ಚುನಾವಣೆ ಪ್ರಕ್ರಿಯೆ ಆರಂಭದಿಂದಲೂ ಹಿರಿಯ ಅಧಿಕಾರಿಗಳಿಂದ ಒತ್ತಡ: ಅಮೃತ್ ರಾಜ್ ಆರೋಪ

ಬಿಎಲ್‍ಒಗಳನ್ನು ಕೇಂದ್ರ ಚುನಾವಣಾ ಆಯೋಗವೇ ನೇಮಿಸುವಂತೆ ಆಗ್ರಹ

Update: 2022-11-29 15:11 GMT

ಬೆಂಗಳೂರು, ನ.29: ಬೂತ್ ಮಟ್ಟದ ಅಧಿಕಾರಿ (ಬಿಎಲ್‍ಒ)ಗಳನ್ನು ಕೇಂದ್ರ ಚುನಾವಣಾ ಆಯೋಗ ನೇಮಕ ಮಾಡಲಿ. ಇದರಿಂದ ನಮ್ಮ ಮೇಲಿನ ಒತ್ತಡ ತಗ್ಗಲಿದೆ ಎಂದು ಬಿಬಿಎಂಪಿ (BBMP) ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ. 

ಮಂಗಳವಾರ ನಗರದ ಬಿಬಿಎಂಪಿ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಮೃತ್ ರಾಜ್, ಚುನಾವಣೆ ಪ್ರಕ್ರಿಯೆ ಆರಂಭದಿಂದಲೂ ನಮ್ಮ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹಾಕುತ್ತಾರೆ. ಹೀಗಾಗಿ, ಬೂತ್ ಮಟ್ಟದ ಅಧಿಕಾರಿಗಳನ್ನು ಆಯೋಗವೇ ನೇಮಿಸಬೇಕು. ಇದರಿಂದ ನಮಗೆ ಅನುಕೂಲವಾಗಲಿದೆ ಎಂದರು.

ಹಿರಿಯ ಅಧಿಕಾರಿಗಳ ಸೂಚನೆಯಂತೆ ನಾವು ಚುನಾವಣೆ ಪ್ರಕ್ರಿಯೆಯನ್ನು ನಡೆಸಿದ್ದೇವೆ. ಇದರಲ್ಲಿ ಯಾವುದೇ ಅಕ್ರಮವನ್ನು ಪಾಲಿಕೆ ಸಿಬ್ಬಂದಿ ಮಾಡಿಲ್ಲ. ಆದರೆ, ವಿಚಾರಣೆ ನೆಪದಲ್ಲಿ ನಮಗೆ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ, ಮುಂದಿನ ಬಾರಿ ಆಯೋಗವೇ ಬಿಎಲ್‍ಒಗಳನ್ನು ನೇಮಿಸಿಕೊಂಡರೆ ಒಳ್ಳೆಯದು ಎಂದು ಅವರು ಮನವಿ ಮಾಡಿದರು.

ಹಿರಿಯ ವಕೀಲ ಶ್ರೀನಿವಾಸ್ ಮಾತನಾಡಿ, ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಬಿಬಿಎಂಪಿ ದೂರು ದಾಖಲಿಸಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ದೂರು ದಾಖಲಿಸಬೇಕು. ಈ ಪ್ರಕರಣದಲ್ಲಿ ದೂರುದಾರರನ್ನೆ ಗುರಿಯಾಗಿಸಿಕೊಂಡಿದ್ದು, ಕಾನೂನು ಪ್ರಕ್ರಿಯೆ ಸೂಕ್ತವಾಗಿಲ್ಲ ಎಂದು ತಿಳಿಸಿದರು.

ಚಿಲುಮೆ ಸಂಸ್ಥೆ ಬಿಎಲ್‍ಒ ಗುರುತಿನ ಚೀಟಿಯನ್ನು ನಕಲಿ ಮಾಡಿ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಿಬಿಎಂಪಿ ಕಂದಾಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಸಮಂಜಸ ಎಂದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಜಿ.ರವಿ, ಎಸ್.ಜಿ.ಸುರೇಶ್, ಸಾಯಿಶಂಕರ್, ರಾಮಚಂದ್ರ, ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹ ಸೂರ್ಯಕುಮಾರಿ, ಬಾಬಣ್ಣ, ಕಂದಾಯ ಉಪ ಆಯುಕ್ತರಾದ ಲಕ್ಷ್ಮೀ ಸೇರಿದಂತೆ ಪ್ರಮುಖರಿದ್ದರು.

Similar News