ಬಿಜೆಪಿ, ಆರೆಸ್ಸೆಸ್ ಸರ್ವಾಧಿಕಾರದ ವಿರುದ್ಧ ಡಿ.6ಕ್ಕೆ ಬೆಂಗಳೂರಿನಲ್ಲಿ ದಲಿತರ ಪ್ರತಿಭಟನಾ ಸಮಾವೇಶ: ಮಾವಳ್ಳಿ ಶಂಕರ್

Update: 2022-12-03 13:03 GMT

ಬೆಂಗಳೂರು, ಡಿ.3: ದಲಿತರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಬಿಜೆಪಿ ಮತ್ತು ಆರೆಸ್ಸೆಸ್ ಸರ್ವಾಧಿಕಾರಿ ದುರಾಡಳಿತದ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿ.6ರಂದು ನಗರದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಪ್ರತಿರೋಧ ಹಾಗೂ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ತಿಳಿಸಿದೆ.

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಸಮಾವೇಶದಲ್ಲಿ 17 ಸಂಘಟನೆಗಳ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸ್ವಾತಂತ್ರ್ಯ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶಪಡಿಸುತ್ತಿರುವ ಸಂಘಪರಿವಾರ ಹಾಗೂ ಬಿಜೆಪಿಯನ್ನು ಹತ್ತಿಕ್ಕಲು ದಲಿತರು ಒಗ್ಗೂಡಬೇಕಾಗದ ಅನಿವಾರ್ಯ ಇದೆ. ಹಾಗಾಗಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಬ್ರಾಹ್ಮಣ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಚಾತುರ್ವರ್ಣ ವ್ಯವಸ್ಥೆಯ ಮರುಸ್ಥಾಪನೆಯೇ ಸಂಘಪರಿವಾರ ಹಾಗೂ ಬಿಜೆಪಿಯ ಗುರಿಯಾಗಿದೆ. ಆದುದರಿಂದ ಈ ದೇಶದ ದಲಿತ ಆದಿವಾಸಿ, ಅಲೆಮಾರಿ, ಹಿಂದುಳಿದ ಅಲ್ಪಸಂಖ್ಯಾತ ಜನರಿಂದ ಬೆಂಬಲ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಜನರನ್ನು ಮರಳು ಮಾಡಲು ಹೊಸ ನೀತಿಗಳನ್ನು ಬಲವಂತವಾಗಿ ತರುತ್ತಿದ್ದಾರೆ. ಪ್ರತಿಯೊಂದು ಜಾತಿಯ ಒಳಗೂ ಉಪಜಾತಿಯ ವಿಷ ಬೀಜವನ್ನು ಬಿತ್ತಿ ಪರಸ್ಪರ ನಡುವೆ ಕಿತ್ತಾಟವನ್ನು ತಂದು ಇಡಲಾಗಿದೆ ಎಂದು ಅವರು ದೂರಿದರು.

ಸಮ ಸಮಾಜದ ಕನಸು ಬಿತ್ತಿದ್ದ ಅಂಬೇಡ್ಕರ್, ಬುದ್ಧ, ಬಸವ ಮರೆಯಾಗಿ, ಕೋಮು ವಿಷದ ಗೂಡ್ಸೆ, ಸಾವರ್ಕರ್ ಆದರ್ಶಗಳು ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬರುತ್ತಿವೆ.  ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದ ಆಳಿದ ಬ್ರಾಹ್ಮಣ್ಯ ಮತ್ತೇ ತನ್ನ ಕರಾಳ ಹಿಡಿತವನ್ನು ಸಾಧಿಸುತ್ತಿದೆ. ಇದರ ಪರಿಣಾಮವಾಗಿ ದುಡಿಯುವ ಜನ ಸಮುದಾಯ, ದಲಿತರು, ಆದಿವಾಸಿಗಳು, ಅಲೆಮಾರಿಗಳು, ಮಹಿಳೆಯರು, ರೈತರು, ಕಾರ್ಮಿಕರು, ಕುಶಲಕರ್ಮಿಗಳು - ಹಸಿವು, ಅವಮಾನ, ಬಡತನ, ದೌರ್ಜನ್ಯ, ಅತ್ಯಾಚಾರ, ಕೊಲೆ ಸುಲಗೆಗೆ ಒಳಗಾಗಿ ನರಳುವಂತಾಗಿದೆ ಎಂದು ಅವರು ಕಿಡಿಕಾರಿದರು. 

ದಲಿತ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಅಂಬೇಡ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಒಂದೂವರೆ ಗಂಟೆಗಳ ಕಾಲ ಚರ್ಮ ವಾದ್ಯ ವಾದನ ಮತ್ತು ಡೊಳ್ಳು ಕುಣಿತ ಇರುತ್ತದೆ ಎಂದರು. ಗೋಷ್ಟಿಯಲ್ಲಿ ದಲಿತ ಸಂಘಟನೆಗಳ ಮುಖಂಡ ಅಣ್ಣಯ್ಯ, ವಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಭಾರತ ದೇಶ ಬಹುಜನರ ಭೂಮಿ: ‘ಇಲ್ಲಿ ವಾಸಿಸುವ ಬಹುಜನರಿಗೆ ಅವರದ್ದೇ ಆದ ಪ್ರತ್ಯೇಕ ಸಂಸ್ಕೃತಿ, ಆಚಾರ ಹಾಗೂ ವಿಚಾರ ಇದೆ. ಚರಿತ್ರೆಯನ್ನು ವಿಕಾರಗೊಳಿಸುತ್ತಿರುವ ಬ್ರಾಹ್ಮಣ್ಯವು ಮೂಲನಿವಾಸಿಗಳ ಆಹಾರವನ್ನು ಕೀಳು ಎಂದು ಪ್ರತಿಪಾಧಿಸುತ್ತಿದೆ. ನಾವು ಬಹುಜನರ ಆಹಾರ ಮತ್ತು ಜೀವನ ಶೈಲಿಯನ್ನು ಮುನ್ನೆಲೆಗೆ ತರಬೇಕಿದೆ. ಅದಕ್ಕಾಗಿ ಸಾಂಸ್ಕೃತಿಕ ರಾಜಕಾರಣದ ಆಗತ್ಯ ಇದೆ’ 

-ಮಾವಳ್ಳಿ ಶಂಕರ್, ಚಿಂತಕ

--------------------------------

‘ಬಿಜೆಪಿ ಸರಕಾರವು ಒಂದು ಕಡೆ ಪರಿಶಿಷ್ಟ ಮೀಸಲಾತಿಯನ್ನು ಹೆಚ್ಚಳ ಮಾಡುತ್ತಿದೆ. ಮೊತ್ತೊಂದು ಕಡೆ ದಲಿತರ ಮೇಲೆ ಹಲ್ಲೆಗಳು ನಡೆದಾಗ ಮೌನವನ್ನು ವಹಿಸುತ್ತಿದೆ. ಸರಕಾರ ಈ ಧ್ವಂಧ್ವ ನೀತಿಯನ್ನು ಅನುಸರಿಸಿ ದಲಿತ ದಿಕ್ಕು ತಪ್ಪಿಸುತ್ತಿದೆ. ಮೀಸಲಾತಿ ಹೆಚ್ಚಳದ ನೆಪದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದು, ಇದೆಲ್ಲರ ವಿರುದ್ಧ ಕೆಳಸಮುದಾಯಗಳಲ್ಲಿ ಜನ ಜಾಗೃತಿ ಮೂಡಿಸುವದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುವ ಸಲುವಾಗಿ ಡಿ.6ರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.’

-ಜಿಗಣಿ ಶಂಕರ್, ದಲಿತ ಮುಖಂಡ

Full View

Similar News