ಫಿಫಾ ವಿಶ್ವಕಪ್: ಅರ್ಜೆಂಟೀನಾ ಗೆಲುವಿನಲ್ಲಿ ಮಿಂಚಿದ ಮೆಸ್ಸಿ; 16ರ ಘಟ್ಟದ ಆಸೆ ಜೀವಂತ

Update: 2022-11-27 02:02 GMT

ಹೊಸದಿಲ್ಲಿ: ಕತರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup 2022) ಪಂದ್ಯಾವಳಿಯ ಸಿ ಗುಂಪಿನ ಪಂದ್ಯದಲ್ಲಿ ರವಿವಾರ ಮೆಕ್ಸಿಕೊ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ತಂಡ, ಹದಿನಾರರ ಘಟ್ಟ ತಲುಪುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ಟೂರ್ನಿ ಆರಂಭಕ್ಕೆ ಮುನ್ನ ಫೇವರಿಟ್ ತಂಡ ಎನಿಸಿದ್ದ ಅರ್ಜೆಂಟೀನಾ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲಿನ ಆಘಾತ ಕಂಡಿತ್ತು. ಮೆಕ್ಸಿಕೋ ವಿರುದ್ಧದ ಈ ಪಂದ್ಯ ಸೋತರಂತೂ ತನ್ನ ವಿಶ್ವಕಪ್ ಅಭಿಯಾನ ಮುಗಿದಂತೆಯೇ ಎಂಬ ಎಚ್ಚರಿಕೆಯಿಂದ  ಮೈದಾನಕ್ಕೆ ಇಳಿದ ಅರ್ಜೆಂಟೀನಾ ಅರ್ಹ ಗೆಲುವು ಸಂಪಾದಿಸಿತು. ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡದ ಪರ ಲಿಯೊನಲ್ ಮೆಸ್ಸಿ ಹಾಗೂ ಎಂಝೋ ಫೆರ್ನಾಂಡಿಸ್ ಗೋಲು ಗಳಿಸಿದರು.

ಆದರೆ ಪಂದ್ಯದ ಮೊದಲಾರ್ಧ 0-0 ಗೋಲುಗಳಿಂದ ಸಮಬಲ ಇದ್ದ ಹಂತದಲ್ಲಿ ಅರ್ಜೆಂಟೀನಾ ಒತ್ತಡಕ್ಕೆ ಸಿಲುಕಿತ್ತು. ಆದರೆ ಪಂದ್ಯದ ಎರಡನೇ ಅವಧಿಯಲ್ಲಿ ಮೆಸ್ಸಿ ನಾಯಕತ್ವದ ತಂಡ ಭಿನ್ನ ಆಟ ಪ್ರದರ್ಶಿಸಿತು. 64ನೇ ನಿಮಿಷದಲ್ಲಿ ನಾಯಕ ಅಧಿಕಾರಯುಕ್ತ ಗೋಲು ಗಳಿಸುವ ಮೂಲಕ ತಂಡದ ಮುನ್ನಡೆಗೆ ಕಾರಣರಾದರು. ಅದಾದ ಬಳಿಕ ದಕ್ಷಿಣ ಅಮೆರಿಕದ ತಂಡ ಮೆಕ್ಸಿಕೊದ ರಕ್ಷಣಾ ಕೋಟೆಯನ್ನು ಭೇದಿಸಿ ಎರಡನೇ ಗೋಲು ಗಳಿಸಲು ನಿರಂತರ ಪ್ರಯತ್ನ ನಡೆಸಿತು. ಅರ್ಜೆಂಟೀನಾ ಆಟಗಾರರ ಪ್ರಯತ್ನ ಕೊನೆಗೂ ಫಲ ನೀಡಿತು. ಬದಲಿ ಆಟಗಾರ ಫೆರ್ನಾಂಡಿಸ್ 87ನೇ ನಿಮಿಷದಲ್ಲಿ ಆಕರ್ಷಕ ಕರ್ಲಿಂಗ್ ಶಾಟ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು.

ಇದೀಗ ಮೂರು ಅಂಕಗಳನ್ನು ಹೊಂದಿರುವ ಅರ್ಜೆಂಟೀನಾ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಪ್ರಿಕ್ವಾರ್ಟರ್ ಹಂತ ತಲುಪುವ ಕನಸು ಜೀವಂತವಿದೆ. ಸೌದಿ ಅರೇಬಿಯಾ ಕೂಡಾ ಇಷ್ಟೇ ಅಂಕ ಪಡೆದಿದ್ದರೂ ಗೋಲುಗಳ ಅಂತರದಲ್ಲಿ ಅರ್ಜೆಂಟೀನಾ ಮುಂದಿದೆ. ಎರಡನೇ ಸುತ್ತಿನ ಪಂದ್ಯಗಳ ಬಳಿಕ ಪೋಲಂಡ್ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಮೆಕ್ಸಿಕೊ ಒಂದು ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿದೆ.

Similar News