ಥಾಯ್ಲೆಂಡ್‌ನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಹೈದರಾಬಾದ್ ವಿವಿ ಪ್ರಾಧ್ಯಾಪಕನ ಬಂಧನ

Update: 2022-12-03 08:16 GMT

ಹೈದರಾಬಾದ್ : ಥಾಯ್ಲೆಂಡ್‌ನ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನನ್ನು ಶುಕ್ರವಾರ ಬಂಧಿಸಲಾಗಿದೆ.

ಪುಸ್ತಕ ಕೊಡುವ ನೆಪದಲ್ಲಿ ಪ್ರಾಧ್ಯಾಪಕ ರವಿರಂಜನ್ ಥಾಯ್ಲೆಂಡ್ ಮೂಲದ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆದೊಯ್ದಿದ್ದು,  ಒಂದೆರಡು ಗಂಟೆಗಳ ನಂತರ ವಿಶ್ವವಿದ್ಯಾನಿಲಯಕ್ಕೆ ತಂದು ಬಿಟ್ಟಿದ್ದರು ಎಂದು ವರದಿಯಾಗಿದೆ.  ಸಹಪಾಠಿಗಳು ಥಾಯ್ಲೆಂಡ್ ವಿದ್ಯಾರ್ಥಿನಿ ಅಳುತ್ತಿರುವುದನ್ನು ಕಂಡು. ಆಕೆಯನ್ನು ವಿಚಾರಿಸಿದಾಗ ಪ್ರೊಫೆಸರ್ ತನಗೆ ಕಿರುಕುಳ ನೀಡಲು ಪ್ರಯತ್ನಿಸಿದರು ಎಂದು ಆಕೆ  ಹೇಳಿದ್ದಾಳೆ ಎಂದು ವರದಿಯಾಗಿದೆ.

“ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ವಿದ್ಯಾರ್ಥಿನಿಯನ್ನು ಪ್ರೊಫೆಸರ್ ತನ್ನ ಮನೆಗೆ ಕರೆದೊಯ್ದ ಘಟನೆ ನಡೆದಿದೆ. ರಾತ್ರಿ 9 ಗಂಟೆಯ ಸುಮಾರಿಗೆ ಆಕೆಯನ್ನು ಮತ್ತೆ ವಿಶ್ವವಿದ್ಯಾಲಯಕ್ಕೆ ತಂದು ಬಿಡಲಾಯಿತು. ಆಕೆ ಅಳುತ್ತಿರುವುದನ್ನು ಆಕೆಯ ಸ್ನೇಹಿತೆಯರು ನೋಡಿ ವಿಚಾರಿಸಿದರು.ಆಗ ಪ್ರೊಫೆಸರ್ ತನಗೆ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ಆಕೆ ಹೇಳಿದ್ದಾಳೆ. ವಿದ್ಯಾರ್ಥಿನಿಗೆ ಥಾಯ್ಲೆಂಡ್ ಭಾಷೆ ಮಾತ್ರ ಗೊತ್ತಿದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಹಾಗೂ  ಪ್ರಾಧ್ಯಾಪಕನನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಗಚಿಬೌಲಿ ಡಿಸಿಪಿ ತಿಳಿಸಿದ್ದಾರೆ.

Similar News