ಬೆಂಗಳೂರು ನಗರದ ಹೊರವಲಯದಲ್ಲಿ ಚಿರತೆಗಳು ಪ್ರತ್ಯಕ್ಷ; ಸೆರೆಗೆ ಮುಂದುವರಿದ ಕಾರ್ಯಾಚರಣೆ

Update: 2022-12-02 15:18 GMT

ಬೆಂಗಳೂರು, ಡಿ. 2: ಬೆಂಗಳೂರು ನಗರದ ಹೊರವಲಯದ ಸೋಮಾಪುರ ಸಮೀಪದ ತುರಹಳ್ಳಿ ರಾಜ್ಯ ಅರಣ್ಯದ ಸುತ್ತ ಕಾಣಿಸಿಕೊಂಡಿದ್ದ ಚಿರತೆಗಳ ಬಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಇವುಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಯೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಗಿದೆ. ಚಿರತೆ ಓಡಾಟದ ವಿಡಿಯೋಗಳು ಹರಿದಾಡುತ್ತಿವೆ. ಇನ್ನೂ, ಕೆಂಗೇರಿ, ಕುಂಬಳಗೋಡು, ದೇವನಹಳ್ಳಿ, ಚಿಕ್ಕಜಾಲ ಹಲವೆಡೆ ಚಿರತೆಗಳು ಕಾಣ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿದೆ.

ಎರಡು ವಾರಗಳಿಂದ ಅರಣ್ಯಾಧಿಕಾರಿಗಳು ಚಿರತೆಗಳನ್ನು ಹಿಡಿಯಲು ಎರಡು ಬೋನುಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸಿದ್ದಾರೆ. ಆದರೆ, ಚಿರತೆ ಬೋನಿಗೆ ಬೀಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ, ಕೆಂಗೇರಿಯ ಬಿಜಿಎಸ್ ಆಸ್ಪತ್ರೆ ಹಿಂಭಾಗದ ಗೇಟ್ ಬಳಿ ಗುರುವಾರ ಮುಂಜಾನೆ ಜಿಂಕೆಯ ಮೃತದೇಹ ಪತ್ತೆಯಾಗಿದೆ.

ಚಿರತೆ ದಾಳಿಯಿಂದಲೇ ಜಿಂಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಮೀಪದಲ್ಲೇ ಇರುವ ತುರಹಳ್ಳಿ ಅರಣ್ಯದಲ್ಲಿ ಚಿರತೆಗಳು ಇರುವ ಶಂಕೆ ಇದೆ. ಮತ್ತೊಂದೆಡೆ ಚಿಕ್ಕಜಾಲದ ಐಟಿಸಿ ಕಂಪೆನಿಯ ಯುನಿಟ್ ಬಳಿ ಚಿರತೆಗಳ ಚಲನ ವಲನ ಪತ್ತೆಯಾಗಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿ ಆ ಸ್ಥಳದಲ್ಲಿ ಚಿರತೆ ಸೆರೆಗೆ ಬೋನ್ ಇರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ‘ಐಟಿಸಿ ಕಾರ್ಖಾನೆ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ, ಈ ಪ್ರದೇಶದಲ್ಲಿ ಈವರೆಗೆ ಚಿರತೆಯ ಸುಳಿವೇ ಸಿಗುತ್ತಿಲ್ಲ. ಹೀಗಾಗಿ, ಚಿರತೆಯ ಓಡಾಟದ ಮೇಲೆ ನಿಗಾ ಇರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

Similar News