ನ್ಯೂಸ್ ಲಾಂಡ್ರಿ ವಿರುದ್ಧ ತೆರಿಗೆ ವಂಚನೆ ಆರೋಪ: 3 ಅರ್ಜಿಗಳನ್ನು ತಿರಸ್ಕರಿಸಿದ ದಿಲ್ಲಿ ನ್ಯಾಯಾಲಯ

Update: 2022-11-30 16:45 GMT

ಹೊಸದಿಲ್ಲಿ, ನ. 30: ಕಂಪೆನಿ ಷೇರುಗಳ ಮೌಲ್ಯಮಾಪನಕ್ಕೆ ಸಂಬಂಧಿಸಿ ಸುದ್ದಿ ವೆಬ್‌ಸೈಟ್‌(Website) ನ್ಯೂಸ್ ಲಾಂಡ್ರಿ, ಅದರ ಸಹ ಸಂಸ್ಥಾಪಕ ಅಭಿನಂದನ್ ಸೆಖ್ರಿ (Abhinandan Sekhri)ಹಾಗೂ ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಮೂರು ಅರ್ಜಿಗಳನ್ನು ದಿಲ್ಲಿ ನ್ಯಾಯಾಲಯ ತಿರಸ್ಕರಿಸಿದೆ.

ಸೆಖ್ರಿ, ಕಂಪೆನಿಯ ಪಾಲುದಾರರಾಗಿರುವ ಲೆಕ್ಕ ಪರಿಶೋಧಕ ಸಂಸ್ಥೆ ಹಾಗೂ ಇತರರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿ ಆರೋಪಿಸಿದ್ದಾರೆ. ಹಿಂದಿನ ಮೌಲ್ಯ ಮಾಪನ ವರ್ಷಗಳಲ್ಲಿ ಕಂಪೆನಿಯ ನಷ್ಟವನ್ನು ಲೆಕ್ಕ ಹಾಕಲು ವಿಫಲವಾದ ನಕಲಿ ಮೌಲ್ಯ ಮಾಪನ ವರದಿ ಆಧರಿಸಿ ಅವರು ಷೇರುಗಳನ್ನು ನೀಡುವ ಮೂಲಕ ತೆರಿಗೆ ವಂಚಿಸಲಾಗಿದೆ ಎಂದು ಅಧಿಕಾರಿ ಆರೋಪಿಸಿದ್ದರು.

ಮೌಲ್ಯಮಾಪನ ವರದಿಗಳು ನಿಜವಾಗಿರುವುದರಿಂದ  ಹಾಗೂ ಆದಾಯ ತೆರಿಗೆ ಇಲಾಖೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರುವುದರಿಂದ ಈ ಪ್ರಕರಣದಲ್ಲಿ ಯಾವುದೇ ಪಿತೂರಿ ನಡೆದಿಲ್ಲ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಅನುರಾಗ್ ಠಾಕೂರ್ (Anurag Thakur)ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.

ಅಲ್ಲದೆ, ಖಾತೆ ಪುಸ್ತಕ, ಬ್ಯಾಲೆನ್ಸ್ ಶೀಟ್ ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ತಪ್ಪು ನಮೂದು ಇದೆ ಎಂಬ ದೂರುದಾರನ ಪ್ರಕರಣ ಕೂಡ ಇದಲ್ಲ ಎಂದು ಅವರು ಹೇಳಿದ್ದಾರೆ.

ವ್ಯವಹಾರಗಳು ಗರ್ಭಾವಸ್ಥೆಯ ಅವಧಿಯನ್ನು ಹೊಂದಿರುವುದರಿಂದ ಹೆಚ್ಚಿನ ಸ್ಟಾರ್ಟ್ಅಪ್ ಗಳು ಆರಂಭಿಕ ಹಂತದಲ್ಲಿ ನಷ್ಟವನ್ನು ಅನುಭವಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಪ್ಲಿಪ್ಕಾರ್ಟ್, ಝೊಮೊಟೊ ಹಾಗೂ ಅಮೆಝಾನ್ ಇಂಡಿಯಾದಂತಹ  ಅಂತರ್ಜಾಲ ಆಧಾರಿತ ವೇದಿಕೆಗಳನ್ನು ಉಲ್ಲೇಖಿಸಿ ಠಾಕೂರ್, ಈ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಭಾರೀ ನಷ್ಟ ಅನುಭವಿಸುತ್ತಿವೆ. ಆದರೆ, ಖಾಸಗಿ ಈಕ್ವಿಟಿ ಹೂಡಿಕೆದಾರರು ಅವರಿಗೆ ಸಾವಿರಾರು ಕೋಟಿಗಳಲ್ಲಿ ಮೌಲ್ಯ ನೀಡುತ್ತಾರೆ ಹಾಗೂ ಚಂದಾದಾರರಾಗುತ್ತಾರೆ ಎಂದರು.

Similar News