ಕೇಂದ್ರ ಸಚಿವ ಆದೇಶವನ್ನು ಪಾಲಿಸದ ಐಟಿಐ ಕಾರ್ಖಾನೆ: ವಜಾಗೊಂಡ ಕಾರ್ಮಿಕರ ಆರೋಪ

ವರ್ಷ ಪೂರೈಸಿದ ಐಟಿಐ ಕಾರ್ಮಿಕರ ಪ್ರತಿಭಟನೆ

Update: 2022-12-01 17:30 GMT

ಬೆಂಗಳೂರು, ಡಿ. 1: ನಗರದಲ್ಲಿರುವ ಕೇಂದ್ರ ಸರಕಾರ ಒಡೆತನದ ಐಟಿಐ ಕಾರ್ಖಾನೆಯು 2021ರ ಡಿ.1ರಂದು 80 ಮಂದಿ ಕಾರ್ಮಿಕರನ್ನು ಏಕಕಾಲದಲ್ಲಿ ವಜಾ ಮಾಡಿದ್ದು, ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒಂದು ವರ್ಷದಿಂದ ವಜಾಗೊಂಡ ಕಾರ್ಮಿಕರು ಕಾರ್ಖಾನೆಯ ಮುಂಭಾಗ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಆದರೆ ಸರಕಾರ ಯಾವುದೇ ಕ್ರಮವಹಿಸಿಲ್ಲ ಎಂದು ವಜಾಗೊಂಡ ಕಾರ್ಮಿಕರು ತಿಳಿಸಿದ್ದಾರೆ. 

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಎ.28ರಂದು ಐಟಿಐ ಆಡಳಿತ ಮಂಡಳಿಗೆ ಪತ್ರ ಬರೆದು ಕಾರ್ಮಿಕರನ್ನು ಹಂತ-ಹಂತವಾಗಿ ಮರುನೇಮಕ ಮಾಡಿಕೊಳ್ಳಿ ಎಂದು ನಿರ್ದೇಶನ ನೀಡಿದ್ದರೂ, ಆಡಳಿತ ಮಂಡಳಿಯು ಮಂತ್ರಿಗಳ ನಿರ್ದೇಶನವನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ವಜಾಗೊಂಡ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಆಡಳಿತ ಮಂಡಳಿಯು ಒಪ್ಪಂದವನ್ನು ಮಾಡಿಕೊಂಡಿದ್ದು, ಅದನ್ನು ಜಾರಿಗೊಳಿಸಲು ನಿರಾಕರಿಸಿದೆ. ಅಲ್ಲದೆ, ಹೈಕೋರ್ಟ್‍ನಲ್ಲಿ ಪ್ರಕರಣವನ್ನು ಹೂಡಿದೆ. ಹೈಕೋರ್ಟ್ ವಿವಾದವನ್ನು ಪರಿಹರಿಸಲು ಪ್ರಕರಣವನ್ನು ಸಂಧಾನಕ್ಕೆ ವರ್ಗಾಯಿಸಿದೆ. ಆದರೆ ಸಂಧಾನ ಸಭೆಗಳಲ್ಲಿ ಆಡಳಿತ ಮಂಡಳಿಯು ಕಾರ್ಮಿಕರೊಂದಿಗೆ ರಾಜೀ ಮಾಡಿಕೊಳ್ಳಲು ನಿರಾಕರಿಸಿದೆ ಎಂದು ಕಿಡಿಕಾರಿದ್ದಾರೆ. 

Similar News