ಗುಜರಾತ್ ವಿಧಾನ ಸಭೆ ಚುನಾವಣೆ: ಆಪ್ ನ 181ರ ಪೈಕಿ 61 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ

Update: 2022-11-29 15:39 GMT

ಗಾಂಧಿನಗರ, ನ. 29:  ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ(Aam Aadmi) ಪಕ್ಷದ 181ರ ಪೈಕಿ 61 ಮಂದಿ ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಸರಕಾರೇತರ ಸಂಸ್ಥೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ ನ ಎರಡು ವರದಿಗಳು ತೋರಿಸಿವೆ. 

ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನವೆಂಬರ್ 24 ಹಾಗೂ ನವೆಂಬರ್ 28ರಂದು ಪ್ರಕಟಿಸಿದ ಎರಡು ಹಂತಗಳ ವರದಿಗಳ ವಿಶ್ಲೇಷಣೆಯು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 1,621ರಲ್ಲಿ 330 ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡಿದ್ದಾರೆ ಎಂದು ತಿಳಿಸಿವೆ.

2017ರ ವಿಧಾನ ಸಭೆ ಚುನಾವಣೆಯಲ್ಲಿ 238 ಅಭ್ಯರ್ಥಿಗಳು ತಾವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದರು. ಅದಕ್ಕೆ ಹೋಲಿಸಿದರೆ, ಈಗ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವುದಾಗಿ ಘೋಷಿಸಿದವರ ಸಂಖ್ಯೆ ಏರಿಕೆಯಾಗಿದೆ.

ಕಾಂಗ್ರೆಸ್ ನ 179ರಲ್ಲಿ  60 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ. ಬಿಜೆಪಿಯ 182ರಲ್ಲಿ 32 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ವಿಶ್ಲೇಷಣೆ ತೋರಿಸಿದೆ.

ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವರಲ್ಲಿ ಆಮ್ ಆದ್ಮಿ ಪಕ್ಷದ 40, ಕಾಂಗ್ರೆಸ್ ನ 28 ಹಾಗೂ ಬಿಜೆಪಿಯ 25 ಅಭ್ಯರ್ಥಿಗಳಿದ್ದಾರೆ. ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಜಾಮೀನು ರಹಿತ ಹಾಗೂ ಐದು ವರ್ಷ  ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾಗುವ ಅಪಾರಾಧವನ್ನು ಗಂಭೀರ ಅಪರಾಧ ಎಂದು  ವ್ಯಾಖ್ಯಾನಿಸುತ್ತದೆ. ಇವುಗಳು ಹಲ್ಲೆ, ಹತ್ಯೆ ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ಅಪರಾಧಗಳು ಹಾಗೂ ಮಹಿಳೆಯರ ವಿರುದ್ಧದ ಅಪರಾಧಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು.

ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳು  ರಾಜಕೀಯ ಪಕ್ಷಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೊದಲ ಹಂತದ ಮತದಾನದಲ್ಲಿ ಸ್ಪರ್ಧಿಸುವ ಶೇ. 21 ಹಾಗೂ ಎರಡೇ ಹಂತದ ಮತದಾನದಲ್ಲಿ ಸ್ಪರ್ಧಿಸುವ ಶೇ. 20 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ತಿಳಿಸಿದೆ.

450ಕ್ಕೂ ಅಧಿಕ ಅಭ್ಯರ್ಥಿಗಳು ಕೋಟ್ಯಧಿಪತಿಗಳು

1,621ರ  ಪೈಕಿ 456 ಅಂದರೆ ಶೇ. 28ರಷ್ಟು ಅಭ್ಯರ್ಥಿಗಳ ಘೋಷಿತ ಆಸ್ತಿ 1 ಕೋ.ರೂಗಿಂತ ಅಧಿಕ ಇದೆ ಎಂದು ವರದಿಗಳು ತೋರಿಸಿವೆ. 2017ರ ಚುನಾವಣೆಯಲ್ಲಿ 397 ಅಭ್ಯರ್ಥಿಗಳು 1 ಕೋ.ರೂ.ಗಿಂತ ಹೆಚ್ಚು ಆಸ್ತಿ ಹೊಂದಿದ್ದರು.

ಈ ವರ್ಷ  ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ 154 ಮಂದಿ ಕೋಟ್ಯಧಿಪತಿಗಳಿಗೆ  ಟಿಕೆಟ್ ನೀಡಿದೆ. ಅನಂತರ ಕಾಂಗ್ರೆಸ್ 142 ಮಂದಿ ಕೋಟ್ಯಧಿಪತಿಗಳಿಗೆ  ಹಾಗೂ ಆಮ್ ಆದ್ಮಿ ಪಕ್ಷ 62 ಮಂದಿ ಕೋಟ್ಯಧಿಪತಿಗಳಿಗೆ ಟಿಕೆಟ್ ನೀಡಿದೆ.

Similar News