‘ರೈತ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಯೋಜನೆ ರೂಪಿಸಿ’: ಸರಕಾರಕ್ಕೆ ಹಸಿರು ಪ್ರತಿಷ್ಠಾನ ಒತ್ತಾಯ

Update: 2022-11-28 12:59 GMT

ಬೆಂಗಳೂರು, ನ.28: ಗ್ರಾಮೀಣ ಪ್ರದೇಶದಲ್ಲಿನ ರೈತ ಯುವಕರನ್ನು ವಿವಾಹವಾಗಲು ಹೆಣ್ಣು ಮಕ್ಕಳು ಮುಂದಾಗುತ್ತಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ಪರಿಗಣಿಸಿ ಸರಕಾರವು ಹೆಣ್ಣು ಮಕ್ಕಳಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ಸೇರಿದ ಪ್ಯಾಕೇಜ್ ನೀಡಬೇಕು ಎಂದು ಹಸಿರು ಪ್ರತಿಷ್ಠಾನ ಸರಕಾರವನ್ನು ಒತ್ತಾಯಿಸಿದೆ.

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನ ಮಾತನಾಡಿದ ಅಧ್ಯಕ್ಷ ಕೆ.ಜಿ. ಕುಮಾರ್, ದೇಶಕ್ಕೆ ಸೈನಿಕನ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ದೇಶಕ್ಕಾಗಿ ಆಹಾರ ಉತ್ಪಾದನೆ ಮಾಡುವ ಕೃಷಿಕನ ಪಾತ್ರವೂ ಮಹತ್ವವಾದುದು. ರೈತ ದೇಶದ ಬೆನ್ನೆಲುಬು ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಗ್ರಾಮೀಣ ಕೃಷಿಕರ ಬಗ್ಗೆ ಚಿಂತಿಸುತ್ತಿಲ್ಲ. ಹಾಗಾಗಿ ಮುಂದಿನ ಅಧಿವೇಶದಲ್ಲಿ ರೈತಾಪಿ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ 10 ಲಕ್ಷ ರೂ.ಗಳ ಪ್ರೋತ್ಸಾಹ ಧನ ಸೇರಿದ ವಿಶೇಷ ಪ್ಯಾಕೇಜ್‍ನ್ನು ನೀಡುವ ಕುರಿತು ಚರ್ಚಿಸಬೇಕು ಎಂದು ಒತ್ತಾಯಿಸಿದರು.  

ಈಗಾಗಲೇ ಅತಿವೃಷ್ಟಿ-ಅನಾವೃಷ್ಟಿ, ಬರಗಾಲ, ವಿವಿಧ ಕಾರಣಗಳಿಂದ ರೈತರು, ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ಹಲವಾರು ಕಾರಣಗಳಿಂದ ಹಳ್ಳಿಗಳಿಂದ ಪಟ್ಟಣದತ್ತ ವಲಸೆ ಬಂದಿರುತ್ತಾರೆ. ಉಳಿದಿರುವ ಅಲ್ಪ ಸ್ವಲ್ಪ ರೈತಾಪಿ ಯುವಕರು ವ್ಯವಸಾಯದಲ್ಲಿ ತೊಡಗಿಸಿಕೊಂಡು ಆಹಾರ ಉತ್ಪಾದನೆ ಮಾಡಿ ದೇಶಕ್ಕೆ ನೆರವಾಗುತ್ತಿದ್ದಾರೆ. ಈ ರೈತಾಪಿ ಯುವಕರು ಆರ್ಥಿಕವಾಗಿ ಸದೃಢರಾಗಿದ್ದರೂ, ಯುವತಿಯರು ಉದ್ಯೋಗಸ್ಥ ಯುವಕರನ್ನು ಮಾತ್ರ ಮದುವೆಯಾಗಲು ಇಚ್ಛಿಸುತ್ತಾರೆ. ಹಾಗಾಗಿ ಸೂಕ್ತ ಯೋಜನೆಯನ್ನು ಜಾರಿ ಮಾಡಿ, ಯುವ ರೈತರು ಕೃಷಿಯನ್ನು ತೊರೆದು ನಗರಕ್ಕೆ ಬರುವುದನ್ನು ತಡೆಯಬೇಕು ಎಂದರು.  

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದ ರೈತಾಪಿ ಯುವಕರನ್ನು ಕಾಡುತ್ತಿರುವ ಈ ಸಾಮಾಜಿಕ ಪಿಡುಗಿಗೆ ಪರಿಹಾರ ರೂಪಿಸಬೇಕು. ಪಕ್ಷ ಭೇದ ಮರೆತು ಎಲ್ಲಾ ಶಾಸಕರು ಒಗ್ಗಟ್ಟಾಗಿ ರೈತಾಪಿ ಯುವಕರ ಬದುಕಿಗೆ ಒಂದು ಅರ್ಥವನ್ನು ರೂಪಿಸಿಕೊಡುವಲ್ಲ ಚಿಂತಿಸಿ, ಪರಿಹಾರವನ್ನು ಸರಕಾರದಿಂದ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಟಿ.ಎಚ್.ಆಂಜನಪ್ಪ, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪಿ.ಕೆ.ಕುಮಾರ್, ಕೆ. ವೇಣುಗೋಪಾಲ್ ಹಾಗೂ ಕಾರ್ಯದರ್ಶಿ ಬಿ.ರವೀಶ್ ಗೌಡ ಉಪಸ್ಥಿತರಿದ್ದರು.

Similar News