ಅಣೆಕಟ್ಟಿಗಾಗಿ ತ್ಯಾಗ ಮಾಡಿದ್ದೆವು, ಏಕತಾ ಪ್ರತಿಮೆಗಾಗಿ ಅಲ್ಲ: ತಮ್ಮ ಭೂಮಿ ವಾಪಸ್ ಕೇಳುತ್ತಿರುವ ಆರು ಗ್ರಾಮಗಳು

Update: 2022-11-26 15:30 GMT

ಹೊಸದಿಲ್ಲಿ,ನ.26: ಗುಜರಾತಿನ ಕೆವಡಿಯಾದಲ್ಲಿ ಏಕತಾ ಪ್ರತಿಮೆಯು ನಿರ್ಮಾಣದ ಅಂತಿಮ ಹಂತದಲ್ಲಿದ್ದಾಗ, ಉದ್ಘಾಟನೆಯ ಮೊದಲಿನಿಂದಲೂ ಸುತ್ತಲಿನ ಆರು ಗ್ರಾಮಗಳ ನಿವಾಸಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ದಾರ್ ಸರೋವರ ನರ್ಮದಾ ನಿಗಮ ಲಿ.(ಎಸ್ಎಸ್ಎನ್ಎನ್ಎಲ್) ನಿಂದ ತಮ್ಮ ಜಮೀನುಗಳ ವಾಪಸ್ಗಾಗಿ ಆಗ್ರಹಿಸುತ್ತಿದ್ದಾರೆ. ಕೆವಡಿಯಾ,ವಘಾಡಿಯಾ,ಲಿಂಬಾಡಿ,ನವಗ್ರಾಮ,ಗೋರಾ ಮತ್ತು ಕೋಥಿ ಈ ಆರು ಗ್ರಾಮಗಳಾಗಿವೆ.

ತಮ್ಮ ಸ್ಥಳಾಂತರವನ್ನು ಪ್ರತಿರೋಧಿಸುತ್ತಿರುವ ಗ್ರಾಮಸ್ಥರು,1960ರ ದಶಕದಲ್ಲಿ ತಮ್ಮ ಜಮೀನುಗಳನ್ನು ಸರ್ದಾರ್ ಸರೋವರ (Radar Lake)ಅಣೆಕಟ್ಟಿಗಾಗಿ ನೀಡಿದ್ದೆವು,ಸರಕಾರವು ಯೋಜಿಸಿರುವಂತೆ ಪ್ರತಿಮೆಯ ಸುತ್ತ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅಲ್ಲ ಎಂದು ಹೇಳಿದ್ದಾರೆ. ಗ್ರಾಮಸ್ಥರ ಬೇಡಿಕೆಗಳನ್ನು ಆಳವಾಗಿ ಪರಿಶೀಲಿಸಿದರೆ ಕೇವಲ ತಮ್ಮ ಜಮೀನುಗಳನ್ನು ವಾಪಸ್ ಕೇಳುತ್ತಿರುವುದಕ್ಕಿಂತ ಅವರ ಹೋರಾಟವು ಹೆಚ್ಚು ಸಂಕೀರ್ಣವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

‘ನಮ್ಮ ಪೂರ್ವಜರು ಎಸ್ಎಸ್ಎನ್ ಯೋಜನೆಗಾಗಿ ತಮ್ಮ ಜಮೀನುಗಳು ಮತ್ತು ಮನೆಗಳನ್ನು ಬಿಟ್ಟುಕೊಟ್ಟಿದ್ದರು. ಗುಜರಾತ್ ಮಾತ್ರವಲ್ಲ,ನೆರೆಯ ರಾಜ್ಯಗಳಿಗೂ ನೀರು ದೊರೆಯುವಂತಾಗಲಿ ಎಂದು ಅವರು ಬಯಸಿದ್ದರು. ತಮ್ಮ ಜಮೀನುಗಳನ್ನು ಬಿಟ್ಟು ಕೊಟ್ಟ ನಮ್ಮ ಜನರು ಆ ಬಗ್ಗೆ ಹೆಮ್ಮೆಯನ್ನು ಹೊಂದಿದ್ದಾರೆ. ನಮ್ಮ ಜನರು ತಮ್ಮ ಜಮೀನುಗಳನ್ನು ನೀಡಿದ ಬಳಿಕ ಗುಜರಾತ್ ಅಭಿವೃದ್ಧಿಗೊಂಡಿದೆ. ಆದರೆ ಮುಳುಗಡೆಯಾಗಿರದ ಜಮೀನುಗಳನ್ನು ನಾವು ಮರಳಿ ಕೇಳುತ್ತಿದ್ದೇವೆ. ಈ ಜಮೀನುಗಳನ್ನು 1961ರಲ್ಲಿ ಸರ್ದಾರ್ ಸರೋವರ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ವಾಸ್ತವದಲ್ಲಿ 60 ವರ್ಷಗಳ ಬಳಿಕ ಈಗ ಅವರು ಭೂಸ್ವಾಧೀನವನ್ನು ಆರಂಭಿಸಿದ್ದಾರೆ. ‌

ಅವರಿಗೆ ಈಗ ಈ ಜಮೀನುಗಳು ಏಕತಾ ಪ್ರತಿಮೆಗಾಗಿ ಮತ್ತು ಸಂದರ್ಶಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಬೇಕಾಗಿವೆ. ನಾವೇಕೆ ಮತ್ತೆ ತ್ಯಾಗ ಮಾಡಬೇಕು? ಗುಜರಾತಿಗೆ ನೀರು ಸಿಗುವಂತಾಗಲು ಸಂತೋಷದಿಂದಲೇ ನಮ್ಮ ಜಮೀನುಗಳನ್ನು ನೀಡಿದ್ದೆವು. ಆದರೆ ಎರಡೆರಡು ಸಲ ನಾವೇಕೆ ತ್ಯಾಗ ಮಾಡಬೇಕು ’ಎಂದು ಸುದ್ದಿಗಾರರನ್ನು ಭೇಟಿಯಾದ ಆಶಿಷ್ ಪ್ರಶ್ನಿಸಿದರು. ತನ್ನ ಗ್ರಾಮದಲ್ಲಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕೆಲಸದಿಂದ ಕಿತ್ತು ಹಾಕಲಾಗಿದೆ.

ಹಲವರು ಸರ್ದಾರ್ ಸರೋವರ ಯೋಜನೆಗಾಗಿ ತಮ್ಮ ಎಕರೆಗಟ್ಟಲೆ ಭೂಮಿಯನ್ನು ಕಳೆದುಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿನಲ್ಲಿ ಹೋಟೆಲ್ಗಳು,ರಸ್ತೆಗಳು ನಿರ್ಮಾಣಗೊಂಡಿವೆ. ಹಲವರಿಗೆ ಪರಿಹಾರವನ್ನೂ ನೀಡಲಾಗಿಲ್ಲ. ಈಗ ತಾವು ತಲಾಂತರಗಳಿಂದಲೂ ವಾಸವಾಗಿರುವ ಮನೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.

ಗ್ರಾಮಸ್ಥರ ಪ್ರತಿಭಟನೆ ಹಲವಾರು ಕಾನೂನು ಸಮರಗಳನ್ನು ಕಂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ಆರು ಗ್ರಾಮಗಳ ಜಮೀನುಗಳನ್ನು ಸ್ವಾಧೀನ ಪಡಿಸಬಾರದು ಎಂದು ಆಗ್ರಹಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಗುಜರಾತ ಉಚ್ಚ ನ್ಯಾಯಾಲಯವು 2020ರಲ್ಲಿ ವಜಾಗೊಳಿಸಿತ್ತು. ಈಗ ಆಶಿಷ್ ಮತ್ತು ಈ ಗ್ರಾಮಗಳ ಇತರ ಯುವಜನರು ಏಕತಾ ಪ್ರತಿಮೆ ಕಾಯ್ದೆಯನ್ನು ಪ್ರಶ್ನಿಸಿ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

ಸುದ್ದಿಕೃಪೆ: thequint.com

Similar News