ಇಡಬ್ಲ್ಯುಎಸ್ ಮೀಸಲಾತಿ ಮತ್ತು ಶೇ.50ರ ಮಿತಿಯ ಪ್ರಶ್ನೆ

Update: 2022-12-03 03:39 GMT

1962ರಲ್ಲಿ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಮೀಸಲಾತಿಯ ಮೇಲಿನ ಶೇ.50ರ ಮಿತಿಯ ಬಗ್ಗೆ ಮಾತನಾಡಿತು. ಆದರೆ 1992ರಲ್ಲಿ ಮಂಡಲ್ ಆಯೋಗ ಪ್ರಕರಣ ಎಂದೇ ಕರೆಯಲಾಗುವ ‘ಇಂದ್ರಾ ಸಾಹ್ನಿ v/s ಭಾರತ ಸರಕಾರ’ ಪ್ರಕರಣದಲ್ಲಿ ಒಂಭತ್ತು ನ್ಯಾಯಾಧೀಶರ ಪೀಠವು ಶೇ.50ರ ಮಿತಿಯನ್ನು ನಿರ್ಧರಿಸಿತು. ಈಗ ಇಡಬ್ಲ್ಯುಎಸ್ ಸಿಂಧುತ್ವವನ್ನು ಎತ್ತಿಹಿಡಿದಿರುವ ನ್ಯಾ.ದಿನೇಶ್ ಮಹೇಶ್ವರಿ ಅವರ ಪ್ರಕಾರ, ಶೇ.50ರ ಮಿತಿಯು ಇಂದ್ರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸಂವಿಧಾನದ ಪರಿಚ್ಛೇದ 15(4), 15(5) ಮತ್ತು 16(4)ರಲ್ಲಿ ನಿಗದಿಪಡಿಸಲಾಗಿರುವ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಮಾತ್ರ ಅನ್ವಯವಾಗುತ್ತದೆ.

ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯುಎಸ್) ಕೋಟಾದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬಳಿಕ ಹಲವು ಬಗೆಯಲ್ಲಿ ಅದನ್ನು ವ್ಯಾಖ್ಯಾನಿಸಲಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳೂ ಭಿನ್ನ. ಮೀಸಲಾತಿ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಶೇ.50ಕ್ಕೆ ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ, ಈ ತೀರ್ಪು ಸಂವಿಧಾನದ ಉಲ್ಲಂಘನೆಯಾಗಲಿಲ್ಲವೇ ಎಂಬ ಪ್ರಶ್ನೆಯೂ ಎದ್ದಿತು. ಹಾಗೆಯೇ, ಇದು ಮೀಸಲಾತಿಯ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕುವುದೆ ಎಂಬ ನಿಟ್ಟಿನ ಚಿಂತನೆಗಳೂ ಶುರುವಾದವು.
ಇದರ ಬಗ್ಗೆ ವಿವರಿಸುವ ಮೊದಲು, ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಶೇ.50ರ ಮಿತಿಯನ್ನು ದಾಟಿರುವ ಉದಾಹರಣೆಗಳ ಕಡೆ ಸ್ವಲ್ಪಗಮನ ಕೊಡಬೇಕು.

ಇಡಬ್ಲ್ಯುಎಸ್ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಬಂದ ನಾಲ್ಕು ದಿನಗಳ ಬಳಿಕ ಜಾರ್ಖಂಡ್ ಸರಕಾರವು ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಒಟ್ಟು ಮೀಸಲಾತಿಯನ್ನು ಶೇ.60ರಿಂದ ಶೇ.77ಕ್ಕೆ ಹೆಚ್ಚಿಸುವ ಮಸೂದೆಯನ್ನು ಅಂಗೀಕರಿಸಿತು. ಕೇಂದ್ರವು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಒಂಭತ್ತನೇ ಶೆಡ್ಯೂಲ್‌ಗೆ ಸೇರಿಸಿದಾಗ ಈ ಮಸೂದೆ ಜಾರಿಗೆ ಬರಲಿದೆ.

ಸಂವಿಧಾನದ 31ಬಿ ವಿಧಿಯು ಈ ಶೆಡ್ಯೂಲ್‌ನಲ್ಲಿ ಹಾಕಲಾದ ಯಾವುದೇ ಕಾನೂನು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೇಳುತ್ತದೆ. ಆದಾಗ್ಯೂ, ಸಂವಿಧಾನದ ಮೂಲ ರಚನೆಗೆ ಸಂಬಂಧಿಸಿದಂತೆ ಈ ಕಾನೂನುಗಳನ್ನು ಪರಿಶೀಲನೆಗೆ ಒಳಪಡಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ಈ ಶೆಡ್ಯೂಲ್‌ನಲ್ಲಿ ಇರಿಸಲಾದ ಕಾನೂನುಗಳು ನ್ಯಾಯಾಂಗ ಪರಿಶೀಲನೆಯಿಂದ ಹೊರತಾಗುವುದಿಲ್ಲವಾದರೂ, ಇತರ ಕಾನೂನುಗಳಿಗೆ ಹೋಲಿಸಿದರೆ ಇವುಗಳನ್ನು ಅಷ್ಟು ಸುಲಭವಾಗಿ ತಿರಸ್ಕರಿಸಲಿಕ್ಕಾಗದು.

ಮೀಸಲಾತಿ ಪ್ರಮಾಣ ಈಗಾಲೇ ಶೇ.50ರ ಮಿತಿಯನ್ನು ಮೀರಿರುವ ರಾಜ್ಯಗಳಲ್ಲಿ ತಮಿಳುನಾಡು ಮುಖ್ಯವಾಗಿದೆ. 1993ರಲ್ಲಿ, ತಮಿಳುನಾಡು ಒಟ್ಟು ಶೇ. 69ರ ಕೋಟಾವನ್ನು ಎತ್ತಿಹಿಡಿಯುವ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಮೊದಲು, ರಾಜ್ಯದಲ್ಲಿ ಶೇ.69ರ ಕೋಟಾವನ್ನು ಕಾರ್ಯನಿರ್ವಾಹಕ ಆದೇಶಗಳ ಮೂಲಕ ಜಾರಿಗೊಳಿಸಲಾಯಿತು. ಈ ಕಾನೂನನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಒಂಭತ್ತನೇ ಶೆಡ್ಯೂಲ್‌ಗೆ ಸೇರಿಸಲಾಯಿತು. ತಮಿಳುನಾಡು ಕಾನೂನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಈ ನಿದರ್ಶನಗಳ ಹೊರತಾಗಿ, ಹಲವಾರು ಇತರ ರಾಜ್ಯಗಳು ತಮ್ಮ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚಿಸಲು ಬಯಸುತ್ತಿವೆ. ಇತ್ತೀಚೆಗೆ ಕರ್ನಾಟಕವು ಮೀಸಲಾತಿಯನ್ನು ಶೇ.56ಕ್ಕೆ ವಿಸ್ತರಿಸಲು ಮತ್ತು ಅದರ ಕಾನೂನನ್ನು ಒಂಭತ್ತನೇ ಶೆಡ್ಯೂಲ್‌ನಲ್ಲಿ ಇರಿಸಲು ನಿರ್ಧರಿಸಿದೆ. ಬಿಹಾರ ಮತ್ತು ಒಡಿಶಾ ರಾಜ್ಯಗಳು ಕೂಡ ಶೇ.50ರ ಮಿತಿಯನ್ನು ತೆಗೆದುಹಾಕುವ ಅಗತ್ಯವನ್ನು ಪ್ರತಿಪಾದಿಸುತ್ತಿವೆ.

ಇನ್ನು ಇಡಬ್ಲ್ಯುಎಸ್ ತೀರ್ಪಿನ ವಿಚಾರಕ್ಕೆ ಬರುವುದಾದರೆ, ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿ, ಸಂವಿಧಾನದ 103ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಮೀಸಲಾತಿಗೆ ಶೇ.50ರ ಮಿತಿಯನ್ನು ಹೇರಿದ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಲ್ಲವೆಂದು ಕೂಡ ಸ್ಪಷ್ಟಪಡಿಸಲಾಗಿದೆ.  

1962ರಲ್ಲಿ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಮೀಸಲಾತಿಯ ಮೇಲಿನ ಶೇ.50ರ ಮಿತಿಯ ಬಗ್ಗೆ ಮಾತನಾಡಿತು. ಆದರೆ 1992ರಲ್ಲಿ ಮಂಡಲ್ ಆಯೋಗ ಪ್ರಕರಣ ಎಂದೇ ಕರೆಯಲಾಗುವ ‘ಇಂದ್ರಾ ಸಾಹ್ನಿ v/s ಭಾರತ ಸರಕಾರ’ ಪ್ರಕರಣದಲ್ಲಿ ಒಂಭತ್ತು ನ್ಯಾಯಾಧೀಶರ ಪೀಠವು ಶೇ.50ರ ಮಿತಿಯನ್ನು ನಿರ್ಧರಿಸಿತು. ಈಗ ಇಡಬ್ಲ್ಯುಎಸ್ ಸಿಂಧುತ್ವವನ್ನು ಎತ್ತಿಹಿಡಿದಿರುವ ನ್ಯಾ.ದಿನೇಶ್ ಮಹೇಶ್ವರಿ ಅವರ ಪ್ರಕಾರ, ಶೇ.50ರ ಮಿತಿಯು ಇಂದ್ರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸಂವಿಧಾನದ ಪರಿಚ್ಛೇದ 15(4), 15(5) ಮತ್ತು 16(4)ರಲ್ಲಿ ನಿಗದಿಪಡಿಸಲಾಗಿರುವ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಮಾತ್ರ ಅನ್ವಯವಾಗುತ್ತದೆ.

ಈವರೆಗೆ ಮೀಸಲಾತಿಗೆ ಒಳಪಡದೇ ಇರುವ ಜಾತಿಯಲ್ಲಿನ ಆರ್ಥಿಕವಾಗಿ ಹಿಂದುಳಿದವರು ಈ ಹೊಸ ಶೇ.10ರ ಇಡಬ್ಲ್ಯುಎಸ್ ಮೀಸಲಾತಿಗೆ ಅರ್ಹರಾಗಲಿದ್ದಾರೆ ಎಂದು ವಿವರಿಸಲಾಗಿದೆ.

2019ರಲ್ಲಿ, ಹಿಂದುಳಿದ ಜಾತಿಗಳು ಮತ್ತು ಬುಡಕಟ್ಟುಗಳಿಗೆ ಅಸ್ತಿತ್ವದಲ್ಲಿರುವ ಕೋಟಾಗಳ ಜೊತೆಗೆ ಮೇಲ್ವರ್ಗದ ಆರ್ಥಿಕವಾಗಿ ದುರ್ಬಲ ಸದಸ್ಯರಿಗೆ ಮೀಸಲಾತಿಯನ್ನು ನೀಡಲು ಕೇಂದ್ರ ಸರಕಾರವು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಿದಾಗ, ಮೀಸಲಾತಿ ಸ್ಥಾನಗಳ ಒಟ್ಟು ಪಾಲು ಶೇ.59.5ಕ್ಕೆ ಏರಿತು. ಇದಕ್ಕೂ ಮೊದಲು, ಒಟ್ಟು ಕೋಟಾಗಳು ಶೇ.49.5ರಷ್ಟಿದ್ದವು: ಪರಿಶಿಷ್ಟ ಜಾತಿಗಳಿಗೆ ಶೇ.15, ಪರಿಶಿಷ್ಟ ಪಂಗಡಗಳಿಗೆ ಶೇ.7.5 ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ.27. ಈ 103ನೇ ತಿದ್ದುಪಡಿಯ ಮೂಲಕ ಸಂವಿಧಾನದ 15ನೇ ವಿಧಿಯಲ್ಲಿ ಈಗಾಗಲೇ ಇರುವ 5 ಅನುಚ್ಛೇದಗಳ ಜೊತೆಗೆ 6ನೇ ಅನುಚ್ಛೇದವನ್ನು ಸೇರಿಸಲಾಯಿತಲ್ಲದೆ, 16ನೇ ವಿಧಿಗೂ ತಿದ್ದುಪಡಿ ಮಾಡಲಾಗಿದೆ. 

ಅದರಂತೆ, 4 ಮತ್ತು 5ನೇ ಅನುಚ್ಛೇದಗಳಲ್ಲಿರುವ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ ಇತರರಿಗೆ ಅಂದರೆ ಮೇಲ್ಜಾತಿ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಈ ಶೇ.10ರ ಇಡಬ್ಲ್ಯುಎಸ್ ಮೀಸಲಾತಿ ಪಡೆಯುವ ಜಾತಿಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಬೇರೆಯಾಗಲಿವೆ. ಕರ್ನಾಟಕದಲ್ಲಿ ಬ್ರಾಹ್ಮಣರು, ಆರ್ಯವೈಶ್ಯರು ಮತ್ತಿತರ ಕೆಲವು ಸಣ್ಣ ಸಮುದಾಯಗಳು ಈ ವ್ಯಾಪ್ತಿಗೆ ಒಳಪಡುತ್ತವೆ. ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ 8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ, 5 ಎಕರೆಗಿಂತ ಕಡಿಮೆ ಜಮೀನು ಹಾಗೂ ಸಾವಿರ ಚದರಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರುವವರು ಎಂಬ ಮಾನದಂಡವನ್ನು ನಿಗದಿಪಡಿಸಲಾಗಿದೆ.

ಈ ಮೀಸಲಾತಿ ತಿದ್ದುಪಡಿಯು ಸಾಮಾಜಿಕ ನ್ಯಾಯದ ಸಾಂವಿಧಾನಿಕ ದೃಷ್ಟಿಗೆ ವಿರುದ್ಧವಾದುದು. ಸಾಮಾಜಿಕವಾಗಿ ಹಿಂದುಳಿದವರು, ಅಸ್ಪೃಶ್ಯತೆ ಮತ್ತು ಅಸಮಾನತೆಗೆ ತುತ್ತಾದವರು, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಬಹುದೆಂದು ಸಂವಿಧಾನವು ಹೇಳುತ್ತದೆ ಎಂಬುದು ಇಡಬ್ಲ್ಯುಎಸ್ ಮೀಸಲಾತಿಯನ್ನು ವಿರೋಧಿಸುವವರ ವಾದ.

ಈಗಿರುವ ಶೇ.50ರ ಮಿತಿಯ ಬಗ್ಗೆಯೂ ಆಕ್ಷೇಪಗಳಿವೆ. ದೇಶದ ಜನಸಂಖ್ಯೆಯ ಶೇ.90ರಷ್ಟಿರುವ ಸಮುದಾಯಗಳಿಗೆ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಿಸುವುದು ಅವೈಜ್ಞಾನಿಕ ಎಂಬ ವಾದಗಳಿವೆ. ಆದರೆ, ಶೇ.50ರ ಮಿತಿ ನಿಗದಿಪಡಿಸಿರುವ ತೀರ್ಪಿನಲ್ಲಿಯೇ, ವಿಶೇಷ ಸಂದರ್ಭಗಳಲ್ಲಿ ಈ ಮಿತಿಯನ್ನು ಉಲ್ಲಂಘಿಸಬಹುದಾಗಿದೆ ಮತ್ತು ಅಂತಹ ವಿಶೇಷ ಸಂದರ್ಭವೆಂಬುದನ್ನು ಎಚ್ಚರಿಕೆಯಿಂದ ಬಳಸಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದ್ದು, ಬೇರೆಯವರಿಗೆ ಹೋಲಿಸಿದರೆ ಬಹಳ ಹಿಂದುಳಿದವರ, ರಾಷ್ಟ್ರೀಯ ಜೀವನದ ಮುಖ್ಯವಾಹಿನಿಯಿಂದ ಹೊರಗಿರುವ ಕಾರಣದ ವಿಶೇಷ ಪರಿಸ್ಥಿತಿಯನ್ನು ವಿಶೇಷ ಸಂದರ್ಭವೆಂದು ಪರಿಗಣಿಸಬಹುದು ಎಂಬುದು ಕಾನೂನು ಪರಿಣತರ ಅಭಿಮತ.

2021ರಲ್ಲಿ, ಮಹಾರಾಷ್ಟ್ರ ಸರಕಾರವು ಮರಾಠಾ ಸಮುದಾಯಕ್ಕೆ ಶೇ.16 ಮೀಸಲಾತಿಯನ್ನು ನಿರ್ಧರಿಸುವಾಗ, ಮೀಸಲಾತಿಯನ್ನು ಶೇ.68ಕ್ಕೆ ಏರಿಸಿತು. ಆದರೆ, ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದ ಡೇಟಾ ಯಾವುದೇ ವಿಶೇಷ ಪರಿಸ್ಥಿತಿಯನ್ನು ತೋರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಕಳೆದ ಸೆಪ್ಟಂಬರ್‌ನಲ್ಲಿ, ಅನುಸೂಚಿತ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಕೋಟಾವನ್ನು ಶೇ.58ಕ್ಕೆ ಹೆಚ್ಚಿಸುವ ಛತ್ತೀಸ್‌ಗಡ ಸರಕಾರದ 2011ರ ಕಾನೂನನ್ನು ಛತ್ತೀಸ್‌ಗಡ ಹೈಕೋರ್ಟ್ ಶೇ.50ರ ಮಿತಿ ಉಲ್ಲಂಘಿಸುವ ಯಾವುದೇ ವಿಶೇಷ ಸಂದರ್ಭಗಳಿಲ್ಲ ಎಂದು ರದ್ದುಗೊಳಿಸಿತು. ಇದರ ಹೊರತಾಗಿ, 2017ರಲ್ಲಿ, ಒಡಿಶಾ ಮತ್ತು ರಾಜಸ್ಥಾನ ಹೈಕೋರ್ಟ್‌ಗಳು ಒಟ್ಟು ಮೀಸಲಾತಿಯನ್ನು ಶೇ.50ರ ಮಿತಿ ದಾಟಿ ಹೆಚ್ಚಿಸಿದ ರಾಜ್ಯ ಕಾನೂನುಗಳನ್ನು ರದ್ದುಗೊಳಿಸಿದವು.

ಮೀಸಲಾತಿ ಆರಂಭಕ್ಕೆ ಹೇಗೋ ಮೀಸಲಾತಿ ವಿವಾದಕ್ಕೂ ಭಾರತದಲ್ಲಿ ಬಹುದೊಡ್ಡ ಇತಿಹಾಸವೇ ಇದೆ. ಇದೆಲ್ಲದರ ನಡುವೆಯೇ ಮೀಸಲಾತಿ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ಮಹತ್ವದ ಕ್ರಮವಾಗಿ ಈ ದೇಶದ ಅದೆಷ್ಟೋ ದಮನಿತರನ್ನು ಕಾಯುವ, ಅವರ ಜೀವನವಿಧಾನವನ್ನು ಸುಧಾರಿಸುವ ನಿಟ್ಟಿನಲ್ಲಿ ನಡೆದುಬಂದಿದೆ.

Similar News