ಪ್ರಕೃತಿ ಮತ್ತು ಮನುಷ್ಯನ ಸಾವಯವ ಸಂಬಂಧ ನಿರೂಪಿಸುವ ಕೃತಿ ಬೆಳಕಿನ ಬೇಸಾಯ

Update: 2022-12-01 04:55 GMT

ಇಂದು ನಾವೊಂದು ವಿಷಮ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಅದರಲ್ಲೂ ದೇಶದ ಶೇ. 60ರಷ್ಟು ಮಂದಿ ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರ ಅವನತಿಯ ಹಾದಿಯನ್ನು ತುಳಿದಿರುವ ದಾರುಣತೆ ನಮ್ಮ ಕಣ್ಣ ಮುಂದಿದೆ. ಕಳೆದ ಹದಿನೈದು ವರ್ಷಗಳಲ್ಲಿ ನಾಲ್ಕು ಲಕ್ಷದಷ್ಟು ರೈತರು ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು, ಬೇಸಾಯ ಬದುಕಿನ ತಲ್ಲಣದ ತೀವ್ರತೆಗೆ ಉದಾಹರಣೆಯಾಗಿದೆ. ಅದರಲ್ಲಿ ಅಂತರ್‌ರಾಷ್ಟ್ರೀಯ ಒಪ್ಪಂದಗಳು, ಸರಕಾರದ ನೀತಿ ನಿಯಮಗಳು, ಕೃಷಿಗಾಗಿ ವಿನಿಯೋಗಿಸಬೇಕಿರುವ ದುಬಾರಿ ಬಂಡವಾಳ, ಅಸಮರ್ಪಕ ಮಾರುಕಟ್ಟೆ ಹಾಗೂ ಶೀತಲಗೃಹಗಳ ಕೊರತೆ ಹಾಗೂ ನಿಗದಿತ ಬೆಲೆ ಇಲ್ಲದಿರುವುದು... ಹೀಗೆ ಹತ್ತು ಹಲವು ಕಾರಣಗಳಿವೆ.

ಇಂದಿನ ತೀವ್ರ ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ಪರಿಣಾಮಗಳಾದ ತೀವ್ರ ಬರ, ಪ್ರವಾಹ, ಭೂ ಕುಸಿತ, ಗುಡ್ಡ ಕುಸಿತ, ಅಕಾಲಿಕ ಮಳೆ, ಅಕಾಲಿಕ ಚಳಿ, ಅಕಾಲಿಕ ಬೇಸಿಗೆ, ವನ್ಯ ಜೀವಿಗಳ ದಾಳಿ... ಹೀಗೆ ಬಹು ವಿಧಗಳಲ್ಲಿ ಬಲಿಪಶುಗಳಾಗುತ್ತಿರುವವರಲ್ಲಿ ಮೊದಲ ಸ್ಥಾನದಲ್ಲಿರುವುದು ರೈತ ಸಮುದಾಯ. ನಿಜಕ್ಕೂ ಇಂದು ನಾವು ಪರಿಸರ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಅದಕ್ಕೆ ಶೇ. 25ರಿಂದ 30ರಷ್ಟು ಅವೈಜ್ಞಾನಿಕ ಮತ್ತು ಅನೈಸರ್ಗಿಕ ಕೃಷಿ ಪದ್ಧತಿ ಕೂಡ ಕಾರಣವಾಗಿದೆ.

ವಿಪರೀತ ಪ್ರಮಾಣದಲ್ಲಿ ಕೃಷಿಯಲ್ಲಿ ಬಳಕೆಯಾಗುತ್ತಿರುವ ರಸಗೊಬ್ಬರ, ಕ್ರಿಮಿನಾಶಕ, ಕೀಟನಾಶಕದಂತಹ ವಿಷಗಳ ತಯಾರಿಕೆಯಿಂದ ಒಂದೆಡೆ ವಾಯುಮಾಲಿನ್ಯ ಹೆಚ್ಚಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಅವುಗಳನ್ನು ಭೂಮಿಗೆ ಸುರಿದು, ಮಣ್ಣು ಸುಟ್ಟು ಹೋಗುತ್ತಿದೆ. ಜೊತೆಗೆ ಕೃಷಿ ಉತ್ಪನ್ನಗಳನ್ನು ಬಳಸುವ ಜನ ಜಾನುವಾರು ಜೀವ ಜಂತುಗಳ ಬದುಕನ್ನು ವಿಷಮಯಗೊಳಿಸುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಇಂತಹ ದಾರುಣ ಸಂದರ್ಭವನ್ನು ಎದುರಿಸುವಂತಹ ರಚನಾತ್ಮಕ, ಕ್ರಿಯಾಶೀಲ ಪ್ರಯೋಗ ಅತ್ಯಂತ ಚಿಕ್ಕ ಪ್ರಮಾಣದ್ದಾದರೂ ಎಲ್ಲಿಂದಲಾದರೂ, ಯಾವುದೇ ರೂಪದಲ್ಲಿಯೇ ಕಂಡರೂ ಅದನ್ನು ಆತುಕೊಳ್ಳಬೇಕು. ಅಂತಹದ್ದೊಂದು ಆಶಾಕಿರಣ ಮೊನ್ನೆಯಷ್ಟೇ ಬಿಡುಗಡೆಯಾದ ‘ಬೆಳಕಿನ ಬೇಸಾಯ’ ಪುಸ್ತಕದಲ್ಲಿದೆ.

ಇದು ಕೃಷಿ ಸಿದ್ಧಾಂತವನ್ನು ನಿರೂಪಿಸುವ ಕೇವಲ ಜ್ಞಾನ ಅಥವಾ ವಿಜ್ಞಾನದ ಪುಸ್ತಕ ಅಲ್ಲ. ಅವಿನಾಶ್ ಎಂಬ ಉತ್ಸಾಹಿ, ಕ್ರಿಯಾಶೀಲ ಯುವ ರೈತ, ನಿಸರ್ಗಾಧಾರಿತ ಕೃಷಿಯ ಉಳಿವಿಗಾಗಿ ತನ್ಮೂಲಕ ಪ್ರಕೃತಿಯ ಉಳಿವಿಗಾಗಿ ಹಗಲಿರುಳೂ ತಪಿಸಿ, ಧ್ಯಾನಿಸಿ, ಹುಡುಕಾಟ ನಡೆಸಿ, ತಾನೇ ಸ್ವತಃ ಮಣ್ಣಿಗಿಳಿದು ಅನೇಕ ಪ್ರಯೋಗಗಳನ್ನು ಅನ್ವೇಷಣೆಗಳನ್ನು ಮಾಡುತ್ತಾ ಕಂಡುಕೊಂಡ ದರ್ಶನದ ಸಾರವನ್ನು ತಮ್ಮ ಸೂಕ್ಷ್ಮ ವ್ಯಾಪಕ ಓದು ಮತ್ತು ಅಧ್ಯಯನದ ಮೂಲಕ ದೃಢೀಕರಿಸಿಕೊಂಡು ಅತ್ಯಂತ ವೈಜ್ಞಾನಿಕ ಸಮೀಕರಣದ ಜೊತೆಗೆ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿರುವುದು ಮಹತ್ವದ್ದಾಗಿದೆ.

ಜೊತೆಗೆ ಕೇವಲ ತಾನಷ್ಟೇ ಇವೆಲ್ಲವನ್ನು ಅರಿತುಕೊಂಡರೆ ಸಾಲದು, ಹೆಚ್ಚಿನ ರೈತರಿಗೆ, ಜನರಿಗೆ ಇದು ಉಪಯೋಗ ಆಗಬೇಕು ಎನ್ನುವ ತುಡಿತವಿರುವ ಅವಿನಾಶ್, ರಾಜ್ಯಾದ್ಯಂತ ಹಾಗೂ ಪಕ್ಕದ ರಾಜ್ಯಗಳಲ್ಲಿ ಕೂಡ ಕೆಲವು ವರ್ಷಗಳಿಂದ ನಿರಂತರ ಈ ಸಂಬಂಧಿತ ಕಾರ್ಯಾಗಾರಗಳನ್ನು ಮಾಡುತ್ತಾ ಬಂದಿದ್ದಾರೆ. ಇದನ್ನೊಂದು ಆಂದೋಲನವಾಗಿಸುವ ಪ್ರಯತ್ನದಲ್ಲಿದ್ದಾರೆ. ಅವರ ಈ ತೀವ್ರ ಆಸಕ್ತಿ, ಉತ್ಸಾಹ, ಪ್ರಯೋಗಶೀಲತೆಯನ್ನು ಮೊದಲಿನಿಂದಲೂ ಬೆರಗಿನಿಂದ, ಕುತೂಹಲದಿಂದ ನೋಡುತ್ತಾ ಬಂದಿರುವ ನನಗೆ, ಅವಿನಾಶ್ ಇವತ್ತಿನ ದೊಡ್ಡ ಭರವಸೆಯಾಗಿ ಕಾಣುತ್ತಿದ್ದಾರೆ.

ಪ್ರಕೃತಿಯಲ್ಲಿ ಪ್ರತೀ ಕ್ಷಣವೂ ನಡೆಯುತ್ತಿರುವ ಅದ್ಭುತ ಪ್ರಕ್ರಿಯೆಗಳನ್ನು ಆಚರಣೆಗಳನ್ನು ನಾವೇನಾದರೂ ಅರ್ಥ ಮಾಡಿಕೊಳ್ಳುತ್ತಾ ಹೋದರೆ- ಅದೆಷ್ಟು ಬೆರಗು, ಕುತೂಹಲ, ವಿಸ್ಮಯ ಮತ್ತು ಹೊಸತನವನ್ನದು ನಮ್ಮಲ್ಲಿ ಮೂಡಿಸುತ್ತದೆ. ಜೊತೆಗೆ ಜೀವಿಗಳೆಲ್ಲಕ್ಕೂ ಇರುವ ಪರಸ್ಪರ ಅವಲಂಬನೆ ಮತ್ತು ಸಾವಯವ ಸಂಬಂಧದ ವ್ಯವಸ್ಥೆ ನಮಗೆ ಅರಿವಾಗುತ್ತಾ ಹೋಗುತ್ತದೆ.

ನಮ್ಮ ದೇಹದೊಳಗಿನ ಪ್ರತಿಯೊಂದು ಅಂಗಾಂಗ ಒಂದಕ್ಕೊಂದು ಪೂರಕವಾಗಿ ಹೇಗೆ ಕೆಲಸ ಮಾಡುತ್ತಿದೆಯೋ ಪ್ರಕೃತಿಯೊಳಗೂ ಇದೇ ರೀತಿಯ ಪರಸ್ಪರ ಪೂರಕ ವ್ಯವಸ್ಥೆ ಇದೆ. ದೇಹದ ಒಂದು ಅಂಗ ಇಲ್ಲದಿದ್ದರೂ, ಊನವಾದರೂ ಇಡೀ ಪ್ರಕ್ರಿಯೆ ತಾಳ ತಪ್ಪುವ ರೀತಿಯಲ್ಲಿಯೇ ಪ್ರಕೃತಿಯ ಒಂದು ಅಂಗ ನಿಷ್ಕ್ರಿಯವಾದರೂ ಎಲ್ಲವೂ ಅಸ್ತವ್ಯಸ್ತವಾಗುತ್ತದೆ ಎಂಬುದು ನಮಗೆ ಮೊದಲು ಅರ್ಥವಾಗಬೇಕು. ಆಗ ಮನುಷ್ಯ ತಾನು ಸ್ವಯಂಭು ಅಲ್ಲ ಎನ್ನುವುದು ಅರಿವಿಗೆ ಬರುತ್ತದೆ. ಆದರೆ ಇವನ್ನೆಲ್ಲ ಇವತ್ತು ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಮನುಷ್ಯನಿಲ್ಲದೇ ಇದ್ದರೂ ಈ ಭೂಮಿ ಹೀಗೇ ಮುಂದುವರಿಯುತ್ತದೆ. ಜೀವ ವಿಕಸನ ಕ್ರಿಯೆಯಲ್ಲಿ ಮನುಷ್ಯ ತೀರಾ ಇತ್ತೀಚಿನ ಸೇರ್ಪಡೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.

ಮನುಷ್ಯ ಜೀವಿಯ ಉಗಮಕ್ಕೆ ಮೊದಲೇ ಇಲ್ಲಿ- ಸಹಸ್ರಾರು ಪ್ರಾಣಿ, ಪಕ್ಷಿ, ಕೀಟ, ಹುಳ, ಹುಪ್ಪಟೆಗಳ ಪ್ರಭೇದಗಳು ಜನಿಸಿ ಜೀವಿಸಲಾರಂಭಿಸಿವೆ. ನಮಗೆ ಈ ಭೂಮಿ ಹಾಗೂ ಅದರ ಸಂಪನ್ಮೂಲಗಳು, ಸಕಲ ಜೀವ ಜಂತುಗಳ ಸಹಕಾರವಿಲ್ಲದಿದ್ದರೆ ಇಲ್ಲಿ ಬದುಕಲಿಕ್ಕೆ ಖಂಡಿತ ಸಾಧ್ಯವಿಲ್ಲ. ಆದರೆ ಅವನ್ನೆಲ್ಲ ಬೇಕಾಬಿಟ್ಟಿ ಬಳಸಿದ್ದು ಮತ್ತು ಅದರ ಮಹತ್ವವನ್ನು ನಿರ್ಲಕ್ಷಿಸಿದ್ದರಿಂದಲೇ ಇವತ್ತು ಭೂಮಿಯ ಸತ್ವ, ಪರಿಸರದ ಸತ್ವ ಎರಡೂ ನಾಶಗೊಂಡು ನಮ್ಮ ಪ್ರಾಕೃತಿಕ ವ್ಯವಸ್ಥೆ ಈ ತಳಾತಳದ ಹಂತಕ್ಕೆ ಬಂದು ನಿಂತಿದೆ. ಮತ್ತದನ್ನು ಈಗಲಾದರೂ ಶತಾಯಗತಾಯ ಸರಿಪಡಿಸಲಿಕ್ಕೆ ಹೇಗೆಲ್ಲಾ ಪ್ರಯತ್ನಿಸಬೇಕು ಎನ್ನುವ ಎಚ್ಚರವನ್ನು ಈ ‘ಬೆಳಕಿನ ಬೇಸಾಯ’ ಕೃತಿ ನಮಗೆ ಹಲವು ಆಯಾಮಗಳಲ್ಲಿ, ಸಮಗ್ರವಾಗಿ ಕಲಿಸುತ್ತಾ ಹೋಗುತ್ತದೆ.

ಹೀಗಾಗಿ ಈ ಕೃತಿ, ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ ಯುವಜನತೆಗೆ, ಮಕ್ಕಳಿಗೆ ಕೂಡ -ಜೀವಜಾಲಕ್ಕೂ ಮತ್ತು ಪರಿಸರ ವ್ಯವಸ್ಥೆಗೂ ಇರುವ ಸಂಬಂಧಗಳ ಕುರಿತು ಅಮೂಲ್ಯ ಒಳನೋಟಗಳನ್ನು, ದರ್ಶನವನ್ನೂ ನೀಡುತ್ತದೆ. ಒಂದೆಡೆ ನಿಲ್ಲಲಿಕ್ಕೆ ಪ್ರಾರಂಭಿಸಿದ ಮನುಷ್ಯ ಸಂಕುಲ, ಕೃಷಿಯನ್ನು ಪ್ರಾರಂಭಿಸಿದಾಗ ಮನುಷ್ಯ ಮತ್ತು ಭೂಮಿಯ ಸಂಬಂಧ ಹೇಗಿತ್ತು? ಅದು ಅತ್ಯಂತ ಸಹಜವಾಗಿತ್ತು ಮತ್ತು ನೈಸರ್ಗಿಕವಾಗಿತ್ತು. ಪ್ರಕೃತಿಯ ಸೂಕ್ಷ್ಮಗಳು ಮನುಷ್ಯ ಜೀವಿಗೆ ಸ್ಪಂದಿಸುತ್ತಿತ್ತು. ಬಿತ್ತುವುದು ತಾನಾದರೂ, ಬೀಜವೊಂದು ಫಲವಾಗಬೇಕೆಂದರೆ ಗಾಳಿ, ನೀರು, ಬೆಳಕು, ಮಣ್ಣಿನ ಜೊತೆಗೆ-ಎರೆಹುಳ, ಜೇನುನೊಣ, ಸೂಕ್ಷ್ಮಾಣುಗಳು, ಅನೇಕ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟದ ಸಾವಯವ ಸಮ್ಮಿಲನದಿಂದ ಮಾತ್ರ ಸಾಧ್ಯ ಎಂಬ ಅರಿವಿತ್ತು. ಆದರೆ ನಾವು ಆಧುನಿಕರಾಗುತ್ತಾ ಪ್ರಕೃತಿಯಿಂದ ದೂರವಾಗುತ್ತಾ ಕೃತಕರಾಗುತ್ತಾ ಹೋದಂತೆ ಈ ಸತ್ಯಗಳೂ ನಮ್ಮಿಂದ ನಿಧಾನವಾಗಿ ಕಳಚಿಕೊಳ್ಳಲಾರಂಭಿಸಿತು. ಈಗಲೂ ಆದಿವಾಸಿಗಳಲ್ಲಿರುವ ಈ ಪ್ರಕೃತಿ ಜ್ಞಾನ ಅದ್ಭುತವಾದದ್ದು. ನಾವೀಗ ಮತ್ತೆ ಆ ಅರಿವನ್ನು ವಿಜ್ಞಾನದ ಮೂಲಕ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಅವಿನಾಶ್‌ರ ಈ ‘ಬೆಳಕಿನ ಬೇಸಾಯ’ ಕೂಡ ಆ ಪ್ರಯತ್ನದ ಮುಂದುವರಿಕೆ. ಪ್ರಕೃತಿ ಆಧಾರಿತ ಕೃಷಿಯ ಕಣಕಣಗಳನ್ನೂ ಅವರು ಅದಮ್ಯ ಪ್ರೀತಿಯಿಂದ, ಅನುಭವದಿಂದ ಕಲಿತುಕೊಳ್ಳುತ್ತಾ ಹೋಗಿರುವುದು ಇಲ್ಲಿನ ಪ್ರತೀ ಪುಟದಲ್ಲೂ ಕಾಣುತ್ತದೆ. ಹವಾಮಾನ ತುರ್ತು ಪರಿಸ್ಥಿತಿಯಲ್ಲಿ ಇಂದು ಜಗತ್ತು ಬೇಯುತ್ತಿದೆ. ಹಾಗಾಗಿ ಯಾವುದೇ ಹೆಸರಿನ, ರೀತಿಯ ನೈಸರ್ಗಿಕ ಕೃಷಿಪದ್ಧತಿಗಾದರೂ ಸರಿ ಸರಕಾರದಿಂದ ಬೆಂಬಲ, ಅನುದಾನಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರುವ ಆಂದೋಲನ ತುರ್ತಾಗಿ ರೂಪುಗೊಳ್ಳಬೇಕು. ಈಗಾಗಲೇ ಪಕ್ಕದ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ನೈಸರ್ಗಿಕ ಕೃಷಿಯನ್ನು ಸರಕಾರದ ಭಾಗವಾಗಿ ಪ್ರಚಾರ ಮಾಡಲಾಗುತ್ತಿದೆ.

ತರಬೇತಿ ಕೊಡಲಾಗುತ್ತಿದೆ. ಪ್ರಯೋಗಗಳಿಗೆ ಬೆಂಬಲ ನೀಡಲಾಗುತ್ತಿದೆ. ಕರ್ನಾಟಕದಲ್ಲಿಯೂ ನೈಸರ್ಗಿಕ ಕೃಷಿ ರೈತರಿಗೆ ಇಂತಹ ಬೆಂಬಲ ದೊರೆಯಬೇಕು. ಪ್ರತಿಯೊಂದು ಪಕ್ಷವೂ ಇದನ್ನು ಆದ್ಯತೆಯಾಗಿ ಅನುಷ್ಠಾನಗೊಳಿಸಲು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕೃತಿ ಕೇಂದ್ರಿತ ಕೃಷಿಯನ್ನು ಸೇರಿಸಿಕೊಳ್ಳಬೇಕು. ಮಾಧ್ಯಮಗಳಿಂದಲೂ ಈ ಬಗೆಯ ನೈಸರ್ಗಿಕ ಕೃಷಿ ಪ್ರಯೋಗಗಳಿಗೆ ವ್ಯಾಪಕ ಪ್ರಚಾರ ದೊರೆಯಬೇಕು. ಈ ನಿಟ್ಟಿನಲ್ಲಿ ಅವಿನಾಶ್ ಅವರು ಬೆಳಕಿನ ಬೇಸಾಯದಲ್ಲಿ ಪ್ರಸ್ತಾಪಿಸಿರುವ ಫುಡ್ ಫಾರೆಸ್ಟ್- ಆಹಾರ ಬನ ಪರಿಕಲ್ಪನೆಯು, ರೈತನ ಆರ್ಥಿಕ ಸ್ವಾವಲಂಬನೆಗೆ ಪೂರಕವಾದೊಂದು ಮಾದರಿಯಷ್ಟೇ ಅಲ್ಲ ಅಪೌಷ್ಟಿಕತೆಯಿಂದ ನರಳುತ್ತಿರುವ ಹಳ್ಳಿಗಾಡಿನ ಬಡ ಸಮುದಾಯಕ್ಕೆ ಜೀವ ತುಂಬುವಂತಹದ್ದೂ ಆಗಬಹುದಾಗಿದೆ.

ತುಂಡು ಭೂಮಿಯೂ ಇಲ್ಲದ ಸಮುದಾಯ ಇನ್ನೂ ನಮ್ಮಲ್ಲಿ ಹೆಚ್ಚಾಗಿಯೇ ಇದೆ. ಅವರನ್ನೂ ಒಳಗೊಳ್ಳುವಂತೆ ಸಹಕಾರಿ ತತ್ವದಲ್ಲಿ ನೈಸರ್ಗಿಕ ಕೃಷಿಯನ್ನು ರೂಢಿಸುವ ಪ್ರಯತ್ನಗಳಾಗಬೇಕಿದೆ. ಹೀಗಾಗಿ ಇದನ್ನು ಕಲ್ಯಾಣ ಕನಸಿನ ತತ್ವವಾಗಿಯೂ ಬಳಸಿಕೊಳ್ಳಬೇಕಿದೆ.

ಇದಕ್ಕಾಗಿ ಗ್ರಾಮ ಪಂಚಾಯತ್ ಮೂಲಕ ಪ್ರತೀ ಹಳ್ಳಿಯ ಗುಂಡುತೋಪು, ಗೋಮಾಳ ಅಥವಾ ಊರೊಟ್ಟಿನ ಭೂಮಿಗಳಲ್ಲಿ ಜನಸಮುದಾಯದ ಸಹಭಾಗಿತ್ವದಲ್ಲಿ ಅಥವಾ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಆಹಾರ ಬನವನ್ನು ನಿರ್ಮಾಣ ಮಾಡಬಹುದಾಗಿದೆ. ಅದು ಮನುಷ್ಯರಿಗೆ ಮಾತ್ರವಲ್ಲ ಜಾನುವಾರು, ಪಕ್ಷಿ, ಕ್ರಿಮಿ, ಕೀಟಗಳಿಗೂ ಆಸರೆ ನೀಡುವುದರಲ್ಲಿ ಸಂಶಯವಿಲ್ಲ.

ಹಾಸನದ ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ಸರಕಾರಿ ಖಾಲಿ ಜಾಗಗಳಲ್ಲಿ ಈ ರೀತಿಯ ಕೆಲವು ಹಣ್ಣಿನ ತೋಪು ನಿರ್ಮಾಣದ ಪ್ರಯತ್ನಗಳಾಗಿವೆ. ಮನಸಿದ್ದರೆ ಖಂಡಿತ ಮಾರ್ಗವೂ ಕಾಣಲು ಸಾಧ್ಯವಿದೆ. ಅದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ. ಉತ್ತರ ರಾಜಸ್ಥಾನದ ಲಾಪೋಡಿಯಾದ ಮರುಭೂಮಿ ಪ್ರದೇಶದ ರೈತ ಲಕ್ಷ್ಮಣಸಿಂಗ್ ಅವರು, ನಾಲ್ಕು ದಶಕದ ಹಿಂದೆ ಆ ಭಾಗದ ಹಳ್ಳಿಗಳಿಗೆ ಸೂಕ್ತವಾಗುವ ನೆಲ-ಜಲ ಸಂರಕ್ಷಣೆಯ ಮಾದರಿಯೊಂದನ್ನು ರೂಪಿಸಿ, ಬರ ಹಾಗೂ ನೆರೆಯನ್ನು ಏಕಕಾಲಕ್ಕೆ ನಿಯಂತ್ರಿಸಿ ಇತಿಹಾಸ ನಿರ್ಮಿಸಿದರು.

ಈ ಊರಿನ ಯುವಕರನ್ನು ಸಂಘಟಿಸಿ ಅಕ್ಕಪಕ್ಕದ 20 ಗ್ರಾಮಗಳ 31 ಕೆರೆಗಳನ್ನು ಜೋಡಿಸಿದರು. ಇದರಿಂದ ಸುತ್ತಲ 350 ಹಳ್ಳಿಗಳಿಗೆ ನೀರುಣಿಸಲು ಸಾಧ್ಯವಾಯಿತು. ತನ್ಮೂಲಕ ಬರಡು ಮರುಭೂಮಿಯ ಹಳ್ಳಿಗಳಲ್ಲಿ ಹಸಿರು ಸೃಷ್ಟಿಸಿದ್ದೊಂದು ಸಾಹಸ ಗಾಥೆ. ಇದು ಪವಾಡವಲ್ಲ. ಪ್ರಕೃತಿಯಲ್ಲೇ ಇರುವ ಉತ್ತರಗಳು. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆಯಷ್ಟೇ ನಮಗಿಂದು ಬೇಕಿರುವುದು.

‘‘ನಿಸರ್ಗದ ಒಂದೊಂದೇ ಗುಟ್ಟುಗಳನ್ನರಿತು ನಮ್ಮ ಸೋಲಿನ ಮೂಲ ಎಲ್ಲಿದೆ ಎಂದು ಕಂಡುಕೊಂಡೆ’’ ಎನ್ನುವ ಅಷ್ಟಾಗಿ ಶಾಲಾ ಶಿಕ್ಷಣದ ಜ್ಞಾನವನ್ನು ಕಲಿತಿಲ್ಲದ ಲಕ್ಷ್ಮ್ಮಣ್‌ಸಿಂಗ್ ಅವರ ಅನುಭವದ ಅರಿವಿನ ನಡೆ ನಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ. ಬಹುಶಃ ಅವಿನಾಶ್‌ರ ತೀವ್ರ ಹುಡುಕಾಟ, ಅದಮ್ಯ ಕನಸು ಈ ರೀತಿಯದೇ ಎನಿಸುವುದಕ್ಕೆ ಬೆಳಕಿನ ಬೇಸಾಯ ಕೃತಿಯಲ್ಲಿ ಹಲವು ಸುಳುಹುಗಳಿವೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾದ ಈ ಪುಸ್ತಕವನ್ನು ಕೊಳ್ಳಲು ಬಯಸುವವರು ದೂ.ಸಂ. 9449174662 ಸಂಪರ್ಕಿಸಬಹುದು.

Similar News