ಮಂಗಳೂರು: ರಾಜ್ಯದ 15ಕ್ಕೂ ಅನಧಿಕೃತ ಟೋಲ್‌ಗೇಟ್ ತೆರವಿಗೆ ಸಿಪಿಎಂ ಒತ್ತಾಯ

Update: 2022-11-26 15:13 GMT

ಮಂಗಳೂರು, ನ.26: ಸುರತ್ಕಲ್‌ನ ಅಕ್ರಮ ಟೋಲ್ ಸಂಗ್ರಹದ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲೆಯ ನಾಗರಿಕರು, ಹೋರಾಟ ಸಮಿತಿಯು ನಡೆಸಿದ ಆಹೋರಾತ್ರಿ ಧರಣಿಗೆ ಫಲಸಿಕ್ಕಿದೆ. ರಾಜ್ಯದಲ್ಲಿ ಇನ್ನೂ ಇಂತಹ 15ಕ್ಕೂ ಅಧಿಕ ಅನಧಿಕೃತ ಟೋಲ್‌ಗೇಟ್‌ಗಳಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದ್ದಾರೆ.

ನಗರದ ವಿಕಾಸ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 6 ವರ್ಷಗಳಿಂದ ನಡೆದ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಲು ನಿರ್ಧರಿಸಿದೆ. ಇದು ಜನತೆಯ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುರತ್ಕಲ್ ಟೋಲ್‌ಗೇಟ್‌ ನಲ್ಲಿ ಶುಲ್ಕ ಸಂಗ್ರಹವನ್ನು ನಿಲ್ಲಿಸುವ ಬದಲು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ಸೇರಿಸಿ ಶುಲ್ಕ  ಸಂಗ್ರಹಿಸಲು ಮುಂದಾಗಿರುವುದು ಖಂಡನೀಯ. ರಾಜ್ಯದಲ್ಲಿರುವ 15ಕ್ಕೂ ಅಕ್ರಮ ಟೋಲ್ ಸಂಗ್ರಹ ಕೇಂದ್ರಗಳ ಮೂಲಕ ರಾಜ್ಯದ ಜನತೆಯ ಲೂಟಿ ಮುಂದುವರಿಸಲಾಗಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೇಳಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದ ಬಗ್ಗೆ  ನಿಷ್ಪಕ್ಷಪಾತ ತನಿಖೆ ನಡೆಸಬೇಕು.ಅಲ್ಲದೆ ನಿಜಾಂಶ ಏನು ಎಂಬುದರ ಬಗ್ಗೆ ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದ ಬಸವರಾಜ್, ಕಳೆದ ಚುನಾವಣೆಯಲ್ಲಿ ಅಧಿಕಾರ ನಡೆಸಲು ಅರ್ಹತೆ ಇಲ್ಲದಿದ್ದರೂ ಕೂಡ ಆಪರೇಶನ್ ಕಮಲದ ಮೂಲಕ ಆಡಳಿತಕ್ಕೆ ಬಂದ ಬಿಜೆಪಿಯು ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೋಮು ಮತ್ತು ಜಾತಿ ಶಕ್ತಿಗಳಿಗೆ ಮಣಿದು ಆಡಳಿತ ನಡೆಸುತ್ತಿದೆ.ದ.ಕ.ಜಿಲ್ಲೆಯಲ್ಲೇ ನಡೆದ ಮೂರು ಕೊಲೆ ಪ್ರಕರಣವನ್ನು ಸಮಾನವಾಗಿ ಕಾಣದೆ ತಾರತಮ್ಯ ಎಸಗಿದೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ರಾಜ್ಯದ ಮತದಾರರು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ರಾಜ್ಯ ಸಮಿತಿಯ ಸದಸ್ಯ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

Similar News