ಕೋಸ್ಟರಿಕಾ ವಿರುದ್ಧ ಗೆದ್ದರೂ ಫಿಫಾ ವಿಶ್ವಕಪ್‍ನಿಂದ ಹೊರಬಿದ್ದ ಜರ್ಮನಿ !

Update: 2022-12-02 01:55 GMT

ಹೊಸದಿಲ್ಲಿ: ಯೂರೋಪ್ ಫುಟ್ಬಾಲಿನ ಶಕ್ತಿಕೇಂದ್ರ ಎನಿಸಿದ ಬಲಿಷ್ಠ ಜರ್ಮನಿ ತಂಡ ಕತರ್‌ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಿಂದ ಅಚ್ಚರಿದಾಯಕವಾಗಿ ಹೊರಬಿದ್ದಿದೆ.

ಶುಕ್ರವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ 4-2 ಗೊಲುಗಳ ಜಯ ಸಾಧಿಸಿದರೂ, ನಾಕೌಟ್ ತಲುಪಲು ಜರ್ಮನಿ ತಂಡಕ್ಕೆ ಅದೃಷ್ಟ ಕೈಕೊಟ್ಟಿತು. ಇ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತು. ರಷ್ಯಾದಲ್ಲಿ ನಡೆದ ಕಳೆದ ವಿಶ್ವಕಪ್‍ನಲ್ಲಿ ಕೂಡಾ ಜರ್ಮನಿ ನಾಕೌಟ್ ಹಂತ ತಲುಪಲು ವಿಫಲವಾಗಿತ್ತು.

ಇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್ ವಿರುದ್ಧ 2-1 ಅಚ್ಚರಿಯ ಜಯ ಸಾಧಿಸಿದ ಜಪಾನ್ ಅಂತಿಮ 16ರ ಘಟ್ಟಕ್ಕೆ ಗುಂಪಿನ ಅಗ್ರಸ್ಥಾನಿಯಾಗಿ ಪ್ರವೇಶ ಪಡೆಯಿತು. ಶುಕ್ರವಾರದ ಪಂದ್ಯ ಸೋತರೂ ಉತ್ತಮ ಗೋಲು ಅಂತರದಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಸ್ಪೇನ್ ಮುಂದಿನ ಹಂತಕ್ಕೆ ಮುನ್ನಡೆಯಿತು. ಸ್ಪೇನ್ ಹಾಗೂ ಜರ್ಮನಿ ತಲಾ ನಾಲ್ಕು ಅಂಕಗಳನ್ನು ಗಳಿಸಿದ್ದವು. ಕೋಸ್ಟರಿಕ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವಿಶ್ವಕಪ್ ಅಭಿಯಾನದ ಮೊದಲ ಪಂದ್ಯದಲ್ಲೇ ಜಪಾನ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಜರ್ಮನಿ, ಕೋಸ್ಟರಿಕಾ ವಿರುದ್ಧದ ಪಂದ್ಯ ಆರಂಭಕ್ಕೆ ಮುನ್ನ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದ್ದರಿಂದ ನಾಕೌಟ್ ಹಂತಕ್ಕೆ ಮುನ್ನಡೆಯಲು ಎಲ್ಲ ಸಾಧ್ಯತೆಗಳೂ ಜರ್ಮನಿಯ ಪರ ಇರಬೇಕಿತ್ತು. ಜಪಾನ್-ಸ್ಪೇನ್ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡರೂ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ನಾಕೌಟ್ ತಲುಪುತ್ತಿತ್ತು. ಆದರೆ ಏಷ್ಯನ್ ತಂಡ ಟೂರ್ನಿಯಲ್ಲಿ ಎರಡನೇ ಅಚ್ಚರಿ ಜಯ ಸಾಧಿಸುವ ಮೂಲಕ ಜರ್ಮನಿಯ ಕನಸು ನುಚ್ಚು ನೂರಾಯಿತು.

Similar News