ವೇಣೂರು ಪೆರ್ಮುಡ ಕಂಬಳಕ್ಕೆ ಸಿದ್ದರಾಮಯ್ಯ ಆಗಮನ

Update: 2022-11-30 10:27 GMT

ಬೆಳ್ತಂಗಡಿ, ನ.30: 'ಜಿಲ್ಲೆಯ ಇತಿಹಾಸ ಪ್ರಸಿದ್ಧ ವೇಣೂರು ಪೆರ್ಮುಡ ಹೊನಲು ಬೆಳಕಿನ 30ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳ ಡಿ.3 ಮತ್ತು 4ರಂದು ನಡೆಯಲಿದೆ. ಡಿ.4ರಂದು ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂಬಳ ಕೂಟದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ' ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಕುಕ್ಕೆಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

'ಈ ವರ್ಷ 30ನೇ ವರ್ಷದ ಕಂಬಳವಾಗಿದ್ದು, ನಿಗದಿಯಂತೆ 24 ಗಂಟೆಯೊಳಗೆ ಮುಗಿಸಲು ಎಲ್ಲಾ ಸಿದ್ಧತೆಗಳನ್ನು, ಅದಕ್ಕೆ ಬೇಕಾದ ವಿವಿಧ ಸಮಿತಿಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ' ಎಂದರು.

ಕಂಬಳ ಸಮಿತಿಯ ಅಧ್ಯಕ್ಷ ನಿತೀಶ್ ಕೋಟ್ಯಾನ್ ಮಾತನಾಡಿ, ಕಂಬಳವನ್ನು ಡಿ.3ರಂದು ಬೆಳಗ್ಗೆ 8:30ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಉದ್ಘಾಟಿಸಲಿದ್ದಾರೆ. ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ಪೃಥ್ವಿ ಸಾನಿಕಂ, ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ವಸಂತ ಬಂಗೇರ ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿಪಕ್ಷ ಉಪ ನಾಯಕ ಬಿ.ಕೆ.ಹರಿಪ್ರಸಾದ್, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗಣ್ಯರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

'ಕಂಬಳದಲ್ಲಿ ಕನೆ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಹೀಗೆ ಒಟ್ಟು 6 ವಿಭಾಗದಲ್ಲಿ ಕೋಣಗಳ ಓಟದ ಸ್ಪರ್ಧೆಯು ನಡೆಯಲಿದೆ. ಈ ಹಿಂದೆ ಇದ್ದಂತೆ ಜಾಗದ ತಕರಾರು ಇಲ್ಲವಾಗಿದ್ದು, ಒಟ್ಟು 200ಕ್ಕಿಂತ ಅಧಿಕ ಜೋಡಿ ಎತ್ತುಗಳು ಭಾಗವಹಿಸುವ ನಿರೀಕ್ಷೆ ಇದೆ' ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಮೋನಿಸ್, ಸಲಹೆಗಾರ ಪದ್ಮನಾಭ ಸಾಲ್ಯಾನ್ ಮಾಲಾಡಿ, ಸದಸ್ಯರಾದ ದಯಾನಂದ ದೇವಾಡಿಗ, ಜಯಂತ ಕೋಟ್ಯಾನ್ ಉಪಸ್ಥಿತರಿದ್ದರು.

Similar News