ಬೆಳ್ತಂಗಡಿ: ಮಗಳಿಗೆ ಹೊಡೆದ ಪ್ರಕರಣ; ತಂದೆಗೆ ಒಂದು ವರ್ಷ ಜೈಲು ಶಿಕ್ಷೆ

Update: 2022-11-26 13:38 GMT

ಮಂಗಳೂರು, ನ.26: ಔಷಧ ಕುಡಿಯದ ತನ್ನ ಮಗಳ ತಲೆಗೆ ಹೊಡೆದ ವ್ಯಕ್ತಿಗೆ ಮಂಗಳೂರಿನ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಜೋಯಿ ಕೆ. ಶಿಕ್ಷೆಗೊಳಗಾದ ಆರೋಪಿ.

2021ರ ಮೇ17ರಂದು ಜೋಯಿ ತನ್ನ ಮಗಳು ಔಷಧಿ ಕುಡಿಯಲಿಲ್ಲ ಎಂಬ ಕಾರಣಕ್ಕೆ ಆಕೆಯ ತಲೆಗೆ ಕೈಯಿಂದ ಹೊಡೆದಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಸೈ ಕೆ.ಚಂದ್ರಶೇಖರ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್‌ಟಿಎಸ್‌ಸಿ-1) ನ್ಯಾಯಾಧೀಶೆ ಮಂಜುಳಾ ಇಟ್ಟಿ ನ.25ರಂದು ಆರೋಪಿಗೆ ಭಾರತೀಯ ದಂಡ ಸಂಹಿತೆ 323ರಡಿ 1 ವರ್ಷ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.  

Similar News