ಹೊಂಡಗುಂಡಿ ರಸ್ತೆಯಿಂದ ಅಂಬ್ಯುಲೆನ್ಸ್‌ನಲ್ಲಿಯೇ ಹೆತ್ತ ಮಹಿಳೆ !

ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಅವ್ಯವಸ್ಥೆ ವಿರೋಧಿಸಿ ಅಣಕು ಪ್ರತಿಭಟನೆ

Update: 2022-11-25 13:06 GMT

ಉಡುಪಿ : ಹೊಂಡ ಗುಂಡಿ ರಸ್ತೆಯಲ್ಲಿ ಎದ್ದು ಬಿದ್ದು ಬಂದ ಅಂಬುಲೆನ್ಸ್‌ನಲ್ಲಿ ಗರ್ಭಿಣಿ ಮಹಿಳೆ ಹೆರಿಗೆ ನೋವು ತಾಳಲಾರದೆ ಐವರು ಮಕ್ಕಳಿಗೆ ಜನ್ಮ ನೀಡಿದರು...
ಇದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಇಂದ್ರಾಳಿ ಸೇತುವೆ ಯಿಂದ ರೈಲ್ವೆ ನಿಲ್ದಾಣವರೆಗಿನ ಜಾರ್ಜ್ ಫೆರ್ನಾಂಡಿಸ್ ರಸ್ತೆಯ ಅವ್ಯವಸ್ಥೆ ವಿರೋಧಿಸಿ ವಿನೂತನ ರೀತಿಯಲ್ಲಿ ನಡೆಸಿದ ಅಣಕು ಪ್ರತಿಭಟನೆ.

ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದ ಅಂಬ್ಯುಲೆನ್ಸ್ ಹೊಂಡ ಗುಂಡಿಗಳಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಗರ್ಭಿಣಿ ಅಂಬ್ಯುಲೆನ್ಸ್‌ನಲ್ಲಿಯೇ ಐದು ಮಕ್ಕಳಿಗೆ ಜನ್ಮ ನೀಡುತ್ತಾರೆ. ಈ ರೀತಿಯಾಗಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ರಸ್ತೆಯ ಅವ್ಯವಸ್ಥೆಯನ್ನು ಜನರ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ರಾಜು ಗರ್ಭಿಣಿಯಾಗಿ ಮತ್ತು ಹರೀಶ್ ಗಭಿರ್ಣಿಯ ಮನೆಯವ ರಾಗಿ ಅಣಕು ಪ್ರದರ್ಶನದಲ್ಲಿ ನಟಿಸಿದರು. ಈ ಹೋರಾಟದಲ್ಲಿ ರೈಲ್ವೆ ನಿಲ್ದಾಣದ ರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ಕೂಡ ಕೈಜೋಡಿಸಿದರು.

‘ಉಡುಪಿ ಇಂದ್ರಾಳಿ ಸೇತುವೆಯಿಂದ ರೈಲ್ವೆ ನಿಲ್ದಾಣದವರೆಗಿನ ಜಾರ್ಜ್ ಫೆರ್ನಾಂಡಿಸ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಕಳೆದ ಎರಡು ವರ್ಷಗಳಿಂದ ಪ್ರಯಾಣಿಕರು ಹಿಂಸೆ ಅನುಭವಿಸುತ್ತಿದ್ದಾರೆ. ಈ ಪ್ರಮುಖ ರಸ್ತೆ ಇನ್ನು ದುರಸ್ತಿ ಕಾಣದಿರುವುದು ದುರಂತ. ರೈಲಿನಲ್ಲಿ ಬರುವ ರೋಗಿಗಳು, ಗರ್ಭಿಣಿಯರು ಸೇರಿದಂತೆ ವಿವಿಧ ರೀತಿಯ ಪ್ರಯಾಣಿಕರು ಇದೇ ರಸ್ತೆಯಲ್ಲಿ ಸಾಗುತ್ತಾರೆ ಎಂದು ನಿತ್ಯಾನಂದ ಒಳಕಾಡು ದೂರಿದರು.

ಈ ಬಗ್ಗೆ ನಗರಸಭೆ, ಶಾಸಕರಿಗೆ ಹಲವು ಬಾರಿ ಮನವಿ ಕೊಟ್ಟರು ಸಮಸ್ಯೆ ಬಗೆಹರಿದಿಲ್ಲ. ಇಲ್ಲಿನ ವಾಹನ ಚಾಲಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿರು ಹೈಮಾಸ್ಟ್ ದೀಪ ಕೆಲಸ ಮಾಡುತ್ತಿಲ್ಲ. ರಸ್ತೆ ಬದಿಯಲ್ಲಿ ಗೀಡ ಗಂಟಿಗಳು ಬೆಳೆದು ರಸ್ತೆಯಲ್ಲಿ ನಡೆಯಲು ಹೆದರಿಕೆ ಆಗುತ್ತದೆ. ಕಳ್ಳರ ಹಾವಳಿ ಕೂಡ ಇದೆ. ಇದರಿಂದ ಬೇಸತ್ತು ಸರಕಾರದ ಗಮನ ಸೆಳೆಯಲು ಈ ರೀತಿಯ ಅಣಕು ಪ್ರದರ್ಶನ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ನಗರಸಭೆ, ಲೋಕೋಪಯೋಗಿ ಇಲಾಖೆಯವರು ಕೂಡಲೇ ದುರಸ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

"ಇಂದ್ರಾಳಿ ರೈಲ್ವೆ ನಿಲ್ದಾಣದ ರಸ್ತೆ ದುರಸ್ತಿ ಕಾಣದೆ ಹಲವು ವರ್ಷಗಳೇ ಕಳೆದಿವೆ. ಈ ಹೊಂಡಗಳಿಗೆ ಬಿದ್ದು ನಮ್ಮ ರಿಕ್ಷಾಗಳ ಬಿಡಿಭಾಗಗಳು ಹಾನಿಯಾಗುತ್ತಿದೆ. ಇದರಿಂದ ನಾವು ಅಪಾರ ನಷ್ಟ ಅನುಭವಿಸುತ್ತಿದ್ದೇವೆ. ಅದರ ಜೊತೆ ಪ್ರಯಾಣಿಕ ರಿಗೆ ಸೊಂಟ, ಕೈಕಾಲು ನೋವುಗಳು ಕಾಣಿಸಿಕೊಳ್ಳುತ್ತಿವೆ. ಆದುದರಿಂದ ಈ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕು".

-ಅಬ್ದುಲ್ ಖಾದರ್, ಹಿರಿಯ ರಿಕ್ಷಾ ಚಾಲಕರು

"ಈ ರಸ್ತೆ ದುರಸ್ತಿ ಮಾಡುವಂತೆ ಸಂಬಂಧ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ರಿಕ್ಷಾ, ಟ್ಯಾಕ್ಸಿ ಮಾತ್ರವಲ್ಲ ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವ ನೂರಾರು ವಾಹನಗಳಿಗೆ ಹೊಂಡ ಗುಂಡಿಗಳಿಂದ ಅನಾನುಕೂಲವಾಗಿದೆ. ಮಣಿಪಾಲ ಆಸ್ಪತ್ರೆಗೆ ಹೋಗಲು ಪ್ರತಿದಿನ ಹೃದಯ ಸಂಬಂಧಿ ರೋಗಿಗಳು ಹಾಗೂ ಗರ್ಭಿಣಿಯರು ಇದೇ ರೈಲ್ವೆ ನಿಲ್ದಾಣದಲ್ಲಿ ಬಂದು ಇಳಿಯುತ್ತಾರೆ. ಇವರು ಟ್ಯಾಕ್ಸಿ, ರಿಕ್ಷಾದಲ್ಲಿ ಪ್ರಯಾಣಿಸು ವಾಗ ನಮಗೆ ಹೆದರಿಕೆ ಆಗುತ್ತದೆ. ಒಂದು ಹೊಂಡ ತಪ್ಪಿಸಲು ಹೋಗಿ ನಾಲ್ಕು  ಹೊಂಡಕ್ಕೆ ಬೀಳುತ್ತೇವೆ.

-ವಲೇರಿಯನ್ ಡಿಸೋಜ, ಅಧ್ಯಕ್ಷರು, ಟ್ಯಾಕ್ಸಿಮೆನ್ ಚಾಲಕ ಮಾಲಕರ ಅಸೋಸಿಯೇಶನ್

Similar News