ಉದಾರತೆಯೇ ಎಂಸಿಸಿ ಬ್ಯಾಂಕ್‌ನ ಮುಖ್ಯ ಧ್ಯೇಯ: ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ದಾನ

ಮಂಗಳೂರು ಕಥೋಲಿಕ್ ಕೋ-ಅಪರೇಟಿವ್ ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಸಮಾರಂಭ

Update: 2022-11-27 14:49 GMT

ಮಂಗಳೂರು, ನ.27: ಸಮುದಾಯದ ಹಿರಿಯರು 110 ವರ್ಷಗಳ ಹಿಂದೆ ಸ್ಥಾಪಿಸಿದ ಎಂಸಿಸಿ ಬ್ಯಾಂಕ್ ಈಗ ಕೇವಲ ಸಮುದಾಯದ ಬ್ಯಾಂಕ್ ಆಗಿ ಉಳಿದಿಲ್ಲ. ಸಮಾಜದ ಬ್ಯಾಂಕ್ ಆಗಿ ಮುನ್ನಡೆಯುತ್ತಿದೆ. ಇದಕ್ಕೆ ಬ್ಯಾಂಕ್‌ನ ಉದಾರತೆಯೇ ಮುಖ್ಯ ಕಾರಣವಾಗಿದೆ. ಆ ಧ್ಯೇಯದಿಂದ ಮುನ್ನುಗ್ಗಿದುದರ ಫಲವಾಗಿ ಇಂದು ಬ್ಯಾಂಕ್ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಮಂಗಳೂರು ಬಿಷಪ್ ಅ. ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಹೇಳಿದರು.

ನಗರದ ಮಿಲಾಗ್ರಿಸ್ ಕಾಲೇಜಿನ ಮೈದಾನದಲ್ಲಿ ರವಿವಾರ ನಡೆದ ಮಂಗಳೂರು ಕಥೋಲಿಕ್ ಕೋ-ಅಪರೇಟಿವ್ (ಎಂಸಿಸಿ) ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್ ನ್ಯಾಯಯುತವಾಗಿ ಕೊಡುವುದಕ್ಕಿಂತಲೂ ಉದಾರತೆಯಿಂದ ಹೆಚ್ಚುವರಿಯಾಗಿ ಅರ್ಹರಿಗೆ ಕೊಡುವ ಮೂಲಕ ಗ್ರಾಹಕರ, ಸಮಾಜದ ಮನಗೆದ್ದಿದೆ. ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಪ್ರಯುಕ್ತ ಶನಿವಾರ ಅರ್ಹರಿಗೆ ಹಂಚಲಾದ ನೆರವು ಅದಕ್ಕೆ ಸಾಕ್ಷಿಯಾಗಿದೆ. ಈ ಬ್ಯಾಂಕ್‌ನಲ್ಲಿ ಜನಸಾಮಾನ್ಯರು ಕೂಡ ಸುಲಭವಾಗಿ ವ್ಯವಹರಿಸಲು ಸಾಧ್ಯವಿದೆ. ಅದು ಬ್ಯಾಂಕ್‌ನ ಹೆಗ್ಗಳಿಕೆಯಾಗಿದೆ ಎಂದು ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ ನುಡಿದರು.

ಅಶೀರ್ವಚನ ನೀಡಿದ ಉಡುಪಿ ಬಿಷಪ್ ಅ.ವಂ.ಜೆರಾಲ್ಡ್ ಐಸಾಕ್ ಲೋಬೊ ‘ದಕ್ಷ ಆಡಳಿತ ಮಂಡಳಿ, ಸಮರ್ಪಿತ ಮನೋಭಾವದ ಸಿಬ್ಬಂದಿ ವರ್ಗ ಮತ್ತು ಗ್ರಾಹಕರ ಸಕಾಲಿಕ ಸ್ಪಂದನದಿಂದ ಬ್ಯಾಂಕ್ ಸ್ಥಿರವಾಗಿ, ಬಲಿಷ್ಠವಾಗಿ ನಿಂತಿದೆ. ಒಳ್ಳೆಯ ಉದ್ದೇಶ, ಗುರಿ ಮುಟ್ಟಬೇಕು ಎಂಬ ಛಲವು ಬ್ಯಾಂಕ್ ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಪ್ರಗತಿಪಥದಲ್ಲಿ ಸಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಕರಾವಳಿಯ ಜೀವನಾಡಿಯಾಗಿರುವ ಈ ಬ್ಯಾಂಕ್ ಆರ್ಥಿಕವಾಗಿ ಅವಕಾಶ ವಂಚಿತರಿಗೆ ಆಶಾಕಿರಣವಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ‘ಎಂಸಿಸಿ ಬ್ಯಾಂಕ್ ಕೇವಲ ಆರ್ಥಿಕ ಸಂಸ್ಥೆಯಲ್ಲ. ಸಮಾಜದ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವ ಸಂಸ್ಥೆಯಾಗಿಯೂ ರೂಪುಗೊಂಡಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವ ಸೇವೆಗಳಿಗಿಂತಲೂ ನಮ್ಮ ಬ್ಯಾಂಕ್‌ನಲ್ಲಿ ಹೆಚ್ಚಿನ ಸೇವೆಯನ್ನು ನೀಡಲಾಗುತ್ತದೆ. 16 ಶಾಖೆಗಳ ಪೈಕಿ 14 ಹವಾನಿಯಂತ್ರಿತಗೊಂಡಿವೆ. ಎಲ್ಲವೂ ಗಣಕೀಕರಣಗೊಂಡಿವೆ. ಸಾಲ ವಸೂಲಾತಿಯಲ್ಲೂ ಪ್ರಗತಿ ಸಾಧಿಸಿದೆ ಎಂದರು.

ಮುಂದಿನ ದಿನಗಳಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಬ್ಯಾಂಕ್‌ನ ಸೇವೆಯನ್ನು ವಿಸ್ತರಿಸಲಾಗುವುದು. ಪ್ರಸಕ್ತ ಆಡಳಿತ ಮಂಡಳಿ 2018ರಲ್ಲಿ ಅಧಿಕಾರಕ್ಕೇರಿದಾಗ ವಾರ್ಷಿಕ ವಹಿವಾಟು 500 ಕೋ.ರೂ. ಇತ್ತು. ಅದೀಗ 860 ಕೋ.ರೂ.ಗೆ ಏರಿದೆ. ಮುಂದೆ ಒಂದು ಸಾವಿರ ಕೋ.ರೂ.ವಹಿವಾಟಿನ ಗುರಿ ಹಾಕಿಕೊಳ್ಳಲಾಗಿದೆ ಎಂದು ಅನಿಲ್ ಲೋಬೊ ಹೇಳಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಮಿಲಾಗ್ರಿಸ್ ಚರ್ಚ್‌ನಲ್ಲಿ ಬಲಿಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಹೊರತರಲಾದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಬ್ಯಾಂಕ್‌ನ ಮಾಜಿ ಅಧ್ಯಕ್ಷ ವೆಲೆಂಟಿನ್ ಡಿಸಿಲ್ವ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಭಗಿನಿ ಲಿಲ್ಲಿ ಫೆರ್ನಾಂಡಿಸ್, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರೂ ಡಿಸೋಜ, ಮಾರ್ಸೆಲ್ ಎಂ. ಡಿಸೋಜ, ಜೋಸೆಫ್ ಅನಿಲ್ ಪತ್ತಾವೊ, ಹೆರಾಲ್ಡ್ ಮೊಂತೇರೊ, ಎಲ್.ರೋಯ್ ಕೆ. ಕ್ರಾಸ್ಟೊ, ಜೆ.ಪಿ.ರೋಡ್ರಿಗಸ್, ಸಿ.ಜಿ.ಪಿಂಟೊ, ಡೇವಿಡ್ ಡಿಸೋಜ, ಸುಶಾಂತ್ ಸಲ್ದಾನ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಝ್, ಅಲ್ವಿನ್ ಪಿ. ಮೊಂತೇರೊ, ಮಹಾಪ್ರಬಂಧಕ ಸುನೀಲ್ ಮಿನೇಜಸ್ ಉಪಸ್ಥಿತರಿದ್ದರು.

Similar News