ಚಿಲುಮೆ ಸಂಸ್ಥೆ ಹಗರಣ: ನಾಲ್ವರು ಆರ್‌ಒಗಳ ಬಂಧನ

Update: 2022-11-26 16:10 GMT

ಬೆಂಗಳೂರು, ನ. 26: ‘ಚಿಲುಮೆ’ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಿದ ಆರೋಪದಡಿ ಬಿಬಿಎಂಪಿಯ ಮೂವರು ಕಂದಾಯ ಅಧಿಕಾರಿ ಹಾಗೂ ಒಬ್ಬರು ಉಪ ಕಂದಾಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಿಲುಮೆ ಸಂಸ್ಥೆಯ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಡಿ ಅಮಾನತುಗೊಂಡಿದ್ದ ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹ್ಮದ್, ಮಹದೇವಪುರದ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್, ಆರ್‍ಆರ್‍ನಗರದ ಕಂದಾಯ ಅಧಿಕಾರಿ ಮಹೇಶ್ ಹಾಗೂ ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾಶಂಕರ್ ಅವರನ್ನು ಬಂಧಿಸಲಾಗಿದ್ದು, ಇವರು ಮತದಾರರ  ನೋಂದಣಾಧಿ ಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ನ.21ರಂದು ಈ ಮೂವರು ಅಧಿಕಾರಿಗಳನ್ನು ಬಿಬಿಎಂಪಿ ಅಮಾನತು ಮಾಡಿತ್ತು. ಅಲ್ಲದೆ, ಇಲ್ಲಿನ ಶಿವಾಜಿನಗರ ಕ್ಷೇತ್ರದಲ್ಲಿ ಚಿಲುಮೆಪ್ರತಿನಿಧಿಗಳ ಮನವಿ ಮೇರೆಗೆ ಆರೋಪಿ ಚಂದ್ರಶೇಖರ್‍ಗೆ 14 ಮತಗಟ್ಟೆ ಮಟ್ಟದ ಸಂಯೋಜಕ (ಬಿಎಲ್‍ಸಿ) ಗುರುತಿನ ಚೀಟಿಗಳನ್ನು ಸುಹೇಲ್ ವಿತರಿಸಿದ ಗಂಭೀರ ಆರೋಪವಿದೆ.

ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲೂ ಕೆ.ಚಂದ್ರಶೇಖರ್ ಅವರು ಚಿಲುಮೆ ಸಂಸ್ಥೆಯ ಲೋಕೇಶ್ ಕೆ.ಎಂ. ಎಂಬಾತನಿಗೆ ಮತದಾರರ ನೋಂದಣಾಧಿಕಾರಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‍ಒ) ಗುರುತಿನ ಚೀಟಿ ನೀಡಿದ್ದಾರೆ. ಇನ್ನೂ, ವಿ.ಬಿ.ಭೀಮಾಶಂಕರ್ ಸಹ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರ ಹಾಗೂ ಮಹೇಶ್ ಆರ್ ಆರ್ ನಗರದ ವಿಧಾನಸಭೆ ಕ್ಷೇತ್ರದಲ್ಲಿ ಚಿಲುಮೆ ಸಂಸ್ಥೆಯ ಪ್ರತಿನಿಧಿಗಳಿಗೆ ಬಿಎಲ್‍ಸಿ ಗುರುತಿನ ಚೀಟಿ ನೀಡಿರುವ ಪುರಾವೆ ಸಿಕ್ಕಿತ್ತು ಎನ್ನಲಾಗಿದೆ.

ಸದ್ಯ ಈ ನಾಲ್ವರನ್ನು ಬಂಧಿಸಿರುವ ತನಿಖಾ ತಂಡ, ಚುನಾವಣೆ ಆಯೋಗದ ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ಗುರುತಿನ ಚೀಟಿ ವಿತರಿಸಿರುವ ಕುರಿತು ವಿಚಾರಣೆಗೊಳಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಐಎಎಸ್‍ಗಳ ವಿಚಾರಣೆ..!:

ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಹಗರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಅಮಾನತುಗೊಂಡಿರುವ ಇಬ್ಬರ ಐಎಎಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ರಾಜ್ಯ ಸರಕಾರ ಸಮ್ಮತಿ ಸೂಚಿಸಿದೆ.

ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಉಸ್ತುವರಿಯೂವಹಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ ಅವರನ್ನು ಅಮಾನತಿಗೆ ಕೇಂದ್ರ ಚುನಾವಣೆ ಆಯೋಗ ನಿನ್ನೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಅದರಂತೆ, ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ವಿಚಾರಣೆ ಜರುಗಲಿದೆ ಎಂದು ಆಯೋಗಕ್ಕೆ ತಿಳಿಸಿದೆ.

► ಮತದಾರರ ಹೆಸರು ಮಾಯ..!:

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಚಿಲುಮೆ ಸಂಸ್ಥೆಯ ಸಿಬ್ಬಂದಿ ಬರೀ ಒಂದೇ ತಿಂಗಳಿನಲ್ಲಿ 1.50 ಲಕ್ಷಕ್ಕೂ ಅಧಿಕ ಮತದಾರರ ಹೆಸರನ್ನು ರದ್ದು ಮಾಡಿದ್ದರು ಎನ್ನುವ ಮಾಹಿತಿ ಗೊತ್ತಾಗಿದ್ದು, ಇದಕ್ಕೆ ಸ್ಥಳೀಯ ಅಧಿಕಾರಿಗಳು ಸಹಕಾರ ನೀಡಿರುವ ದೂರು ಕೇಳಿಬಂದಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡದೆ, ಕಡತಗಳನ್ನು ಒಂದು ಕೊಠಡಿಯಲ್ಲಿ ಇರಿಸಿಕೊಂಡು, ಆನ್‍ಲೈನ್‍ನಲ್ಲಿಯೇ ಹಲವರು ಹೆಸರುಗಳನ್ನು ಏಕಾಏಕಿ ರದ್ದು ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲು ಬಿಬಿಎಂಪಿ ಅಧಿಕಾರಿಗಳು ಚಿಲುಮೆ ಸಂಸ್ಥೆಯಿಂದ ಲಕ್ಷಾಂತರ ಹಣ ಪಡೆದಿರುವ ಆರೋಪ ಕೇಳಿಬಂದಿದೆ. ಹಣ ಪಾವತಿ ಮಾಡಿದ ಮೇಲೆಯೇ ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Similar News