ಐಒಸಿಎಲ್ ಗುತ್ತಿಗೆ ನಿವೇಶನಕ್ಕೆ ಭೂಗಳ್ಳರಿಂದ ಬೆದರಿಕೆ, ಅಧಿಕಾರಿಗಳು ಶಾಮೀಲು: ರಮೇಶ್‍ಬಾಬು ಆರೋಪ

Update: 2022-12-01 12:43 GMT

ಬೆಂಗಳೂರು, ಡಿ. 1: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ಐಒಸಿಎಲ್‍ಗೆ ಗುತ್ತಿಗೆ ನೀಡಿರುವ ನಿವೇಶನ ಭೂಗಳ್ಳರಿಂದ ಅಕ್ರಮವಾಗಿ ಕಬಳಿಕೆಯಾಗುತ್ತಿದ್ದು, ಇದರಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು  ಆರೋಪಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ''ಬಿಡಿಎ ಹಂಚಿಕೆ ಮಾಡಿರುವ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಸ್ವತ್ತನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಐಓಸಿಎಲ್‍ಗೆ ಹಂಚಿಕೆಯಾಗಿರುವ ನಿವೇಶನ ಕೋಟ್ಯಂತರ ರೂ. ಬೆಲೆ ಬಾಳುತ್ತಿದ್ದು, ಅದನ್ನು ಕಬಳಿಸಲು ಮಾಜಿ ಕಾರ್ಪೊರೇಟರ್ ಗಳು ಮತ್ತು ಕೆಲವು ಭೂಗಳ್ಳರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಗೆ ತಡೆಯೊಡ್ಡಿ ಅಲ್ಲಿನ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ'' ಎಂದು ದೂರಿದರು.

2019ರಲ್ಲಿ ಐಒಸಿಎಲ್‍ಗೆ ಬಿಡಿಎ 30 ವರ್ಷಗಳ ಅವಧಿಗೆ ಸ್ವಾಧೀನ ಪತ್ರದ ಮೂಲಕ ಗುತ್ತಿಗೆ ನೀಡಲಾಗಿತ್ತು. ನಿವೇಶನದಲ್ಲಿ ಪೆಟ್ರೋಲಿಯಂ ಸಂಗ್ರಹಣೆ, ಸ್ಫೋಟಕಗಳ ಉಪ ನಿಯಂತ್ರಕರಿಂದ ಅನುಮತಿ ಪತ್ರ, ಕಟ್ಟಡ ಮಂಜೂರಾತಿ ಯೋಜನೆ ಇತ್ಯಾದಿಗಳನ್ನು ಪಡೆದು ಐಒಸಿಎಲ್ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಆದರೆ ಇಲ್ಲಿ ಸರಕಾರಿ ಸ್ವತ್ತುಗಳನ್ನು ಕಬಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಇದರಲ್ಲಿ ಸರಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ನ್ಯಾಯಾಲಯದ ನಿರ್ದೇಶನದಂತೆ, ಸರ್ವೇ ಇಲಾಖೆಯ ಎಡಿಎಲ್‍ಆರ್ ಮತ್ತು ಬಿಡಿಎ ಸರ್ವೇಯರ್‍ಗಳು ಜಂಟಿ ಸಮೀಕ್ಷೆ ಮಾಡಿ ಐಒಸಿಎಲ್ ಗುತ್ತಿಗೆ ಪಡೆದ ಸಿಎ ಸೈಟ್‍ಗೆ ಕ್ಲೀನ್‍ಚಿಟ್ ನೀಡಿದೆ. ಆದರೂ ಭೂಗಳ್ಳರು ಐಒಸಿಎಲ್ ಸಂಸ್ಥೆಯ ಸದರಿ ನಿವೇಶನದಲ್ಲಿ ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಅಕ್ರಮವಾಗಿ ಅತಿಕ್ರಮಿಸಲು ನಿರಂತರ ಅಡಚಣೆಯನ್ನು ಉಂಟುಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರವು ಕೇಂದ್ರದ ಸಂಸ್ಥೆಗೆ ಹಂಚಿಕೆ ಮಾಡಿರುವ ನಿವೇಶನವನ್ನು ಯಾವುದೇ ಅಡೆತಡೆಗಳಿಲ್ಲದೆ ನೀಡಬೇಕು. ಸರಕಾರಿ ಯೋಜನೆಗಳಿಗೆ ಅಡ್ಡಿಪಡಿಸುವ ಭೂಗಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಭೂಗಳ್ಳರಿಗೆ ಪರೋಕ್ಷವಾಗಿ ಸಹಕಾರ ನೀಡಿರುವ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

Similar News