ಮನುಷ್ಯನ ದುರಾಸೆಯಿಂದ ಸೊನ್ನೆಗಳ ಅಭಿವೃದ್ಧಿ: ನ್ಯಾ.ಸಂತೋಷ್ ಹೆಗ್ಡೆ

Update: 2022-11-29 17:46 GMT

ಬೆಂಗಳೂರು, ನ.29: ದೇಶದಲ್ಲಿ ಮನುಷ್ಯನ ದುರಾಸೆಯಿಂದ ಹಗರಣಗಳ ಪ್ರಮಾಣ ಹೆಚ್ಚುತ್ತಾ ಸೊನ್ನೆಗಳ ಅಭಿವೃದ್ಧಿಯಾಗುತ್ತಿದೆ ಎಂದು ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯದಿಂದ ಆಯೋಜಿಸಿದ್ದ ‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಅತಿ ಆಸೆಗಳಿಗೆ ಕಾನೂನಿನಲ್ಲಿ ನ್ಯಾಯ ಸಿಗುತ್ತಿಲ್ಲ. ಸಂವಿಧಾನದ ಮೂರು ಹುದ್ದೆಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಂದ ಸಮಾಜದಲ್ಲಿ ಅನ್ಯಾಯವಾಗುತ್ತಿದೆ. ಇದು ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು. ಹಿಂದೆ ತಪ್ಪಿತಸ್ಥರ ವಿರುದ್ಧ ಕಠಿಣವಾದ ಶಿಕ್ಷೆಗಳು ಹಾಗೂ ಬಹಿಷ್ಕಾರವನ್ನು ಹಾಕಲಾಗುತ್ತಿತ್ತು. ಆದರೆ ಈಗ ಜೈಲಿಗೆ ಹೋಗಿ ಬಂದವರಿಗೂ ಸೇಬಿನ ಹಾರ ಹಾಕಿ ಜೈಕಾರ ಕೂಗಲಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ರಾಜನೀತಿಯಲ್ಲಿ ಜನರಿಂದ ಜನರಿಗಾಗಿ ಜನರ ಸರಕಾರವನ್ನು ಕಾಣಲು ಸಾಧ್ಯವಾಗುತ್ತಿಲ್ಲ. ರಾಜಕೀಯ ರಂಗವನ್ನು ಹೊರತುಪಡಿಸಿ ಬೇರೆಲ್ಲ ರಂಗಕ್ಕೆ ವಿದ್ಯಾರ್ಹತೆಯಿದೆ. ರಾಜಕಾರಣಿಗಳನ್ನು ವಿದ್ಯಾರ್ಹತೆ, ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡುವಂತಿದ್ದರೆ ಇಂದಿನ ಕೆಲವರಿಂದ ಕೆಲವರಿಗಾಗಿ ಕೆಲವರ ಸರಕಾರದಿಂದ ಪ್ರಜೆಗಳು ಬಸವಳಿಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಂಗವು ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿದೆ. ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ತಾನು 20 ವರ್ಷದವನಿದ್ದಾಗ ನ್ಯಾಯಾಲಯದಲ್ಲಿ ದೂರು ದಾಖಲಿಸಿದರೆ ಆತನಿಗೆ 80 ವರ್ಷವಾದಾಗಲೋ, ಅಥವಾ ಆತನ ಮರಣದ ನಂತರವೋ ತೀರ್ಪು ಬಂದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ದೇಶದ ಪ್ರತಿಯೊಂದು ಸಮಸ್ಯೆಗಳಿಗೂ ಸಂವಿಧಾನದಲ್ಲಿ ದಾರಿಯನ್ನು ತೋರಲಾಗಿದೆ. ಜೀವನದಲ್ಲಿ ಅದರ ಆಶಯ ಮತ್ತು ಮೌಲ್ಯಗಳನ್ನು ರೂಢಿಸಿಕೊಳ್ಳಿ, ಮಾನವೀಯತೆ ಮತ್ತು ತೃಪ್ತಿ ಎಂಬ ಎರಡು ಮೌಲ್ಯಗಳಿಂದ ಸಮಾಜದ ಬದಲಾವಣೆಗೆ ನಾಂದಿಹಾಡಬಹುದು ಎಂದರು.

ಕುಲಪತಿ ಎಲ್.ಗೋಮತಿದೇವಿ ಮಾತನಾಡಿ, ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ನೀತಿಗಳನ್ನು ಅಳವಡಿಸಿಕೊಂಡು ಸಂವಿಧಾನಬದ್ಧವಾಗಿ ಜೀವನ ನಡೆಸಿದರೆ ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದರೂ ನಿಮ್ಮ ಕೆಲಸ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರಲಿ ಎಂದು ಸಲಹೆ ನೀಡಿದರು.

ಸಂವಿಧಾನ ದಿನದ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾತ ವಿತರಣೆ ಮಾಡಲಾಯಿತು. ಕಾರ್ಯಕ್ರದಲ್ಲಿ ಮಹಾರಾಣಿ ಕ್ಲಸ್ಟ್‍ರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಸಿಬ್ಬಂದಿಗಳು ಹಾಜರಿದ್ದರು.  

Similar News