ಮತದಾರರ ಮಾಹಿತಿ ಕಳವು ಪ್ರಕರಣ: ನ್ಯಾಯಮೂರ್ತಿಗಳ ನೇತೃತ್ವದಲ್ಲಿಯೇ ತನಿಖೆ ನಡೆಯುವಂತೆ ಕೆಎಸ್‍ಎಲ್‍ಎಸ್‍ಎಗೆ ಮನವಿ

Update: 2022-11-27 18:08 GMT

ಬೆಂಗಳೂರು, ನ.27: ಮತದಾರರ ಮಾಹಿತಿ ಕಳವು ಮಾಡಿದ ಆರೋಪ ಎದುರಿಸುತ್ತಿರುವ ‘ಚಿಲುಮೆ’ ಸಂಸ್ಥೆ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.

ಈ ಸಂಬಂಧ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್, ಪತ್ರ ಮನವಿ ಸಲ್ಲಿಸಿದ್ದಾರೆ. ಮತದಾರರ ಖಾಸಗಿ ಮಾಹಿತಿ ಕಳವು ಮಾಡಿರುವ ಕೇಸ್‍ಗೆ ಸಂಬಂಧಿಸಿದಂತೆ ಕಾಡುಗೋಡಿ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎರಡು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಈ ಕೇಸ್‍ಗಳಲ್ಲಿ ಆಡಳಿತಾರೂಢ ಸರಕಾರದಿಂದ ಸತ್ಯಾಸತ್ಯತೆ ಹೊರಬರುವ ನಂಬಿಕೆಯಿಲ್ಲ. ಹೀಗಾಗಿ, ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿಯೇ ಈ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕೆಂದು ಕೋರಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿಯನ್ನು ಸರಕಾರ ಹಾಗೂ ಬಿಬಿಎಂಪಿ ಅಧಿಕಾರಿ ವರ್ಗದವರು ಚಿಲುಮೆ ಹೆಸರಿನ ಖಾಸಗಿ ಸಂಸ್ಥೆಗೆ ನೀಡಿದ್ದಾರೆ. ಇದು ಚುನಾವಣಾ ಆಯೋಗದ ವ್ಯಾಪ್ತಿಯೊಳಗೆ ಅಕ್ರಮವಾಗಿ ಪ್ರವೇಶಿಸಿರುವ ಮತ್ತು ನಾಗರಿಕರ ಗೋಪ್ಯ ಮಾಹಿತಿಗಳನ್ನು ಕಲೆ ಹಾಕಿರುವ ಅಪರಾಧಿಕ ಕೃತ್ಯವಾಗಿರುತ್ತದೆ. ಇದು ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡುವ ಪ್ರಯತ್ನವಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಈ ಪತ್ರ ಮನವಿಯನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯಾಗಿ ಪರಿಗಣಿಸಿ ಉಚ್ಚ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಚಿಲುಮೆ ಸಂಸ್ಥೆ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನಿನ ಚೌಕಟ್ಟಿನಡಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ. 

Similar News