ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪ: ನೈಜೀರಿಯಾ ಪ್ರಜೆ, ಅಂತರರಾಜ್ಯ ಡ್ರಗ್ಸ್ ಪೆಡ್ಲರ್ಸ್ ಗಳ ಬಂಧನ

Update: 2022-11-26 04:20 GMT

ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ನೈಜೀರಿಯಾ ಪ್ರಜೆ ಸೇರಿ ಅಂತರರಾಜ್ಯ ಡ್ರಗ್ಸ್ ಪೆಡ್ಲರ್ಸ್‍ಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ಮಡಿವಾಳ ನಿವಾಸಿ ಹಫೀಝ್ ರಮ್ಲಾನ್‌ (28), ದೇವರಚಿಕ್ಕನ ಹಳ್ಳಿ ನಿವಾಸಿ ಮನ್ಸೂರ್.ಕೆ.ಕೆ (33), ದ.ಕ. ಜಿಲ್ಲೆಯ ಉಮ್ಮರ್ ಫಾರೂಕ್ (23), ಮುಂಬೈ ನಿವಾಸಿ ವೈಶಾಲಿ ದಾಸ್ (29), ಸಿಂಗನಾಯಕನಹಳ್ಳಿ ನಿವಾಸಿ ಬೆಂಜಮಿನ್ (32), ರಾಮಮೂರ್ತಿ ನಗರ ನಿವಾಸಿ ತ್ರಿವೇಣಿ (25), ನೈಜೀರಿಯಾ ಪ್ರಜೆ ಹಿಲ್ಲರಿ ಎಗ್ವೋಬಾ (39) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ 7 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ ಮತ್ತು 8 ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಫೀಝ್ ರಮ್ಲಾನ್ ಈತನ ವಿರುದ್ದ ಹೈ‌ದರಾಬಾದ್ ಮಲಕ್ ಪೇಟ್, ಮಂಗಳೂರಿನ ಪಾಂಡೇಶ್ವರ ಮತ್ತು ಸೂರತ್ಕಲ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆರೋಪಿ ಬೆಂಜಮಿನ್ ವಿರುದ್ಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ನೈಜೀರಿಯಾ ಪ್ರಜೆ ಹಿಲ್ಲರಿ ಎಗ್ವೋಬಾ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Similar News