2022ರಲ್ಲಿ ಕ್ರೈಸ್ತರ ವಿರುದ್ಧ ದ್ವೇಷಾಪರಾಧಗಳು ತಾರಕಕ್ಕೆ:ದಕ್ಷಿಣದಲ್ಲಿ ತಮಿಳುನಾಡು,ಕರ್ನಾಟಕದಲ್ಲಿ ಅತಿ ಹೆಚ್ಚು;ವರದಿ

Update: 2022-12-03 13:27 GMT

ಹೊಸದಿಲ್ಲಿ: ದೇಶದಲ್ಲಿ ಕ್ರೈಸ್ತರ ವಿರುದ್ಧ ಹಿಂದೆಂದಿಗಿಂತಲೂ ಹೆಚ್ಚಿನ ಉದ್ದೇಶಿತ ಹಿಂಸಾಚಾರ 2022ರಲ್ಲಿ ದಾಖಲಾಗಿದೆ. ನ.21ರವರೆಗೆ ದೇಶದಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರದ 511 ಘಟನೆಗಳು ದಾಖಲಾಗಿವೆ ಎನ್ನುವುದನ್ನು ಯುನೈಟೆಡ್ ಕ್ರಿಶ್ಚಿಯನ್ ಫೋರಂ (ಯುಸಿಎಫ್) ಇತ್ತೀಚಿಗೆ ಬಿಡುಗಡೆಗೊಳಿಸಿರುವ ವರದಿಯು ಬಹಿರಂಗಗೊಳಿಸಿದೆ. ಕಳೆದ ವರ್ಷ ಇಂತಹ 505 ಘಟನೆಗಳು ದಾಖಲಾಗಿದ್ದವು ಎಂದು thenewsminute.com ವರದಿ ಮಾಡಿದೆ.

ಸಂತ್ರಸ್ತರಿಗೆ ಕಾನೂನು ಪರಿಹಾರಕ್ಕೆ ನೆರವಾಗಲು ಯುಸಿಎಫ್ 2015, ಜನವರಿಯಲ್ಲಿ ಆರಂಭಿಸಿದ್ದ ಸಹಾಯವಾಣಿ ಮೂಲಕ ಸಂಗ್ರಹಿಸಿದ್ದ ಮಾಹಿತಿಗಳನ್ನು ವರದಿಯು ಆಧರಿಸಿದೆ. ವರದಿಯು ಪ್ರಾರ್ಥನೆಗಳಿಗೆ ಅಡ್ಡಿ, ಭಕ್ತರ ಮೇಲೆ ದಾಳಿಗಳು, ಪಾದ್ರಿಗಳು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಳಿಗಳು ಮತ್ತು ನಿಂದನೆಗಳು ಹಾಗೂ ಚರ್ಚ್ ಗಳ ಧ್ವಂಸ ಸೇರಿದಂತೆ ಹಿಂಸಾಚಾರದ ಹಲವಾರು ಘಟನೆಗಳ ಸಂಕಲನವಾಗಿದೆ.

ಕಳೆದ ಐದು ವರ್ಷಗಳ ದತ್ತಾಂಶಗಳು ಕ್ರೈಸ್ತರ ಮೇಲಿನ ದಾಳಿಗಳಲ್ಲಿ ತೀವ್ರ ಏರಿಕೆಯನ್ನು ತೋರಿಸಿವೆ. 2018ರಲ್ಲಿ ದೇಶದಲ್ಲಿ ಒಟ್ಟು 292 ಮತ್ತು 2019ರಲ್ಲಿ 328 ಘಟನೆಗಳು ದಾಖಲಾಗಿದ್ದರೆ ರಾಷ್ಟ್ರವ್ಯಾಪಿ ಕೋವಿಡ್ ಲಾಕ್ಡೌನ್ ಗಳನ್ನು ಹೇರಲಾಗಿದ್ದ 2020ರಲ್ಲಿ 279ಕ್ಕೆ ಇಳಿಕೆಯಾಗಿದ್ದವು. ಹಿಂಸಾಚಾರದ ಘಟನೆಗಳು 2021ರಲ್ಲಿ 505ಕ್ಕೆ ಏರಿದ್ದರೆ, ಈ ವರ್ಷ ಇನ್ನೂ ಡಿಸೆಂಬರ್ ಬಾಕಿಯಿರುವಂತೆ ಹಿಂದಿನ ವರ್ಷಗಳ ಸಂಖ್ಯೆಗಳನ್ನು ಮೀರಿವೆ.

2022ರ ಸೆಪ್ಟಂಬರ್ ನಲ್ಲಿ ಅತ್ಯಂತ ಹೆಚ್ಚು, 64 ಘಟನೆಗಳು ದಾಖಲಾಗಿದ್ದರೆ, ಮೇ ತಿಂಗಳಿನಲ್ಲಿ 61 ಘಟನೆಗಳು ವರದಿಯಾಗಿದ್ದವು. ಉತ್ತರದಲ್ಲಿ ಹಿಂದಿನ ವರ್ಷದಂತೆ ಈ ವರ್ಷವೂ ಉತ್ತರ ಪ್ರದೇಶವು 149 ಘಟನೆಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಛತ್ತೀಸ್ಗಡ (115), ಜಾರ್ಖಂಡ್(48) ರಾಜಸ್ಥಾನ (5) ಮತ್ತು ಹಿಮಾಚಲ ಪ್ರದೇಶ (4) ನಂತರದ ಸ್ಥಾನಗಳಲ್ಲಿವೆ. ದಿಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ ಒಂದು ಘಟನೆ ದಾಖಲಾಗಿದ್ದರೆ ಚಂಡಿಗಡದಲ್ಲಿ ಈ ಎಲ್ಲ ಐದು ವರ್ಷಗಳಲ್ಲಿ ಕೇವಲ ಒಂದು ಘಟನೆ ವರದಿಯಾಗಿದೆ. ಈಶಾನ್ಯದ ಮೇಘಾಲಯ ಮತ್ತು ತ್ರಿಪುರಾಗಳಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರದ ತಲಾ ಒಂದು ಮತ್ತು ಅಸ್ಸಾಮಿನಲ್ಲಿ ಎರಡು ಘಟನೆಗಳು ದಾಖಲಾಗಿವೆ.

2022ರಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ತಲಾ 30 ಘಟನೆಗಳು ದಾಖಲಾಗಿದ್ದರೆ, ಕೇರಳ ಮತ್ತು ಪುದುಚೇರಿಗಳಲ್ಲಿ ಒಂದೇ ಒಂದು ಘಟನೆ ವರದಿಯಾಗಿಲ್ಲ. ಆಂಧ್ರಪ್ರದೇಶದಲ್ಲಿ ಆರು ಮತ್ತು ತೆಲಂಗಾಂಣಗಳಲ್ಲಿ ನಾಲ್ಕು ಘಟನೆಗಳು ದಾಖಲಾಗಿವೆ.

ತಮಿಳುನಾಡಿನಲ್ಲಿ 2018ರಲ್ಲಿ 48 ಘಟನೆಗಳು ನಡೆದಿದ್ದರೆ, 2019ರಲ್ಲಿ ಅತ್ಯಂತ ಹೆಚ್ಚು,56 ಘಟನೆಗಳು ವರದಿಯಾಗಿದ್ದವು. 2019ರಲ್ಲಿ ಕ್ರೈಸ್ತರ ವಿರುದ್ಧ ದ್ವೇಷಾಪರಾಧಗಳಲ್ಲಿ ತಮಿಳುನಾಡು ಉತ್ತರ ಪ್ರದೇಶದ ನಂತರ ಎರಡನೇ ಸ್ಥಾನದಲ್ಲಿತ್ತು. 2014-2022ರ ನಡುವೆ ತಮಿಳುನಾಡಿನಲ್ಲಿ ಒಟ್ಟು 227 ಘಟನೆಗಳು ದಾಖಲಾಗಿದ್ದು, ಈ ಪೈಕಿ ಸುಮಾರು ಅರ್ಧದಷ್ಟು (117) ಘಟನೆಗಳು ಕೊಂಗು ಪ್ರದೇಶದಿಂದ ವರದಿಯಾಗಿದ್ದವು.

ಕೇರಳದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ರೈಸ್ತರ ವಿರುದ್ಧ ದ್ವೇಷಾಪರಾಧಗಳ ಒಟ್ಟು ಮೂರು ಪ್ರಕರಣಗಳು ವರದಿಯಾಗಿವೆ.

ಯುಸಿಎಫ್ ದತ್ತಾಂಶಗಳಂತೆ ಕಳೆದ ವರ್ಷ ಕೈಸ್ತರ ವಿರುದ್ಧ 62 ದಾಳಿಗಳೊಂದಿಗೆ ಕರ್ನಾಟಕ ದಕ್ಷಿಣ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದರೆ ಈ ವರ್ಷ ಅಂತಹ ಘಟನೆಗಳು ಇಳಿಕೆಯಾಗಿವೆ. 2018, 2019 ಮತ್ತು 2020ರಲ್ಲಿ ರಾಜ್ಯದಲ್ಲಿ ಅನುಕ್ರಮವಾಗಿ 8,27 ಮತ್ತು 16 ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು.

ಕಳೆದ ವರ್ಷ ಕ್ರಿಸ್ಮಸ್ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕ್ರೈಸ್ತರ ವಿರುದ್ಧದ ದಾಳಿಗಳು ಉತ್ತುಂಗಕ್ಕೇರಿದ್ದವು. ಡಿ.28ರಂದು ತುಮಕೂರಿನಲ್ಲಿ ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ಕ್ರಿಸ್ಮಸ್ ಆಚರಣೆಯನ್ನು ನಿಲ್ಲಿಸಲು ದಲಿತರ ಮನೆಯೊಂದಕ್ಕೆ ನುಗ್ಗಿದ್ದರೆ, ಮರುದಿನ ಬೆಳಗಾವಿಯ ತುಕ್ಕನಟ್ಟಿ ಗ್ರಾಮದಲ್ಲಿ ನೆರೆಕರೆಯವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ಗುಂಪೊಂದು ದಲಿತ ಕುಟುಂಬದ ಮೇಲೆ ದಾಳಿ ನಡೆಸಿತ್ತು.

Similar News