ಕೆಇಎಯಿಂದ ಅಝೀಂ ಪ್ರೇಮ್‍ಜಿಗೆ ಸನ್ಮಾನ

Update: 2022-11-29 17:10 GMT

ಬೆಂಗಳೂರು, ನ. 29: ಎಂಪ್ಲಾಯರ್ಸ್ ಅಸೋಸಿಯೇಶನ್‍ನ ವಜ್ರ ಮಹೋತ್ಸವದ ಹಿನ್ನೆಲೆ ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಪದ್ಮವಿಭೂಷಣ ಪುರಸ್ಕೃತ ಅಝೀಂ ಪ್ರೇಮ್‍ಜಿ ಅವರನ್ನು ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅಝೀಂ ಪ್ರೇಮ್ ಜಿ, ಆರವತ್ತು ವರ್ಷಗಳಲ್ಲಿ ಕೆಇಎ ಅಭೂತಪೂರ್ವವಾಗಿ ಕೆಲಸ ಮಾಡುತ್ತಾ ಬಂದಿದೆ. ಮೊದಲು ಆರ್ಥಿಕ ಸದೃಢತೆಯನ್ನು ಅನುಷ್ಠಾನಕ್ಕೆ ತಂದು ನೌಕರರನ್ನು ಪಾಲುದಾರರನ್ನಾಗಿ ಮಾಡುವ ರೀತಿಯಲ್ಲಿ ಸಂಸ್ಕೃತಿ ಮತ್ತು ವ್ಯವಸ್ಥೆಯನ್ನು ಉದ್ಯಮದಲ್ಲಿ ತರಬೇಕಿದೆ. ಈ ದಿಸೆಯಲ್ಲಿ ಕೆಇಎ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಎಂಪ್ಲಾಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಸಿ.ಪ್ರಭಾಕರ್ ಮಾತನಾಡಿ, ಕೆಇಎ ಹಲವು ವರ್ಷಗಳಿಂದ ಕೈಗಾರಿಕೆಗಳ ಪರವಾಗಿ ನಿರ್ಭಿಡೆಯಿಂದ ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕೆಗಳಿಗೆ ಅಗತ್ಯವಿರುವ ಕಾನೂನು ಕ್ರಮಗಳು, ಮುನ್ನೆಚ್ಚರಿಕೆಗಳು, ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪರಿಹಾರಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಉದ್ಯೋಗದಾತರು ನ್ಯಾಯಯುತವಾಗಿ ಕಾರ್ಮಿಕರೊಂದಿಗೆ ಸಾಮರಸ್ಯದ ಕೈಗಾರಿಕಾ ಸಂಬಂಧಗಳನ್ನು ಉತ್ತೇಜಿಸಬೇಕು ಎಂದರು.

ಕೆಇಎ ಉಪಾಧ್ಯಕ್ಷ ರಾಜ್ ಪಿಳ್ಳೈ ಮಾತನಾಡಿ, ಸಿಂಗಾಪುರ ನ್ಯಾಷನಲ್ ಎಂಪ್ಲಾಯರ್ಸ್ ಫೆಡರೇಶನ್‍ನ ವಾರ್ಷಿಕ ವಹಿವಾಟು 12 ಮಿಲಿಯನ್ ಡಾಲರ್ ಹೊಂದಿದ್ದು, ತನ್ನ ಸದಸ್ಯರಿಗೆ ಮೌಲ್ಯವರ್ಧನೆಯೊಂದಿಗೆ ಸಾಧನೆ ಮಾಡುತ್ತಿದೆ. ಮಾನವಶಕ್ತಿ ಸಚಿವಾಲಯವು ಎಸ್‍ಎನ್‍ಇಎಫ್ ಮತ್ತು ಸಿಂಗಾಪುರ ರಾಷ್ಟ್ರೀಯ ಟ್ರೇಡ್ಸ್ ಯೂನಿಯನ್ ಕಾಂಗ್ರೆಸ್‍ನೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. 

Similar News