ಭಾರತದ ಜನತೆಯಾದ ನಾವು...

Update: 2022-11-26 05:28 GMT

ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪೀಠಿಕೆಯ ಮೊದಲ ಪದಗಳು ‘‘ಭಾರತದ ಜನತೆಯಾದ ನಾವು’’-ಭಾರತದಲ್ಲಿ ಅಧಿಕಾರ ಜನರ ಕೈಯಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತವೆ. ಪೀಠಿಕೆಯು ಹೇಳುವ, ಭಾರತದ ಪ್ರತಿಯೊಬ್ಬ ನಾಗರಿಕ ಹಾಗೂ ಸರಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ.

‘‘ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ.’’

‘‘ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತವೆ.’’

ಡಾ.ಬಿ.ಆರ್. ಅಂಬೇಡ್ಕರ್ ಅವರ ಈ ಮಾತುಗಳನ್ನು ನೆನೆಯಲೇಬೇಕಾದ ದಿನವಿದು. ಯಾಕೆಂದರೆ ಈ ದಿನ ಅಂದರೆ ನವೆಂಬರ್ 26ನ್ನು ಸಂವಿಧಾನ ದಿನವೆಂದು ಆಚರಿಸುತ್ತೇವೆ. 1949ರ ನವೆಂಬರ್ 26 ಭಾರತದ ಸಂವಿಧಾನ ಅಂಗೀಕಾರವಾದ ದಿನ. ಇಂದಿಗೆ ಸರಿಯಾಗಿ 73 ವರ್ಷಗಳ ಹಿಂದೆ. ಈ ದಿನವನ್ನು ರಾಷ್ಟ್ರೀಯ ಕಾನೂನು ದಿನ ಎಂದು ಗುರುತಿಸಲಾಗುತ್ತಿತ್ತು. ಅಂಬೇಡ್ಕರ್ ಅವರ 125ನೇ ಜನ್ಮವರ್ಷ, 2015ರಿಂದ ನವೆಂಬರ್ 26ನ್ನು ಸಂವಿಧಾನ ದಿನ ಎಂದು ಘೋಷಿಸಲಾಯಿತು.

ಭಾರತ ಸಂವಿಧಾನವು ಹಲವು ದೇಶದ ಸಂವಿಧಾನದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ. ಬ್ರಿಟನ್, ಐರ್‌ಲ್ಯಾಂಡ್, ಜಪಾನ್, ಅಮೆರಿಕ, ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳ ಸಂವಿಧಾನ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ದೇಶದ ಸಂವಿಧಾನದಿಂದ ಪಡೆಯಲಾಗಿದೆ. ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದ್ದರೆ, ರಾಜ್ಯ ನಿರ್ದೇಶನ ತತ್ವಗಳು ಐರ್‌ಲ್ಯಾಂಡ್ ಸಂವಿಧಾನದವು. ಜಪಾನ್ ದೇಶದಿಂದ ಸರ್ವೋಚ್ಚ ನ್ಯಾಯಾಲಯದ ಕಾರ್ಯನಿರ್ವಹಣೆಯ ಕಾನೂನನ್ನು ಪಡೆಯಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಭಾರತದ ಸಂವಿಧಾನವು ರಚನೆಗೊಂಡದ್ದು 1947ರ ಡಿಸೆಂಬರ್ 9ರಿಂದ 1948ರ ನವೆಂಬರ್ 26ರ ಮಧ್ಯದ ಅವಧಿಯಲ್ಲಿ. ಸಂವಿಧಾನ ರಚನಾ ಸಮಿತಿಯಲ್ಲಿ 299 ಸದಸ್ಯರಿದ್ದರು. ಅವರಲ್ಲಿ 15 ಮಹಿಳಾ ಸದಸ್ಯರಿದ್ದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲ್ಪಟ್ಟ ಭಾರತದ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. 2 ವರ್ಷ 11 ತಿಂಗಳು 18 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನ ನಮ್ಮದು. ಭಾರತ ಸಂವಿಧಾನ ಅತಿದೊಡ್ಡ ಕೈಬರವಣಿಗೆಯ ರೂಪದ ಸಂವಿಧಾನವಾಗಿದ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದೆ. ಕೈಬರವಣಿಗೆಯಲ್ಲಿ ಬರೆದ ಮೂಲ ಸಂವಿಧಾನ ಪುಸ್ತಕವನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂನಿಂದ ಕೂಡಿದ ಕೇಸ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಅದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.

1945ರ ಜುಲೈ ತಿಂಗಳಿನಲ್ಲಿ ಆಗ ಭಾರತವನ್ನು ಆಳುತ್ತಿದ್ದ ಇಂಗ್ಲೆಂಡ್‌ನಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಿತ್ತು. ಆ ಸರಕಾರವು ಭಾರತದ ಸ್ವಾತಂತ್ರ್ಯ ಚಳವಳಿಯ ತೀವ್ರತೆ ಅರಿಯುವುದ ರೊಂದಿಗೆ ಭಾರತದ ಕುರಿತ ತನ್ನ ಧೋರಣೆ ಯನ್ನು ಬದಲಿಸಿಕೊಂಡಿತ್ತು. ಭಾರತಕ್ಕೆ ಪ್ರತ್ಯೇಕ ಸಂವಿಧಾನದ ಬೇಡಿಕೆ ಈಡೇರಿ ಸಲು ಬ್ರಿಟಿಷ್ ಸಂಸತ್ತಿನ ಮೂವರು ಮಂತ್ರಿಗಳ ಸಂಪುಟ ಉಪ ಸಮಿತಿಯನ್ನು ರಚಿಸಿ ಭಾರತಕ್ಕೆ ಕಳುಹಿಸಿತ್ತು. ನಂತರ ಸಂವಿಧಾನ ರಚನಾ ಕರಡು ಸಮಿತಿ ರಚಿಸಲಾಯಿತು. 1946ರ ಡಿಸೆಂಬರ್ 9ರಂದು ಸಂವಿಧಾನ ಕರಡು ರಚನಾ ಸಮಿತಿಯ ಕೆಲಸ ಶುರುವಾಗಿತ್ತಾದರೂ, 1947ರಲ್ಲಿ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸಿದಾಗ ಸಂವಿಧಾನ ರಚನಾ ಸಮಿತಿಯು ಸಂಪೂರ್ಣ ಸ್ವಾಯತ್ತತೆ ಪಡೆದುಕೊಳ್ಳುವುದರೊಂದಿಗೆ ತನ್ನ ಕೆಲಸ ಮುಂದುವರಿಸಿತು.

ಸಂವಿಧಾನ ರಚನಾ ಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರನ್ನೂ ಅದು ಒಳಗೊಂಡಿತ್ತು. ಜವಾಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಲ್ಲಿ ಪ್ರಮುಖರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು. ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆ್ಯಂಟನಿ, ಪಾರ್ಸಿ ಜನರನ್ನು ಎಚ್.ಪಿ. ಮೋದಿ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ್ದ ಹರೇಂದ್ರ ಕುಮಾರ್ ಮುಖರ್ಜಿ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಡಾ. ಬಿ.ಆರ್. ಅಂಬೇಡ್ಕರ್, ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಷಿಯವರು ಸದಸ್ಯರಾಗಿದ್ದರು. 

ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮೀ ಪಂಡಿತ್ ಅವರು ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾ ಅವರು ಸಂವಿಧಾನ ರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದರು. ನಂತರ, ಡಾ. ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್. ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ನಾವು ಆಯ್ಕೆ ಮಾಡಿಕೊಂಡಿರುವುದು ಒಕ್ಕೂಟ ವ್ಯವಸ್ಥೆಯನ್ನು. ಭಾರತದ ಸಂವಿಧಾನದ ಪೀಠಿಕೆ ಬಹಳ ಮಹತ್ವದ್ದು. ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಮಾರ್ಗಸೂಚಿಗಳನ್ನು ಎತ್ತಿ ತೋರಿಸುತ್ತದೆ. ಪೀಠಿಕೆಯ ಮೂಲಪ್ರತಿಯಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಎಂದಿತ್ತು. ಎರಡು ಹೆಚ್ಚಿನ ಪದಗಳಾದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು.

ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪೀಠಿಕೆಯ ಮೊದಲ ಪದಗಳು ‘‘ಭಾರತದ ಜನತೆಯಾದ ನಾವು’’-ಭಾರತದಲ್ಲಿ ಅಧಿಕಾರ ಜನರ ಕೈಯಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತವೆ. ಪೀಠಿಕೆಯು ಹೇಳುವ, ಭಾರತದ ಪ್ರತಿಯೊಬ್ಬ ನಾಗರಿಕ ಹಾಗೂ ಸರಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಸಾರ್ವಭೌಮ ಎಂದರೆ ಪರಮಾಧಿಕಾರ ಅಥವಾ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಅಂದರೆ ಹೊರಗಿನ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಇಲ್ಲ. ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ, ಕಾನೂನು ಸುವ್ಯವಸ್ಥೆ ಭಾರತದ ಪ್ರಜೆಗಳನ್ನು ಕಾಪಾಡುತ್ತದೆ. ಸಮಾಜವಾದಿ ಪದದ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ ಎಂಬುದು. 

ಜಾತ್ಯತೀತ ಎಂಬ ಪದದ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ಧವಾದದ್ದು. ಇಷ್ಟೆಲ್ಲ ಗರಿಮೆಯುಳ್ಳ ಸಂವಿಧಾನ ಇಂದು ಅಪಾಯದಲ್ಲಿದೆಯೇ? ಅಂಬೇಡ್ಕರರು ಅಂದೆಂದೋ ಎಚ್ಚರಿಸಿದಂತೆ ಅದರ ಮೇಲೆ ಕಾರ್ಮೋಡ ಕವಿಯುವಂಥ ಸ್ಥಿತಿಯಿದೆಯೇ? ಸಂವಿಧಾನವನ್ನೇ ಬದಲಿಸುತ್ತೇವೆ ಎಂದೆಲ್ಲ ಹೇಳುವವರ ಹುನ್ನಾರಗಳೇನು? ಅಂಥವರ ಹಿಂದಿರುವ ಬಲ ಯಾವುದು? ಇವೆಲ್ಲವೂ ಇಂದು ಕಾಡುವ ಪ್ರಶ್ನೆಗಳಾಗಿವೆ. ಇದರ ಜೊತೆಗೇ, ಸಂವಿಧಾನದ ಬಗೆಗೆ ಸಾಮಾನ್ಯ ಅರಿವು ಕೂಡ ಇಲ್ಲದ ಸ್ಥಿತಿಯೂ ನಮ್ಮನ್ನು ಬಾಧಿಸುತ್ತಿದೆ. ಸಂವಿಧಾನ ಓದು ಒಂದು ಅಭಿಯಾನದಂತೆ ಜರುಗುವುದು ಇವತ್ತಿನ ತುರ್ತಾಗಿದೆ.

Similar News