ಉಗ್ರವಾದ, ಭೀತಿವಾದ ಇಸ್ಲಾಮ್ ಗೆ ವಿರುದ್ಧ: ಎನ್ಎಸ್ಎ ಅಜಿತ ದೋವಲ್

Update: 2022-11-29 17:56 GMT

ಹೊಸದಿಲ್ಲಿ,ನ.29: ಉಗ್ರವಾದ ಮತ್ತು ಭೀತಿವಾದ ಇಸ್ಲಾಮಿನ ಅರ್ಥಕ್ಕೆ ವಿರುದ್ಧವಾಗಿವೆ, ಏಕೆಂದರೆ ಇಸ್ಲಾಮ್ ಶಾಂತಿ (Islam is peace)ಮತ್ತು ಯೋಗಕ್ಷೇಮ(well-being)ದ ಅರ್ಥವನ್ನು ಹೊಂದಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ ದೋವಲ್(Ajith Doval) ಅವರು ಮಂಗಳವಾರ ಹೇಳಿದರು.

ಅವರು ಇಲ್ಲಿಯ ಇಸ್ಲಾಮಿಕ್ ಕಲ್ಚರ್ ಸೆಂಟರ್ ನಲ್ಲಿ ಭಾರತ ಮತ್ತು ಇಂಡೋನೇಷ್ಯಾ(Indonesia)ಗಳ ಉಲೇಮಾಗಳ ವಿಶೇಷ ಸಭೆಯಲ್ಲಿ ‘ಭಾರತ ಮತ್ತು ಇಂಡೋನೇಷ್ಯಾಗಳಲ್ಲಿ ಅಂತರಧರ್ಮೀಯ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಸ್ಕೃತಿಯನ್ನು ಬೆಳೆಸುವಲ್ಲಿ ಉಲೇಮಾಗಳ ಪಾತ್ರ’ ಕುರಿತು ಮೊದಲ ಸಂವಾದವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಂತಿ ಸ್ಥಾಪಿಸುವಲ್ಲಿ ಇಸ್ಲಾಮಿನ ಪ್ರಮುಖ ಪಾತ್ರವನ್ನು ಪ್ರತಿಪಾದಿಸಿದ ದೋವಲ್, ಭಾರತ ಮತ್ತು ಇಂಡೋನೇಷ್ಯಾ  ಭೀತಿವಾದ ಮತ್ತು ಪ್ರತ್ಯೇಕತಾವಾದದ ಬಲಿಪಶುಗಳಾಗಿವೆ ಎಂದು ಒತ್ತಿ ಹೇಳಿದರು. ಗಡಿಯಾಚೆಯ ವಿದ್ಯಮಾನ ಮತ್ತು ಐಸಿಸ್ ಪ್ರೇರಿತ ಭೀತಿವಾದವು ಬೆದರಿಕೆಯನ್ನು ಒಡ್ಡುತ್ತಲೇ ಇದೆ ಎಂದರು.

ಉಗ್ರವಾದ, ಮೂಲಭೂತೀಕರಣ ಮತ್ತು ಧರ್ಮದ ದುರುಪಯೋಗವನ್ನು ಬಳಸಿಕೊಳ್ಳುವ ಉದ್ದೇಶಗಳು ಯಾವುದೇ ಕಾರಣದಿಂದಲೂ ಸಮರ್ಥನೀಯವಲ್ಲ ಎಂದು ಒತ್ತಿ ಹೇಳಿದ ಅವರು,‘ಇದು ಧರ್ಮವನ್ನು ವಿರೂಪಗೊಳಿಸುವ ಕೃತ್ಯವಾಗಿದ್ದು, ಇದರ ವಿರುದ್ಧ ನಾವೆಲ್ಲ ಧ್ವನಿಯೆತ್ತಬೇಕಾದ ಅಗತ್ಯವಿದೆ. ಉಗ್ರವಾದ ಮತ್ತು ಭೀತಿವಾದ ಇಸ್ಲಾಮಿನ ಅರ್ಥಕ್ಕೆ ವಿರುದ್ಧವಾಗಿವೆ,ಏಕೆಂದರೆ ಇಸ್ಲಾಮಿನ ಅರ್ಥ ಶಾಂತಿ ಮತ್ತು ಯೋಗಕ್ಷೇಮ (ಸಲಾಮತಿ/ಅಸಲಾಮ್) ಎಂದಾಗಿದೆ. ಇಂತಹ ಶಕ್ತಿಗಳಿಗೆ ಪ್ರತಿರೋಧವನ್ನು ಯಾವುದೇ ಧರ್ಮದೊಂದಿಗೆ ಸಂಘರ್ಷ ಎಂದು ನೋಡಬಾರದು. ಅದು ಷಡ್ಯಂತ್ರವಾಗಿದೆ. ಬದಲಿಗೆ ಮಾನವೀಯ ಮೌಲ್ಯಗಳು,ಶಾಂತಿ ಮತ್ತು ತಿಳುವಳಿಕೆಯ ದ್ಯೋತಕವಾಗಿರುವ ನಮ್ಮ ಧರ್ಮಗಳ ನಿಜವಾದ ಸಂದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ’ ಎಂದರು. 

ನಿಜಕ್ಕೂ ಕುರಾನ್ ಸ್ವತಃ ಬೋಧಿಸುವಂತೆ ಓರ್ವ ವ್ಯಕ್ತಿಯನ್ನು ಕೊಲ್ಲುವುದು ಎಲ್ಲ ಮಾನವೀಯತೆಯನ್ನು ಕೊಂದಂತೆ ಮತ್ತು ಓರ್ವನನ್ನು ರಕ್ಷಿಸುವುದು ಮಾನವೀಯತೆಯ ರಕ್ಷಣೆಗೆ ಸಮನಾಗಿದೆ ಎಂದರು.

ಮೂಲಭೂತೀಕರಣದ ನಿರ್ಮೂಲನಕ್ಕಾಗಿ ಒಂದಾಗಿ ಶ್ರಮಿಸುವ ಅಗತ್ಯವನ್ನು ಒತ್ತಿ ಹೇಳಿದ ದೋವಲ್, ಪ್ರಜಾಪ್ರಭುತ್ವದಲ್ಲಿ ಸಂಕುಚಿತ ಉದ್ದೇಶಗಳಿಗಾಗಿ ದ್ವೇಷಭಾಷಣ, ಪೂರ್ವಾಗ್ರಹ, ಅಪಪ್ರಚಾರ, ರಾಕ್ಷಸೀಕರಣ, ಹಿಂಸೆ, ಸಂಘರ್ಷ ಮತ್ತು ಧರ್ಮದ ದುರುಪಯೋಗಕ್ಕೆ ಅವಕಾಶವಿಲ್ಲ ಎಂದರು.

ಸಂಭಾವ್ಯ ಋಣಾತ್ಮಕ ಪ್ರಭಾವಿಗಳನ್ನು ಗುರುತಿಸುವಲ್ಲಿ ಮತ್ತು ಅವರ ಚಟುವಟಿಕೆಗಳನ್ನು ಎದುರಿಸಲು ಮಾಹಿತಿ ಹಂಚಿಕೆಗೆ ಸರಕಾರಿ ಸಂಸ್ಥೆಗಳೂ ಒಂದಾಗಿ ಶ್ರಮಿಸುವ ಅಗತ್ಯವಿದೆ ಎಂದ ದೋವಲ್, ಈ ನಿಟ್ಟಿನಲ್ಲಿ ನಾಗರಿಕ ಸಮಾಜದಲ್ಲಿ ಗಾಢ ಸಂಪರ್ಕಗಳನ್ನು ಹೊಂದಿರುವ ಉಲೇಮಾಗಳು ಪ್ರಮುಖ ಪಾತ್ರವನ್ನು ನಿರ್ವಹಿಸಬಹುದಾಗಿದೆ ಎಂದರು.

ಇಸ್ಲಾಮಿನ ತತ್ತ್ವಗಳ ಕುರಿತು ಜನರಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಪ್ರಗತಿಪರ ವಿಚಾರಗಳು ಮತ್ತು ಚಿಂತನೆಗಳೊಂದಿಗೆ ಮೂಲಭೂತೀಕರಣ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ಉಲೇಮಾಗಳು ಮುಖ್ಯ ಪಾತ್ರವನ್ನು ಹೊಂದಿದ್ದಾರೆ ಎಂದ ದೋವಲ್,‘ಹೆಚ್ಚಾಗಿ ನಮ್ಮ ಯುವಜನರು ಮೂಲಭೂತೀಕರಣದ ಪ್ರಾಥಮಿಕ ಗುರಿಗಳಾಗಿದ್ದಾರೆ,ಆದರೆ ಯುವಬಲವನ್ನು ಸರಿಯಾದ ನಿಟ್ಟಿನಲ್ಲಿ ಬೆಳೆಸಿದರೆ ಅವರು ಯಾವುದೇ ಸಮಾಜದಲ್ಲಿ ಬದಲಾವಣೆಯ ಹರಿಕಾರರಾಗಿ ಮತ್ತು ಪ್ರಗತಿಯ ನಿರ್ಮಾಣ ಶಕ್ತಿಗಳಾಗಿ ಹೊರಹೊಮ್ಮಬಲ್ಲರು ಎಂದರು.

ಭಾರತ ಮತ್ತು ಇಂಡೋನೇಷ್ಯಾ ಹಿಂಸೆ ಮತ್ತು ಸಂಘರ್ಷವನ್ನು ತೊಡೆದುಹಾಕಲು ವಿಶ್ವಕ್ಕೆ ಜಂಟಿ ಸಂದೇಶವನ್ನು ರವಾನಿಸಬಹುದಾಗಿದೆ ಮತ್ತು ಅದು ಧರ್ಮದಲ್ಲಿ ಪ್ರತಿಪಾದಿಸಿರುವ ನೈಜ ಮೌಲ್ಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಎರಡು ಬೃಹತ್ ಪ್ರಜಾಪ್ರಭುತ್ವಗಳ ಸಂಕಲ್ಪದ ಪ್ರಬಲ ಸಂಕೇತವಾಗುತ್ತದೆ ಎಂದು ದೋವಲ್ ನುಡಿದರು.

Similar News