ಮುಂದಿನ ವಾರದಿಂದ ಟ್ವಿಟ್ಟರ್ ಬಳಕೆದಾರರಿಗೆ ನೀಲಿ, ಬೂದು, ಚಿನ್ನದ ಬಣ್ಣದ ಚೆಕ್ ಮಾರ್ಕ್ ಗಳ ವಿತರಣೆ

Update: 2022-11-25 17:08 GMT

ಹೊಸದಿಲ್ಲಿ,ನ.25: ಸಾಮಾಜಿಕ ಜಾಲತಾಣ ಟ್ವಿಟ್ಟರ್ (Twitter)ತನ್ನ ಬಳಕೆದಾರ ಸಂಘಟನೆಗಳು, ಸರಕಾರಗಳು ಹಾಗೂ ವ್ಯಕ್ತಿಗಳಿಗೆ ನೀಲಿ, ಬೂದು ಹಾಗೂ ಚಿನ್ನದ ಬಣ್ಣದ ಚೆಕ್ ಮಾರ್ಕ್ ಗಳನ್ನು ವಿತರಿಸಲಿದೆ.

 ಟ್ವಿಟರ್  ಚಂದಾದಾರ ಯೋಜನೆಯನ್ನು ಪಡೆದುಕೊಂಡಿರುವ ಹಲವು ಬಳಕೆದಾರರು ಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ಟ್ವಿಟ ರ್ ಖಾತೆಗಳನ್ನು ತೆರೆದು ಜನರನ್ನು ಹಾದಿತಪ್ಪಿಸುತ್ತಿರುವುದು ಬೆಳಕಿಗೆ ಬಂದ  ಬಳಿಕ  ಸಂಸ್ಥೆಯ ವರಿಷ್ಠ ಎಲಾನ್ ಮಸ್ಕ್(Elon Musk) , ಚಂದಾ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಇದೀಗ ಮುಂದಿನ ಶುಕ್ರವಾರದಿಂದ ಯೋಜನೆಯನ್ನು ಪುನರಾರಂಭಿಸುವ ಉದ್ದೇಶವನ್ನು ಹೊಂದಿದ್ದಾರೆ.

ಆ ಬಳಿಕ ಕಂಪೆನಿಗಳಿಗೆ ಚಿನ್ನದ ಬಣ್ಣ,  ಸರಕಾರಗಳಿಗೆ ಬೂದು ಬಣ್ಣ ಹಾಗೂ ಸಿಲೆಬ್ರಿಟಿಗಳು ಮತ್ತಿತರರಿಗೆ ನೀಲಿ ಬಣ್ಣದ ಚೆಕ್ ಮಾರ್ಕ್ ನೀಡಲಾಗುವುದು ಎಂದು ಮಸ್ಕ್ ಶುಕ್ರವಾರ ತಿಳಿಸಿದ್ದಾರೆ. ‘‘ದೃಢೀಕರಿಸಲ್ಪಟ್ಟ ಎಲ್ಲಾ ವ್ಯಕ್ತಿಗಳಿಗೆ ನೀಲಿ ಚೆಕ್ ಮಾರ್ಕ್ ಗಳನ್ನು ನೀಡಲಾಗವುದು. ಒಂದು ವೇಳೆ ವ್ಯಕ್ತಿಗಳು ನಿರ್ದಿಷ್ಟ ಸಂಘಟನೆಗೆ ಸೇರಿದವರಾದಲ್ಲಿ ಅವರು ಸಣ್ಣ ಗಾತ್ರದ ಲೋಗೋವನ್ನು  ಹೊಂದಬಹುದೆಂದು ಮಸ್ಕ್ ತಿಳಿಸಿದ್ದಾರೆ.

ಟ್ವಿಟ್ಟರ್ ನ  ಚಂದಾದಾರಾಗಲು ಅಮೆರಿಕದಲ್ಲಿ ಮಾಸಿಕವಾಗಿ  8 ಡಾಲರ್ ಹಾಗೂ ಭಾರತದಲ್ಲಿ 719 ರೂ. ನೀಡಬೇಕಾಗುತ್ತದೆ. ಚಂದಾದಾರರಾದ ವ್ಯಕ್ತಿಗಳಿಗೆ  ನೀಲಿ ಬಣ್ಣದ ಟಿಕ್ ಮಾರ್ಕ್ ದೊರೆಯುವುದರ ಜೊತೆಗೆ ಟ್ವಿಟ್ಟರ್ ನಲ್ಲಿ ಅವರ ಪೋಸ್ಟ್ ಗಳನ್ನು ಆದ್ಯತೆಗನುಗುಣವಾಗಿ ಪ್ರದರ್ಶಿಸಲಾಗುವುದೆಂದು ಮಸ್ಕ್ ತಿಳಿಸಿದರು.

Similar News