ಕಾನೂನುಗಳಿದ್ದರೂ ಅನುಷ್ಠಾನದಲ್ಲಿ ಶೋಷಿತರಿಗೆ ನ್ಯಾಯ ಸಿಗುತ್ತಿಲ್ಲ: ನ್ಯಾ.ವಿ.ಗೋಪಾಲಗೌಡ

Update: 2022-11-26 16:47 GMT

ಬೆಂಗಳೂರು, ನ. 26: ‘ದಲಿತರು, ಮಹಿಳೆಯ ಮೇಲಿನ ಶೋಷಣೆ, ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಕಾನೂನು ತಂದರೂ, ಅನುಷ್ಟಾನದಲ್ಲಿ ಸರಿಯಾದ ನ್ಯಾಯ ಸಿಗುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಶಾಸಕರ ಭವನ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ‘ಸಂವಿಧಾನ ಸಮರ್ಪಣಾ ದಿನ’ ಅಂಗವಾಗಿ ಏರ್ಪಡಿಸಿದ್ದ ‘ಸಂವಿಧಾನದ ಆಶಯಗಳು ಇದುವರೆಗೂ ಈಡೇರಲಿಲ್ಲ ಯಾಕೆ?’ ವಿಷಯದ ಕುರಿತು ಮಾತನಾಡಿದ ಅವರು, ‘ಸಂವಿಧಾನ ಬಂದು 73 ವರ್ಷ ಕಳೆದರೂ ದಲಿತರು, ಮಹಿಳೆಯರು, ಹಿಂದುಳಿದವರು ಆರ್ಥಿಕ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಇದೆ. ಆದರೆ, ಸಮಾಜದಲ್ಲಿ ಪ್ರಜಾಸತ್ತಾತ್ಮಕ ನ್ಯಾಯಕ್ಕೆ ಕಡಿವಾಣ ಬಿದ್ದಿದೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಅಸಮಾನತೆ ಎದ್ದು ಕಾಣುತ್ತಿದೆ. ಆದುದರಿಂದ ಸಂವಿಧಾನ ದಿನಾಚರಣೆಯು ಒಂದು ದಿನಕ್ಕೆ ಮಾತ್ರ ಸೀಮಿತವಾದೆ, ಪ್ರತಿದಿನವೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲು ಯಾವ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಸವಾಲನ್ನು ಎದುರಿಸಲು ಉತ್ಸಾಹಿಗಳು ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು.

ಪ್ರತಿಯೊಬ್ಬರೂ ಸಂವಿಧಾನ ಪೀಠಿಕೆಯನ್ನು ಅರ್ಥೈಸಿಕೊಂಡು, ದೈನಂದಿನ ಚಟುವಟಿಕೆಗಳಲ್ಲಿಯೂ ಕಡ್ಡಾಯವಾಗಿ ಅನುಸರಿಸಬೇಕು. ಆಗ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳು ಸಿಗದೇ ಇರುವವರು ಜನನಾಯಕರನ್ನು ಪ್ರಶ್ನಿಸುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಇಂದು ಎಲ್ಲ ಕ್ಷೇತ್ರವೂ ಖಾಸಗೀಕರಣಗೊಂಡಿದೆ. ಇದರಿಂದಾಗಿ ಮೀಸಲಾತಿಯಡಿ ಓದುವಂತಹ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಖಾಸಗಿ ಶಾಲಾ-ಕಾಲೇಜುಗಳಲ್ಲಿಯೂ ಮೀಸಲಾತಿ ನೀಡಬೇಕು ಎಂಬುದು ನನ್ನ ವಾದ. ಇಲ್ಲದಿದ್ದರೆ ಸಮಾಜದಲ್ಲಿನ ಬಲಿಷ್ಠರಿಗೆ ಮಾತ್ರ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೀಸಲಾತಿ ಪಡೆದುಕೊಳ್ಳುತ್ತಾರೆ. ದೀನ-ದಲಿತರು ಹಾಗೆಯೇ ಇರುತ್ತಾರೆ ಎಂದು ವಾದಿಸಿದರು.

ಪ್ರಗತಿಪರ ಚಿಂತಕ ಎಸ್.ಆರ್ ಹಿರೇಮಠ್ ಮಾತನಾಡಿ, ಸಂವಿಧಾನ ಸಾರ್ವಕಾಲಿಕ ಶ್ರೇಷ್ಠವಾದುದು. ಸಂವಿಧಾನದ ಮೌಲ್ಯಗಳಲ್ಲಿ ಸಮಾನತೆ, ನ್ಯಾಯ, ಸಹೋದರತೆ ಅಡಗಿದೆ. ಬುದ್ದ, ಬಸವ, ಅಂಬೇಡ್ಕರ್ ನಮ್ಮೊಳಗೆ ಹೋರಾಟದ ಶಕ್ತಿಯನ್ನು ತುಂಬಿ ಹೋಗಿದ್ದಾರೆ. ಅದರಂತೆ ನಾವು ನ್ಯಾಯಕ್ಕಾಗಿ, ಸಮಾನತೆಗಾಗಿ ಸಂವಿಧಾನ ಬದ್ಧವಾಗಿ ಹೋರಾಡಬೇಕು ಎಂದರು.

ಅಂಬೇಡ್ಕರ್ ಕುಟುಂಬದ ಸದಸ್ಯ ಆನಂದ ತೇಲ್ತುಂಬ್ಡೆ ಸೇರಿದಂತೆ ಉತ್ಕøಷ್ಟ ವ್ಯಕ್ತಿಗಳನ್ನು ಈ ದೇಶದಲ್ಲಿ ಜೈಲಿಗೆ ಕಳುಹಿಸಲಾಗುತ್ತದೆ. ಸಾಂವಿಧಾನಿಕವಾಗಿ ಸರಕಾರದ ಲೋಪದೋಷಗಳನ್ನು ವಿರೋಧಿಸುವವರು ದೇಶದ್ರೋಹಿಗಳಂತೆ ಕಾಣಿಸುತ್ತಾರೆ. ಜನರ ದಿಕ್ಕು ತಪ್ಪಿಸುವ ಮೋದಿ ಮತ್ತು ಅಮಿತ್ ಶಾ ಅವರಂತವರು ದೇಶವನ್ನು ಆಳಿ ಅಡಮಾನ ಇಡಲು ನಿಂತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಮಾತನಾಡಿ, ‘ಅಂಬೇಡ್ಕರ್ ಅವರ ಆಶಯಗಳು ಇಂದಿಗೂ ಜಾರಿಯಾಗಿಲ್ಲ. ಸರಕಾರಗಳು ಸಂವಿಧಾನವನ್ನು ಅವರ ಇಚ್ಛೆಯಂತೆ ತಿದ್ದುಪಡಿ ಮಾಡಿ ಮೂಲ ಸಂವಿಧಾನ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಸಂವಿಧಾನದ ವಾರಸುದಾರರಾಗಿರುವ ನಾವು ಬದಲಾಯಿಸಲು ಬಿಡುವುದಿಲ್ಲ. ದೇಶದ ಎಲ್ಲ ಸಮಸ್ಯೆಗಳಿಗೆ ಸಂವಿಧಾನವೇ ಉತ್ತರ. ಆದ್ದರಿಂದ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿ ಅಂಬೇಡ್ಕರ್ ಆಶಯಗಳನ್ನು ಉಳಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ಒಕ್ಕೂಟದ ಆರ್.ಎಂ.ಎನ್ ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News