ವ್ಯಾಪಾರಕ್ಕೆ ಎಲ್ಲ ಧರ್ಮಿಯರಿಗೂ ಅವಕಾಶ; ಧರಣಿ ನಡೆಸುವ ಎಚ್ಚರಿಕೆ ನೀಡಿದ್ದ ಸಂಘಪರಿವಾರದ ಮುಖಂಡರು ಪೊಲೀಸ್ ವಶಕ್ಕೆ

ಸುಬ್ರಹ್ಮಣ್ಯ ದೇವಸ್ಥಾನದ ಮುಂದೆ ಪೊಲೀಸರ ನಿಯೋಜನೆ

Update: 2022-11-29 06:06 GMT

ಬೆಂಗಳೂರು (Bengaluru), ನ.29:  ನಗರದ ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ರಜತ ರಥೋತ್ಸವ ವೇಳೆ ಇತರ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನೀಡಿದರೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದ ಹಿಂದುತ್ವ ಸಂಘಟನೆಗಳ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.   

'ಎಲ್ಲಾ ಧರ್ಮದವರಿಗೆ ವ್ಯಾಪಾರ ಅವಕಾಶ ನೀಡುತ್ತೇವೆ' ಎಂದು ಹೇಳಿಕೆ ನೀಡಿದ್ದ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ವಿರುದ್ಧ  ಹಿಂದುತ್ವ ಸಂಘಟನೆಗಳು  ಆಕ್ರೋಶ ವ್ಯಕ್ತಪಡಿಸಿ, ಧರಣಿ ನಡೆಸುವ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ  ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಸೋಮವಾರ ತಡ ರಾತ್ರಿ 1ಗಂಟೆ ಸುಮಾರಿಗೆ ಹಿಂದುತ್ವ ಸಂಘಟನೆಗಳ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ. 

ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಮುಂದೆ ಪೊಲೀಸರ ನಿಯೋಜನೆ: ಇಂದು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ರಜತ ರಥೋತ್ಸವ ಹಿನ್ನೆಲೆ ದೇಗುಲದ ಮುಂದೆ 49 ಪಿಎಸ್‌ಐ, 14 ಇನ್ಸ್‌ಪೆಕ್ಟರ್, 16 ಎಸಿಪಿ ಸೇರಿದಂತೆ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ಇದನ್ನೂ ಓದಿ: ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ, ವ್ಯಾಪಾರಕ್ಕೆ ಎಲ್ಲ ಧರ್ಮಿಯರಿಗೂ ಅವಕಾಶ: BJP ಶಾಸಕ ಉದಯ್ ಗರುಡಾಚಾರ್

Similar News