ಗಡಿ ವಿವಾದ: ಮಣಿಯದ ಮಹಾರಾಷ್ಟ್ರಕ್ಕೆ ಕರ್ನಾಟಕದ ಉತ್ತರವೇನು?

Update: 2022-11-28 05:15 GMT

ಕರ್ನಾಟಕ ವಾದ

ಇದರ ನಡುವೆಯೇ, ಈ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ನಮ್ಮ ಕಡೆಯಿಂದ ಯಾವುದೇ ಹಳ್ಳಿಗಳನ್ನು ಬಿಟ್ಟುಕೊಡುವುದಿಲ್ಲ ಎಂಬುದು ಕರ್ನಾಟಕದ ವಾದ. ಗಡಿ ವಿವಾದ ಇತ್ಯರ್ಥ ಮಾಡುವ ಅಧಿಕಾರ ನ್ಯಾಯಾಲಯಕ್ಕಿಲ್ಲ, ಅದು ಇರುವುದು ಸಂಸತ್ತಿಗೆ ಮಾತ್ರ ಎಂದು ಪ್ರತಿಪಾದಿಸಿರುವ ಕರ್ನಾಟಕ ರಾಜ್ಯದ ಅರ್ಜಿಯೂ ಸುಪ್ರೀಂ ಕೋರ್ಟಿನಲ್ಲಿದೆ. ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಬಾರದು ಎಂಬುದು ಅದರಲ್ಲಿನ ವಾದ. ಸಂವಿಧಾನ ಬದ್ಧವಾಗಿ 3ನೇ ಕಲಂ ಪ್ರಕಾರ ರಾಜ್ಯ ಪುನರ್ ವಿಂಗಡಣಾ ಕಾಯ್ದೆ ರಚನೆಯಾಯಿತು. ಕಾಯ್ದೆಯ ಪ್ರಕಾರ ಆಗಿದ್ದನ್ನು ಪುನರ್ ಪರಿಶೀಲನೆ ಮಾಡಿದ ಉದಾಹರಣೆ ಇಲ್ಲ ಎಂಬುದರ ಆಧಾರದಲ್ಲಿಯೇ ವಾದ ಮಂಡಿಸಲು ಕರ್ನಾಟಕ ಈಗಲೂ ಮುಂದಾಗಿದೆ. ಕರ್ನಾಟಕದ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂಬುದು ಮಹಾರಾಷ್ಟ್ರದ ಒತ್ತಾಯವಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಗಡಿ ವಿವಾದಕ್ಕೆ ಕೊನೆಯೇ ಇಲ್ಲವೇನೊ ಎನ್ನುವಂತಾಗಿದೆ. ಮಹಾಜನ್ ವರದಿಯನ್ನು ಒಪ್ಪಿಕೊಂಡಾಗಲೇ ಗಡಿ ವಿವಾದ ಮುಗಿದಿದೆ ಎಂದು ಕರ್ನಾಟಕ ಭಾವಿಸಿದ್ದರೆ, ಮಹಾರಾಷ್ಟ್ರ ಮಾತ್ರ ಗಡಿ ತಗಾದೆಯನ್ನು ತೆಗೆಯುತ್ತಲೇ ಇದೆ. ಪ್ರಚೋದಿಸುವ ಹೇಳಿಕೆಗಳು ಮತ್ತು ನಡೆಗಳನ್ನು ಮಹಾರಾಷ್ಟ್ರ ನಿಲ್ಲಿಸುತ್ತಲೇ ಇಲ್ಲ. ಇದರ ವಿರುದ್ಧ ಕರ್ನಾಟಕ ನಿಜವಾಗಿಯೂ ಏನು ಮಾಡಬೇಕಿದೆ?

ಆರೂವರೆ ದಶಕಗಳಿಂದಲೂ ನಡೆದು ಬಂದಿರುವ ಗಡಿ ವಿವಾದ ಈ ಎರಡೂ ರಾಜ್ಯಗಳ ನಡುವಿನದ್ದು. ಕನ್ನಡ ನೆಲದ
ವಿಚಾರದಲ್ಲಿನ ಮರಾಠಿಗರ ಭೌಗೋಳಿಕ ಮತ್ತು ಭಾಷಿಕ ಕಿರಿಕ್ ಮತ್ತೆ ಮತ್ತೆ ತಲೆದೋರುತ್ತಲೇ ಇರುತ್ತದೆ ಎಲ್ಲವೂ ಸರಿಯಿದೆ ಎಂದು ಕೊಳ್ಳುವಾಗಲೇ ಕರ್ನಾಟಕ
ದೊಳಗಿನ ಮರಾಠಿ ಭಾಷಿಕರನ್ನೂ ತನ್ನ ಗಡಿಯೊಳಗಿನ ಕನ್ನಡಿಗರನ್ನೂ ಕೆರಳಿಸುವ ಕೆಲಸವನ್ನು ಮಹಾರಾಷ್ಟ್ರ ಮಾಡುತ್ತಲೇ ಇರುತ್ತದೆ. ಇದಕ್ಕೆ ಹೊಸ ಸೇರ್ಪಡೆ ಯೆಂದರೆ ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆೆ ನೀಡಿರುವ ಹೇಳಿಕೆ.

ಮಹಾರಾಷ್ಟ್ರಕ್ಕೆ ಸೇರಬೇಕಾಗಿರುವ ಕರ್ನಾಟಕದೊಳಗಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಯೋಜನೆ ಹಾಗೂ ಈ ಪ್ರದೇಶಗಳ ನಿವಾಸಿಗಳಿಗೆ ಮಹಾತ್ಮಾ ಫುಲೆ ಜನಾರೋಗ್ಯ ಯೋಜನೆ ಜಾರಿಗೊಳಿಸಲಾಗುವುದು ಎಂದು ಶಿಂದೆ ಹೇಳಿದರೆ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಕೂಡ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಷ್ಟೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಇಬ್ಬರೂ ನಾಯಕರ ಈ ಹೇಳಿಕೆಗಳಿಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ: ಮಹಾರಾಷ್ಟ್ರದಲ್ಲಿನ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರರಿಗೆ ಕರ್ನಾಟಕ ಸರಕಾರ ಪಿಂಚಣಿ ನೀಡಲಿದೆ ಎಂದು, ಶಿಂದೆ ಪ್ರಸ್ತಾಪಕ್ಕೆ ತಿರುಗೇಟು ಕೊಟ್ಟಿರುವ ಅವರು, ಫಡ್ನವೀಸ್ ಅವರಿಗೂ ಪ್ರತಿಕ್ರಿಯಿಸಿ, ನಿಮ್ಮ ಕನಸೆಂದೂ ನನಸಾಗದು. ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರಕಾರ ಕಟಿಬದ್ಧ ವಾಗಿದೆ ಎಂದಿದ್ದಾರೆ.

ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಾರಂಭ ವಾಗಿದ್ದು 1953ರಲ್ಲಿ. ಆಗ ಕೇಂದ್ರ ಸರಕಾರ ರಚಿಸಿದ್ದ ಎರಡೂ ಸಮಿತಿಗಳ ವರದಿಗಳೂ ಕನ್ನಡಿಗರ ಪರವೇ ಇವೆ. ಭಾಷಾವಾರು ಪ್ರಾಂತ ರಚನೆಗೆ 1953ರಲ್ಲಿ ಫಝಲ್ ಅಲಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆಯಾಯಿತು. ಈ ಸಮಿತಿ ನೀಡಿದ ವರದಿಯ ಪ್ರಕಾರ, ಬೆಳಗಾವಿಯೂ ಸೇರಿ ಮುಂಬೈ ಪ್ರಾಂತದಲ್ಲಿದ್ದ 865 ಗ್ರಾಮಗಳು ಆಗಿನ ಮೈಸೂರು ರಾಜ್ಯಕ್ಕೆ ಸೇರಿದವು. 1956ರಲ್ಲಿ ರಾಜ್ಯಗಳ ಪುನರ್‌ವಿಂಗಡಣೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು. ಆದರೆ, ಇದನ್ನು ಮಹಾರಾಷ್ಟ್ರ ಸರಕಾರ ವಿರೋಧಿಸಿತು. ಹೀಗಾಗಿ ಬೆಳಗಾವಿ ಗಡಿ ವಿವಾದ 1956ರಿಂದಲೇ ಆರಂಭಗೊಂಡಿತು.

ಮಹಾರಾಷ್ಟ್ರ ಸರಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರಕಾರ ನ್ಯಾ. ಮೆಹರ್‌ಚಂದ್ ಮಹಾಜನ್ ಅವರ ನೇತೃತ್ವದ ಆಯೋಗವನ್ನು ರಚಿಸಿತು. ಮಹಾಜನ್ ಆಯೋಗದಲ್ಲಿ ಇಬ್ಬರು ಕನ್ನಡಿಗರು ಮತ್ತು ಇಬ್ಬರು ಮರಾಠಿಗರು ಇದ್ದರು. ಗಡಿಭಾಗದ ಎಲ್ಲ ಊರುಗಳಲ್ಲೂ ಆಯೋಗವು ಜನಾಭಿಪ್ರಾಯ ಸಂಗ್ರಹಿಸಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ವಾದಗಳನ್ನು ಆಲಿಸಿ, ಗಡಿ ಪ್ರದೇಶದ 2,572 ಜನರನ್ನು ಸಂದರ್ಶಿಸಿ ಅವರಿಂದ ಮನವಿ ಪತ್ರಗಳನ್ನು ಸ್ವೀಕರಿಸಿ ತನ್ನ ತೀರ್ಪನ್ನು ಪ್ರಕಟಿಸಿತು. ಬೆಳಗಾವಿಯಲ್ಲಿನ ಪ್ರದೇಶಗಳೂ ಸೇರಿ 865 ಗ್ರಾಮಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ್ ಸಮಿತಿ ವರದಿ ಸಲ್ಲಿಸಿತು.

ಮಹಾರಾಷ್ಟ್ರ ಸರಕಾರ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 1956ರ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯನ್ನು ಅದು ಪ್ರಶ್ನಿಸಿದೆ. ಆದರೆ ಗಡಿ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ  ತೆಗೆದುಕೊಳ್ಳಬೇಕೇ ಬೇಡವೇ ಎಂಬ ಪ್ರಶ್ನೆಯೊಂದು ತಲೆಯೆತ್ತಿರು ವುದೂ ಹೌದು. ಈ ಪ್ರಶ್ನೆ ಎದ್ದಿದ್ದೂ ಕೂಡ 2004ಕ್ಕೂ ಮೊದಲೇ. ಗಡಿ ವಿವಾದ ಸಂಬಂಧ ರಾಜ್ಯಗಳ ಅರ್ಜಿಗಳನ್ನು ಒಪ್ಪಿಕೊಳ್ಳಲು ಅವಕಾಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ 2004ಕ್ಕೂ ಮುನ್ನವೇ ನಿವೃತ್ತ ನ್ಯಾ.ವೈ.ವಿ. ಚಂದ್ರಚೂಡ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಸಂವಿಧಾನದ ಆರ್ಟಿಕಲ್ 131ರ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ವಿಷಯವನ್ನು ಬೇಕಾದರೂ ಪ್ರಶ್ನಿಸಬಹುದು ಎಂದು ವರದಿ ನೀಡಿತ್ತು. ಮಹಾರಾಷ್ಟ್ರ 2004ರಲ್ಲಿ ಅರ್ಜಿ ಸಲ್ಲಿಸಿದ್ದು ಈ ಶಿಫಾರಸಿನಂತೆಯೇ. ಈಗ ನ್ಯಾ. ವೈ.ವಿ. ಚಂದ್ರಚೂಡ್ ಪುತ್ರ ನ್ಯಾ.ಡಿ.ವೈ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಅರ್ಜಿಯನ್ನು ಮಾನ್ಯ ಮಾಡು ವುದೇ ಇಲ್ಲವೇ ಎಂಬುದು ಕುತೂಹಲ ಕೆರಳಿಸಿರುವ ವಿಚಾರ.

ಮಹಾರಾಷ್ಟ್ರ ಸರಕಾರ ಗಡಿವಿವಾದ ವಿಚಾರವನ್ನು ಚರ್ಚಿಸುವಾಗ ಪ್ರತಿಪಕ್ಷಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕ್ರಮವನ್ನು ಅನುಸರಿಸುತ್ತದೆ.  ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ ಎಂದು ತಿಳಿದಾಗ ಅಲ್ಲಿನ ಸಿಎಂ ಶಿಂದೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಸರ್ವ ಪಕ್ಷಗಳ ನಾಯಕರೂ ಸಭೆಯಲ್ಲಿ ಪಾಲ್ಗೊಂಡಿ ದ್ದರು ಅಷ್ಟು ಮಾತ್ರವಲ್ಲ, ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ಈ ಇಬ್ಬರನ್ನೂ ಗಡಿ ಉಸ್ತುವಾರಿ ಸಚಿವರಾಗಿಯೂ ನಿಯೋಜಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಎಲ್ಲವೂ ಇದಕ್ಕೆ ವ್ಯತಿರಿಕ್ತ. ಇದರ ಬಗ್ಗೆಯೇ ಮಾಜಿ ಸಿಎಂ, ಪ್ರಸ್ತುತ ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪವೆತ್ತಿರುವುದು.

ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಆರಂಭದ ದಿನಗಳಲ್ಲಿಯೇ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ಮುಖ್ಯಮಂತ್ರಿಯಾದಾಗ ಕೂಡ 2015ರಲ್ಲಿ ಅವರು ಗಡಿಭಾಗದ ಉಸ್ತುವಾರಿ ಸಚಿವರನ್ನಾಗಿ ಎಚ್.ಕೆ.ಪಾಟೀಲರನ್ನು ನೇಮಕ ಮಾಡಿದ್ದರು. ಆದರೆ ಈಗಿನ ಸರಕಾರದಲ್ಲಿ ಗಡಿ ಉಸ್ತುವಾರಿಗೆ ಸಚಿವರನ್ನೇ ನೇಮಿಸದಿರುವುದು ಬೇಜವಾಬ್ದಾರಿತನ ಎಂಬುದು ಸಿದ್ದರಾಮಯ್ಯ ಆಕ್ಷೇಪ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಗಡಿ ಸಂರಕ್ಷಣಾ ಸಮಿತಿ ಕೂಡ ನಿಷ್ಕ್ರಿಯವಾಗಿದೆ. ಒಂದೇ ಒಂದು ಸಭೆ ಯನ್ನೂ ಅದು ನಡೆಸಿಲ್ಲ. ಗಡಿ ಸಂರಕ್ಷಣಾ ಸಮಿತಿ ಪುನರ‌್ರಚಿಸುವುದರ ಜೊತೆಗೆ ಉನ್ನತಾಧಿಕಾರ ಸಮಿತಿಯನ್ನು ರಚಿಸಬೇಕೆಂಬ ಕನ್ನಡ ಸಂಘಟನೆಗಳ ಬೇಡಿಕೆಗೂ ಸರಕಾರ ಸ್ಪಂದಿಸಿಲ್ಲ. ಹಾಗಾಗಿ, ಬೆಳಗಾವಿ ಗಡಿ ವಿವಾದದ ನ್ಯಾಯಾಂಗ ಹೋರಾಟವನ್ನು ಈಗಿನ ರಾಜ್ಯ ಸರಕಾರ ನಿರ್ಲಕ್ಷಿಸುತ್ತಾ ಬಂದಿದೆ ಎಂಬುದು ಕನ್ನಡ ಸಂಘಟನೆಗಳ ಆರೋಪವೂ ಆಗಿದೆ.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಮಹಾಜನ್ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿಲ್ಲ. ಹಾಗೆಂದು ಅದನ್ನು ಒಪ್ಪಿಕೊಂಡೂ ಇಲ್ಲ. ಹಾಗಾಗಿಯೇ ಮಹಾಜನ್ ವರದಿ ಅಂತಿಮವಲ್ಲ ಎಂಬ ವಾದಗಳೂ ಇವೆ. 1970ರ ಡಿಸೆಂಬರ್ 6ರಂದು ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು . ಆದರೆ ಅದರ ಬಗ್ಗೆ ಚರ್ಚೆಯೇ ಆಗಲಿಲ್ಲ. ಅದನ್ನು ಸಂಸತ್ತು ಚರ್ಚಿಸಿ ಅಂಗೀಕರಿಸಬೇಕಿತ್ತು ಇಲ್ಲವೇ ತಿರಸ್ಕರಿಸಬೇಕಿತ್ತು. ಅವೆರಡೂ ಆಗಲಿಲ್ಲ. ವರದಿಗೆ ಕಾಯ್ದೆ ರೂಪ ಸಿಕ್ಕಿಲ್ಲ.

ಇನ್ನು, ದಶಕಗಳಷ್ಟು ಹಿಂದೆ ಆಗಿನ ಸನ್ನಿವೇಶದಲ್ಲಿ ಸಿದ್ಧವಾಗಿದ್ದ ವರದಿಯನ್ನು ಕರ್ನಾಟಕ ಸಂಪೂರ್ಣವಾಗಿ ಒಪ್ಪಿಕೊಂಡರೆ ವಿವಾದಿತ ಮಹಾದಾಯಿ ನೀರಿನ ಮೇಲೆ ಹೆಚ್ಚಿನ ಹಕ್ಕು ಸಾಧಿಸುವುದು ಕಷ್ಟವಾಗ ಬಹುದು. ಏಕೆಂದರೆ ವರದಿಯ ಶಿಫಾರಸಿನಂತೆ ಖಾನಾಪುರದ 152 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ಹಾಗೆಯೇ ಮಲಪ್ರಭಾ ಹುಟ್ಟುವ ತಾಂಬೋಟಿ ಗ್ರಾಮ ಕೂಡ ಮಹಾರಾಷ್ಟ್ರಕ್ಕೆ ಸೇರುವಂತಾಗುತ್ತದೆ. ಆಗ ಕರ್ನಾಟಕದ ನಿಯಂತ್ರಣ ತಪ್ಪಿದಂತಾಗುತ್ತದೆ ಎಂಬುದು ತಜ್ಞರ ಮಾತು. ವರದಿಯನ್ನು ಒಪ್ಪಿಕೊಳ್ಳುವ ಬದಲು ಯಥಾಸ್ಥಿತಿ ಕಾಯ್ದು ಕೊಳ್ಳುವುದಕ್ಕೆ ಹೋರಾಟ ಹೆಚ್ಚು ಒಳ್ಳೆಯದೆಂಬ ಮಾತುಗಳೂ ಇವೆ.

ಇದೆಲ್ಲ ಏನೇ ಇದ್ದರೂ, ಮತ್ತೆ ಮತ್ತೆ ಗಡಿ ಜಗಳ ಕೆದಕುತ್ತಿರುವ ಮಹಾರಾಷ್ಟ್ರ ಸರಕಾರದ ವಿರುದ್ಧ ಗಟ್ಟಿ ನಿಲುವನ್ನು ಎಲ್ಲ ಪಕ್ಷಗಳ ವಿಶ್ವಾಸ ಗಳಿಸಿ ತೆಗೆದುಕೊಳ್ಳುವುದಕ್ಕೆ ಸರಕಾರ ಮುಂದಾಗಬೇಕು ಎಂಬುದು ಕನ್ನಡಿಗರೆಲ್ಲರ ಒತ್ತಾಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮಹಾಜನ್ ವರದಿ ಶಿಫಾರಸುಗಳೇನು?

ಮಹಾಜನ್ ವರದಿ ಶಿಫಾರಸುಗಳ ಪ್ರಕಾರ, ದಕ್ಷಿಣ ಸೊಲ್ಲಾಪುರದ 65 ಹಳ್ಳಿಗಳು, ಸಂಪೂರ್ಣ ಅಕ್ಕಲಕೋಟೆ ತಾಲೂಕು, ಜತ್ತಾ ತಾಲೂಕಿನ 44 ಹಳ್ಳಿಗಳು, ಗಡ ಹಿಂಗ್ಲಜ ತಾಲೂಕಿನ 15 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ಹಾಗೆಯೇ ಬೆಳಗಾವಿ ತಾಲೂಕಿನ 12 ಹಳ್ಳಿಗಳು, ಖಾನಾಪುರ ತಾಲೂಕಿನ 152 ಹಳ್ಳಿಗಳು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 41 ಹಳ್ಳಿಗಳು, ಹುಕ್ಕೇರಿ ತಾಲೂಕಿನ 9 ಹಳ್ಳಿಗಳು, ಇತಿಹಾಸ ಪ್ರಸಿದ್ಧ ನಂದಗಡ, ರಕ್ಕಸಕೊಪ್ಪ ಜಲಾಶಯ ಇವೆಲ್ಲವೂ ಮಹಾರಾಷ್ಟ್ರಕ್ಕೆ ಸೇರಬೇಕು. ಕರ್ನಾಟಕವೇನೋ ಈ ವರದಿಯನ್ನು ಒಪ್ಪಿಕೊಂಡಿತು. ಆದರೆ ಬೆಳಗಾವಿಯನ್ನು ಕಳೆದು ಕೊಂಡ ಮಹಾರಾಷ್ಟ್ರ ಮಾತ್ರ ಅಂದಿನಿಂದ ಇಂದಿನವರೆಗೂ ಇದರ ವಿರುದ್ಧ ಅಪಸ್ವರ ಎತ್ತುತ್ತಲೇ ಬಂದಿದೆ.

ಮಹಾರಾಷ್ಟ್ರ ವಾದವು, ಕರ್ನಾಟಕದಲ್ಲಿನ ಮರಾಠಿ ಮಾತನಾಡುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ನಗರ ಪ್ರದೇಶಗಳೂ ಸೇರಿದಂತೆ 865 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದಾಗಿದೆ. ಆ ಮೂಲಕ 2,806 ಚದರ ಮೈಲುಗಳಷ್ಟು ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬುದು ಅದರ ಒತ್ತಾಯ. ಅದಕ್ಕೆ ಬದಲಾಗಿ ಕನ್ನಡ ಭಾಷಿಕರು ಹೆಚ್ಚಿರುವ ಮಹಾರಾಷ್ಟ್ರದ 260 ಗ್ರಾಮಗಳನ್ನು ಅಂದರೆ 1,160 ಚದರಮೈಲುಗಳಷ್ಟು ಪ್ರದೇಶವನ್ನು ಕರ್ನಾಟಕಕ್ಕೆ ಕೊಡಲು ಅದು ಮುಂದಾಗಿದೆ.

Similar News