರಗಳಾಗುತ್ತಿವೆ ಎಂಬುದನ್ನು ಇಂತಹ ಅಧ್ಯಯನಗಳು ಮರೆತುಬಿಡುವುದೇ ಇಂತಹವುಗಳು ಉಳಿಸಿಬಿಡುವ ಬಹುದೊಡ್ಡ ಕತ್ತಲು. ಇವುಗಳಿಂದ ಉತ್ಪತ್ತಿಯಾಗುವ ತೀರ್ಮಾನಗಳು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಹೆಣ್ಣುಮಕ್ಕಳತ್ತಲೇ ಬೊಟ್ಟು ಮಾಡುವಂಥದೇ ತಪ್ಪನ್ನು ಮತ್ತೊಂದು ದಿಕ್ಕಿನಿಂದ ಮಾಡುವ ಅಪಾಯವೇ ಜಾಸ್ತಿ.

ಹೆಣ್ಣಿನ ವಿರುದ್ಧದ ಹಿಂಸೆ ದಿನದಿನವೂ ಹೆಚ್ಚುತ್ತಲೇ ಇರುವುದರಲ್ಲಿ ನಮ್ಮೆಲ್ಲರ ಪಾಲೂ ಇದೆಯೆನ್ನಿಸುತ್ತದೆ. ಪ್ರತೀ ಮನೆಯೊಳಗೂ ಹೆಣ್ಣುಮಗಳನ್ನು ಪ್ರೀತಿ ಗೌರವ ಮತ್ತು ವಿಶ್ವಾಸದ ಆಪ್ತತೆ ಮತ್ತು ಅವಳ ಸ್ವಾತಂತ್ರ್ಯದ ಕುರಿತ ತಿಳಿವಿನೊಂದಿಗೆ ಕಾಣುವುದು ಸಾಧ್ಯವಾಗುವುದಾದರೆ, ನೆರೆಮನೆಯ ಹೆಣ್ಣುಮಗಳ ಬಗ್ಗೆಯೂ ಇದೇ ಭಾವನೆ ಹುಟ್ಟುವುದಾದರೆ ಕಾನೂನಿನಿಂದ ಸಿಗುವುದಕ್ಕಿಂತಲೂ ದೊಡ್ಡ ಸುರಕ್ಷತೆ ನಿಜಗೊಳ್ಳುವುದು ಸಾಧ್ಯ.

ಆದರೆ, ಕಲ್ಪನೆಗೂ ವಾಸ್ತವಕ್ಕೂ ಎಷ್ಟೊಂದು ಅಂತರ? ವಾಸ್ತವದಲ್ಲಿ ಹೆಣ್ಣಿನದು ರಕ್ಕಸ ವ್ಯೆಹದೊಳಗಿನ ನಿರಂತರ ಹೋರಾಟ.

ಭಾರತದಲ್ಲಿಯೂ ಗಂಡನ ಕ್ರೌರ್ಯಕ್ಕೆ ತುತ್ತಾಗುವವರೇ ಹೆಚ್ಚು

ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ದತ್ತಾಂಶದ ಪ್ರಕಾರ, 2021ರಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇ.15.3ರಷ್ಟು ಹೆಚ್ಚಿವೆ.

ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಮಾತ್ರವಲ್ಲದೆ ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣವೂ ಹೆಚ್ಚಾಗಿದೆ. ದಾಖಲಾದ ಪ್ರಕರಣಗಳ ಪ್ರಮಾಣವು 2020ರಲ್ಲಿ ಪ್ರತೀ ಲಕ್ಷ ಮಹಿಳೆಯರಿಗೆ 56.5ರಿಂದ 2021ರಲ್ಲಿ 64.5ಕ್ಕೆ ಏರಿದೆ. ಕಾನೂನುಗಳ ಕಠಿಣ ಅನುಷ್ಠಾನದ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಸ್ವತಂತ್ರ ತಜ್ಞರಲ್ಲದೆ, ದಿಲ್ಲಿ ಮಹಿಳಾ ಆಯೋಗವೂ (ಡಿಸಿಡಬ್ಲ್ಯು) ಸರಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದೆ.

ಕ್ರೈಮ್ ರೆಕಾರ್ಡ್ ಬ್ಯೂರೋ ವರದಿಯಲ್ಲಿರುವಂತೆ, 2021ರಲ್ಲಿ ಭಾರತದಾದ್ಯಂತ ಒಟ್ಟು 4,28,278 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿದ್ದು, 2020ಕ್ಕಿಂತ ಇದು ಶೇ.15.3ರಷ್ಟು ಹೆಚ್ಚು. ಮಹಿಳೆಯರ ವಿರುದ್ಧದ ಅಪರಾಧದ ಹೆಚ್ಚಿನ ಪ್ರಕರಣಗಳು ‘ಗಂಡ ಅಥವಾ ಅವನ ಸಂಬಂಧಿಕರಿಂದ ಕ್ರೌರ್ಯ’ದಡಿಯಲ್ಲಿ (ಶೇ. 31.8) ದಾಖಲಾಗಿವೆ. ಆನಂತರದವೆಂದರೆ, ‘ಮಹಿಳೆಯರ ಮೇಲಿನ ದೌರ್ಜನ್ಯ’ (ಶೇ.20.8), ‘ಮಹಿಳೆಯರ ಅಪಹರಣ’ (ಶೇ.17.6) ಮತ್ತು ‘ಅತ್ಯಾಚಾರ’ (ಶೇ.7.4).

ದೇಶದಲ್ಲಿ 2021ರಲ್ಲಿ 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಗೃಹಿಣಿಯರು ಎಂಬ ಅಂಶವನ್ನೂ ಈ ವರದಿ ದಾಖಲಿಸಿದೆ. ಆತ್ಮಹತ್ಯೆಗೆ ಬಲಿಯಾದ ಮಹಿಳೆಯರಲ್ಲಿ ಗೃಹಿಣಿಯರ ಹೆಚ್ಚಿನ ಪ್ರಮಾಣವಿರುವುದು ಸಮಾಜದಲ್ಲಿನ ಪಿತೃಪ್ರಾಧಾನ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ತಜ್ಞರು ಗಮನಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ 23,178 ಗೃಹಿಣಿಯರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ವಿವಾಹ ಸಂಬಂಧಿ ಸಮಸ್ಯೆಗಳು, ನಿರ್ದಿಷ್ಟವಾಗಿ ವರದಕ್ಷಿಣೆ ಸಂಬಂಧಿತ ಸಮಸ್ಯೆಗಳು ಮತ್ತು ಮಕ್ಕಳಾಗಲಿಲ್ಲವೆಂಬ ಕಾರಣದಿಂದ ಮಾನಸಿಕ ಕಿರುಕುಳಕ್ಕೆ ತುತ್ತಾಗಿ ಜೀವನವನ್ನು ಕೊನೆಗಾಣಿಸಿಕೊಂಡವರೆಂಬುದನ್ನು ವರದಿಯು ಬಹಿರಂಗಪಡಿಸಿದೆ.

2020-21ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳೆಯರಿಂದ 26,513 ಕೌಟುಂಬಿಕ ಹಿಂಸಾಚಾರದ ದೂರುಗಳನ್ನು ಸ್ವೀಕರಿಸಿದೆ. ಇದು 2019-20ರಲ್ಲಿ ದಾಖಲಾದ 20,309 ದೂರುಗಳಿಗೆ ಹೋಲಿಸಿದರೆ ಶೇ.25.09ರಷ್ಟು ಹೆಚ್ಚು.

ಎನ್‌ಸಿಆರ್‌ಬಿ ವರದಿ ಕೂಡ, ಕೋವಿಡ್ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಗಮನಾರ್ಹವಾಗಿ ಹೆಚ್ಚಿವೆ ಎಂಬುದನ್ನು ಗಮನಿಸಿದೆ. ಈ ಹೊತ್ತಿನಲ್ಲಿ ನಡೆದ ಹೆಚ್ಚಿನ ಪ್ರಕರಣಗಳು ಕೌಟುಂಬಿಕ ದೌರ್ಜನ್ಯಗಳಾಗಿವೆ. ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಕೌಟುಂಬಿಕ ಹಿಂಸಾಚಾರವು ಹೆಚ್ಚಿದೆ ಎಂಬುದನ್ನು ಗಮನಿಸಿದ ಜಾಗತಿಕ ಅವಲೋಕನಗಳಿಗೆ ಪೂರಕವಾಗಿಯೇ ಇದೆ ಈ ಅಂಶ.

Similar News