ಪತ್ರಕರ್ತರಿಗೆ ಲಂಚ ನಿಡಿದ ಆರೋಪ | ಸರಕಾರದ ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಶಾಮೀಲು: ವೆಂಕಟೇಶ್ ಆರೋಪ

''ನ್ಯಾಯಸಮ್ಮತ ವರದಿ ನೀಡದಿದ್ದರೆ ಧರಣಿ ನಡೆಸುತ್ತೇವೆ''

Update: 2022-11-28 14:45 GMT

ಬೆಂಗಳೂರು, ನ.28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭ್ರಷ್ಟಾಚಾರ ಆರೋಪ ಮುಚ್ಚಿ ಹಾಕಲಾಗುತ್ತಿದ್ದು, ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರಿಗೆ ಲಂಚ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಒಂದು ತಿಂಗಳಾದರೂ ಎಫ್‍ಐಆರ್ ದಾಖಲು ಮಾಡುವುದಾಗಲಿ, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವುದಾಗಲಿ, ಯಾವ ಕ್ರಿಯೆಯೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಭ್ರಷ್ಟಾಚಾರ ಪ್ರಕರಣವನ್ನು ಮೊಟುಕುಗೊಳಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಸಂಸ್ಥೆ (Karnataka Lokayukta)ಶಾಮೀಲಾದಂತೆ ಕಾಣುತ್ತಿದೆ ಎಂದು ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ.ವೆಂಕಟೇಶ್ ಆರೋಪಿಸಿದರು.

ಸೋಮವಾರ, ಲೋಕಾಯುಕ್ತ ಕಚೇರಿ ಬಳಿ ಮಾತನಾಡಿದ ಅವರು, ಲೋಕಾಯುಕ್ತ ಎಡಿಜಿಪಿ ಹಾಗೂ ಎಸ್ಪಿ ವಿವೇಕಾನಂದ ತುಳಸಿಗೇರಿಯವರು ಸೇರಿಕೊಂಡು ದೂರನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದಲೇ ಭ್ರಷ್ಟಾಚಾರ ನಡೆದಿದೆ ಎಂದರೆ ಇನ್ನುಳಿದ ಇಲಾಖೆಗಳ ಕತೆಯೇನು? ಎಂದು ಪ್ರಶ್ನಿಸಿದ ಅವರು ಕೂಡಲೇ ಎಫ್‍ಐಆರ್ ಮಾಡಬೇಕು ಎಂದು ಆಗ್ರಹಿಸಿದರು.

ಲೋಕಾಯುಕ್ತ ಪೊಲೀಸರ ದೂರನ್ನು ಮೂಲೆಗೆ ತಳ್ಳಿದ್ದು, ಹೋರಾಟಗಾರರೇನು ಕೈಕಟ್ಟಿ ಕುಳಿತಿಲ್ಲ. ಪಾರದರ್ಶಕವಾಗಿ ಸರಕಾರ ಹಾಗೂ ಭರತ್ ಜೋಶಿ, ವೈ.ಗ.ಜಗದೀಶರನ್ನು ಕರೆಸಿ ವಿಚಾರಣೆ ನಡೆಸಿ, ನ್ಯಾಯ ಸಮ್ಮತ ವರದಿ ನೀಡಿದರೆ ಲೋಕಾಯುಕ್ತಕ್ಕೆ ನಮ್ಮ ಬೆಂಬಲವಿದೆ. ಇಲ್ಲವೆಂದರೆ ಲೋಕಾಯುಕ್ತ ಪೊಲೀಸರ ವಿರುದ್ಧ ಧರಣಿಯನ್ನು ಪ್ರಾರಂಭಿಸಲಾಗುವುದು. ನಾಗರಿಕರು ಕಟ್ಟುವ ತೆರಿಗೆ ಹಣವನ್ನು ಸರಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಜನರು ಇಂತಹ ಭ್ರಷ್ಟ ಸರಕಾರ ಮತ್ತು ಪತ್ರಕರ್ತರ ವಿರುದ್ಧ ಭುಗಿಲೇಳ ಬೇಕು ಎಂದರು. 

ಜನಾಧಿಕಾರ ಸಂಘರ್ಷ ಪರಿಷತ್‍ನ ಸಹ ಅಧ್ಯಕ್ಷ ಆದರ್ಶ ಅಯ್ಯರ್ ಮಾತನಾಡಿ, ಲೋಕಾಯುಕ್ತ ಎಡಿಜಿಪಿಯವರು ಕಳೆದ ವಾರ ದೂರನ್ನು ಗಮನಿಸಿದ್ದೇನೆ. ಎಸ್ಪಿಯವರಿಂದ ವರದಿ ಬರಲಿ ನಂತರ ನೋಡೋಣ ಎಂದು ಎಸ್ಪಿಯವರ ಮೇಲೆ ತಳ್ಳಿ ಹಾಕುತ್ತಿದ್ದಾರೆ. ಇತ್ತ ಎಸ್ಪಿಯನ್ನು ಪ್ರಶ್ನಿಸಿದರೆ ದೂರಿನ ಮೇಲೆ ವಿಚಾರಣೆ ನಡೆಸಿ ಮುಂದಿನ ವಾರದಲ್ಲಿ ವರದಿಕೊಡುತ್ತೇವೆ ಅನ್ನುತ್ತಾರೆ. ಏನೇ ಆಗಲಿ ಲೋಕಾಯುಕ್ತಕ್ಕಿರುವ ಘನತೆಯನ್ನು ಪೊಲೀಸರು ಉಳಿಸಿಕೊಳ್ಳಲಿ. ಒಂದು ವೇಳೆ ಸುಳ್ಳು ವರದಿ ನೀಡಿದರೆ ಸಂಬಂಧಪಟ್ಟ ಪೊಲೀಸರ ವಿರುದ್ಧ ದೂರು ನೀಡಿ ಹೋರಾಡುತ್ತೇವೆ. ತಪ್ಪುಗಳಾಗದಂತೆ ನ್ಯಾಯಯುತವಾಗಿ ವಿಚಾರಣೆ ನಡೆಸಿ ಎಂದರು.

ಇದೇ ಸಂದರ್ಭದಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ, ಹಳ್ಳಿ ಮಕ್ಕಳು ಸಂಘಟನೆಗಳ ಪದಾಧಿಕಾರಿಗಳು ಇದ್ದರು.

Similar News