ಲೈಂಗಿಕ ಅಲ್ಪಸಂಖ್ಯಾತರ ಏಳಿಗೆಗೆ ಕಾರ್ಯಕ್ರಮ: ಅಕ್ಕೈ ಪದ್ಮಶಾಲಿ

Update: 2022-11-30 15:09 GMT

ಬೆಂಗಳೂರು, ನ.30: ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಲೈಂಗಿಕ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಏಳಿಗೆಗಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ್ತಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಕೈ ಪದ್ಮಶಾಲಿ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಾಗೂ ಸಹಸ್ರ ನಾಗರಿಕ ಚಳವಳಿಗಳ ವಿಚಾರಗಳ ಕುರಿತು ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಲೈಂಗಿಕ ಅಲ್ಪಸಂಖ್ಯಾತರಿಗೆ ರಾಜಕೀಯ ಸ್ಥಾನ ಮಾನ ಸೇರಿದಂತೆ ಇನ್ನಿತರೆ ಸೌಲಭ್ಯಗಳ ಮೂಲಕ ಈ ಸಮುದಾಯದ ಕಲ್ಯಾಣಕ್ಕೆ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಲಾಯಿತು. ಚುನಾವಣೆಗಳ ಪ್ರಣಾಳಿಕೆಯಲ್ಲೂ ಈ ಸಮುದಾಯದ ಪ್ರಗತಿಗೆ ಆದ್ಯತೆ ನೀಡಲು ಕಾಂಗ್ರೆಸ್ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಮುಖ್ಯವಾದ ಮೂಲಭೂತ ಹಕ್ಕು. ಆದರೆ ಮನುಷ್ಯರ ನಡುವೆ ತಾರತಮ್ಯ ಇದ್ದು, ಅದು ಕೆಲವು ಮಾನವ ನಿರ್ಮಿತ ತಾರತಮ್ಯಗಳು. ಅದಕ್ಕೆ ಸಮಾಜದಲ್ಲಿ ದೊಡ್ಡ ಹೋರಾಟ ನಡೆದಿದೆ. ಜಾತಿ ಆಧಾರದಲ್ಲಿ ಅಲ್ಪಸಂಖ್ಯಾತರ ಸಮಸ್ಯೆ ಬಗೆಹರಿಸುವಂತಹುದು. ಇಲ್ಲಿ ನಡೆಯುವ ಶೋಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಕ್ಕೈ ನುಡಿದರು.

Similar News