ಬೆಂಗಳೂರು: ಡಿ.6ಕ್ಕೆ ದಲಿತ ಸಂಘಟನೆಗಳ ಬೃಹತ್ ‘ಐಕ್ಯತಾ ಸಮಾವೇಶ'

Update: 2022-12-01 17:36 GMT

ಬೆಂಗಳೂರು, ಡಿ.1: ಆರೆಸ್ಸೆಸ್ ಹಾಗೂ ಬಿಜೆಪಿ ದುರಾಡಳಿತದ ವಿರುದ್ಧ ಅಂಬೇಡ್ಕರ್ ಪರಿನಿಬ್ಬಾಣ ದಿನವಾದ ಡಿ.6ರಂದು ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯು ತಿಳಿಸಿದೆ. 

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ದಲಿತ ಮುಖಂಡ ಮುನಿನಂಜಪ್ಪ ಮಾತನಾಡಿ, ಬಿಜೆಪಿ ಸರಕಾರವು ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿದೆ. ಹೈದರಾಬಾದ್ ಕೇಂದ್ರೀಯ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲರ ಸಾಂಸ್ಥಿಕ ಹತ್ಯೆಯ ಮೂಲಕ ಮೋದಿ ಸರಕಾರ ದಲಿತ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಆರಂಭಿಸಿದೆ ಎಂದು ಹೇಳಿದರು. 

ಜೆಎನ್‍ಯು ಸೇರಿದಂತೆ ದೇಶದ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿಯನ್ನು ಬಲಿಷ್ಟಗೊಳಿಸಿ, ಎಸ್ಸಿ-ಎಸ್ಟಿ ಹಾಗೂ ಓಬಿಸಿ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿದೆ. ಅಲ್ಲದೆ ಶಿಕ್ಷಣವನ್ನು ಕೇಸರಿಕರಣ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.  

ಸಾಮಾಜಿಕ ಹೋರಾಟಗಾರ್ತಿ ನಿರ್ಮಲಾ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ದಲಿತರನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ದಲಿತ ಮಹಿಳೆ ನೀರನ್ನು ಮುಟ್ಟಿದ್ದಾಳೆ ಎಂಬ ಕಾರಣಕ್ಕೆ ನೀರಿನ ಟ್ಯಾಂಕ್ ಅನ್ನು ತೊಳೆದಿದ್ದಾರೆ. ಮಹಿಳೆಯರ ಮೇಲೆ ನಿರಂತರವಾಗಿ ಹಲ್ಲೆಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. 

ದಲಿತ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ, ಸರಕಾರ ಯಾವುದೇ ಕ್ರಮವನ್ನು ಜರಿಗಿಸುತ್ತಿಲ್ಲ. ಹಾಗಾಗಿ ದಲಿತ ಉಳಿವಿಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಇದಕ್ಕೆ ಪೂರ್ವಭಾವಿಯಾಗಿ ಡಿ.6ರಂದು ಸಮಾವೇಶ ಆಯೋಜಿಸುತ್ತಿದ್ದು, 17 ದಲಿತ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಲಿವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಡಿ.ಸಂಪತ್, ಕ್ಯಾಲಸನಳ್ಳಿ ಶ್ರೀನಿವಾಸ್, ಪಾರ್ಥಿಬನ್, ಮಾವಳ್ಳಿ ವೆಂಕಟೇಶ್, ಗಂಗನಂಜಯ್ಯ, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. 

‘ಇಂದು ದೇಶ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಭಿನ್ನ ಅಲೋಚನೆಗಳ ಮೇಲೆ ದಾಳಿ ಮಾಡುವುದು, ಭಿನ್ನ ಧ್ವನಿಗಳ ದಮನ, ಭಿನ್ನ ವಿಚಾರಗಳನ್ನು ಹತ್ತಿಕ್ಕುವುದು ಬಿಜೆಪಿ ಸರಕಾರದಲ್ಲಿ ಸರ್ವೇ ಸಾಮಾನ್ಯ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ಆರ್ಥಿಕ ನೀತಿಗಳನ್ನು ಪ್ರಶ್ನಿಸಿದರೆ, ನ್ಯಾಯ ವಂಚಿತರಿಗಾಗಿ ನ್ಯಾಯವನ್ನು ಕೇಳಿದರೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಸರಕಾರವೆ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ನೀಡಿ, ಬುಡಮೇಲು ಮಾಡುತ್ತಿದೆ’

-ಕ್ಯಾಲಸನಹಳ್ಳಿ ಶ್ರೀನಿವಾಸ್, ದಲಿತ ಮುಖಂಡ  

Similar News