ಎಲ್ಲರಿಗೂ ನಾವು ರೌಡಿಶೀಟರ್ ಎಂದು ನಾಮಕರಣ ಮಾಡೋದು ತಪ್ಪು: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-11-28 18:03 GMT

ಬೆಂಗಳೂರು, ನ.28: 'ಎಲ್ಲರಿಗೂ ನಾವು ರೌಡಿಶೀಟರ್ ಎಂದು ನಾಮಕರಣ ಮಾಡೋದು ತಪ್ಪು. ಸಮಾಜದಲ್ಲಿ ಎಲ್ಲರಿಗೂ ಬಾಳಿ ಬದುಕಲು ಅವಕಾಶ ಇದೆ. ಉತ್ತಮವಾಗಿ ಬದುಕಲು ಅವಕಾಶ ಕೊಡದೆ ನಿಂದನೆ ಮಾಡಬಾರದು’ ಎಂದು ರೌಡಿ ಶೀಟರ್ ಗಳನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಸೋಮವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಎಸ್.ಸಚ್ಚಿದಾನಂದ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡ್ಯ ಈ ಹಿಂದೆ ಅಭಿವೃದ್ಧಿಗೆ ಹೆಸರುವಾಸಿಯಾಗಿತ್ತು. ಆದರೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಆ ಜಿಲ್ಲೆ ಕುಸಿತ ಕಂಡಿತು. ಆ ಜಿಲ್ಲೆಯಲ್ಲಿ ಜನರಿಂದ ಅವಕಾಶ ಪಡೆದ ಪ್ರತಿನಿಧಿಗಳು ಸಮರ್ಪಕವಾಗಿ ಕೆಲಸ ಮಾಡಲಿಲ್ಲ. ಸ್ವಾರ್ಥ ರಾಜಕಾರಣ ನಡೆಯಲ್ಲ. ಜನಪರ ಕೆಲಸ ಮಾಡುವವರು ನಾಯಕರಾಗುತ್ತಾರೆ. ಜನದ್ರೋಹಿಗಳಿಗೆ ಪಾಠ ಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಗುಲಾಮಗಿರಿ ಸಹಿಸದೆ ಹಲವು ನಾಯಕರು ಈಗಾಗಲೇ ಜೆಡಿಎಸ್ ತೊರೆದಿದ್ದಾರೆ. ಮಂಡ್ಯದ ಸಮೃದ್ಧಿಯನ್ನು ಹೆಚ್ಚಿಸಲು ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ ಸೂಕ್ತವಾದ ಪಕ್ಷ. ಮಂಡ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು. ನಿಸ್ವಾರ್ಥವಾಗಿ ನಾವು ಕೆಲಸ ಮಾಡುತ್ತೇವೆ. ವಿಶ್ವಕ್ಕೇ ಭರವಸೆಯನ್ನು ಕರ್ನಾಟಕ ನೀಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಭೆ ಇರುವ ನಾಡು ಕರ್ನಾಟಕ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಮಾತನಾಡಿ, ಸಚ್ಚಿದಾನಂದ ಪಕ್ಷ ಸೇರ್ಪಡೆಯಿಂದ ಮಂಡ್ಯ ಜಿಲ್ಲೆಯಲ್ಲಿ ಹೊಸ ಶಕ್ತಿ ಮತ್ತು ನವೀನ ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಇತರ ಪಕ್ಷಗಳ ಭದ್ರಕೋಟೆಯನ್ನು ಒಡೆಯುವ ದೊಡ್ಡ ಶಕ್ತಿ ಬಿಜೆಪಿಗೆ ಬಂದಿದೆ. ಕನಿಷ್ಠ 7 ಶಾಸಕರು ಮಂಡ್ಯದಲ್ಲಿ ಗೆಲ್ಲುವುದು ಖಚಿತ. ಜೆಡಿಎಸ್-ಕಾಂಗ್ರೆಸ್ ಪಕ್ಷಕ್ಕೆ ಭಯಪಡಬೇಕಿಲ್ಲ. ಗೂಂಡಾಗಳಿಗೆ ತಕ್ಕ ಪಾಠವನ್ನು ನಮ್ಮ ಪಕ್ಷ ಕಲಿಸಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕರಾದ ಸತೀಶ್ ರೆಡ್ಡಿ, ಎಲ್.ರವಿಸುಬ್ರಹ್ಮಣ್ಯ, ಬಿಜೆಪಿ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: BJP ನಾಯಕರೊಂದಿಗೆ ಸೈಲೆಂಟ್ ಸುನೀಲ್ ಕಾರ್ಯಕ್ರಮ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ಏನು? 

Similar News