ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಸೂಚಿ: ಸಚಿವ ಸುನಿಲ್ ಕುಮಾರ್

ಜಿಲ್ಲಾ ರಜತೋತ್ಸವ ವಿಚಾರಸಂಕಿರಣ ಉದ್ಘಾಟನೆ

Update: 2022-12-03 13:58 GMT

ಉಡುಪಿ, ಡಿ.3: ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷಗಳಾಗಿದ್ದು, ಮುಂದಿನ 25 ವರ್ಷಗಳಲ್ಲಿ, ಜಿಲ್ಲೆಯನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗಳ ಕುರಿತಂತೆ ದಿಕ್ಸೂಚಿಯನ್ನು ರಚಿಸಿ, ಅದರಂತೆ ಕಾರ್ಯ ನಿರ್ವಸುವ ಮೂಲಕ ಬಲಿಷ್ಠ ಮತ್ತು ಸಮೃದ್ಧ ಉಡುಪಿ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಶನಿವಾರ ನಗರದ ಪುರಭವನದಲ್ಲಿ, ಉಡುಪಿ ಜಿಲ್ಲಾ ಜಿಲ್ಲಾಡಳಿತದ ವತಿ ಯಿಂದ ನಡೆದ ಉಡುಪಿ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಉಡುಪಿ ಜಿಲ್ಲೆಯು ರಾಜ್ಯದ ಇತರೇ ಎಲ್ಲಾ ಜಿಲ್ಲೆಗಳಿಗಿಂತ ಭಿನ್ನವಾಗಿದ್ದು, ಇಲ್ಲಿನ ನಾಗರಿಕರ ಸಹಕಾರ ಮತ್ತು ಜನಪ್ರತಿನಿಧಿಗಳ ಕಾರ್ಯಗಳಿಂದ ಅಭಿವೃದ್ಧಿಯ ಪಥದಲ್ಲಿದೆ. ಮುಂದಿನ 25 ವರ್ಷಗಳಲ್ಲಿ ಜಿಲ್ಲೆಯು ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸಾಧಿಸಬೇಕಾದ ಪ್ರಗತಿಯ ಕುರಿತಂತೆ, ಜಿಲ್ಲೆಯ ಹಿರಿಯ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ತಜ್ಞರು, ಸಾರ್ವಜನಿಕರೊಂದಿಗೆ ಚರ್ಚೆಗಳನ್ನು ನಡೆಸಿ, ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಅದರಂತೆ ಕಾರ್ಯ ನಿರ್ವಹಿಸಬೇಕು. ಪ್ರಧಾನ ಮಂತ್ರಿ ಅವರ ನವಭಾರತ ಕಲ್ಪನೆಯಂತೆ, ನವ ಕರ್ನಾಟಕ ಸಂಕಲ್ಪದೊಂದಿಗೆ, ಉಡುಪಿ ಜಿಲ್ಲೆಯು ಎಲ್ಲಾ ವಿಭಾಗಗಳಲ್ಲಿ  ಪ್ರಗತಿಯನ್ನು ಸಾಧಿಸುವಂತಾಗಬೇಕು ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಭವಿಷ್ಯದ ಪ್ರಗತಿಯ ದೃಷ್ಟಿಯಿಂದ ಉಡುಪಿ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತೆಯ ಅಗತ್ಯವಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 25 ಎಕ್ರೆ ಜಾಗವನ್ನು ಇದಕ್ಕಾಗಿ ಮೀಸಲಿಡಬೇಕು. ಯುವಜನತೆಗಾಗಿ ಜಿಲ್ಲೆ ಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಯಾಗಬೇಕು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ತರಬೇತಿ ಹಾಗೂ ಸಂವಹನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅತ್ಯಂತ ಹೆಚ್ಚಿನ ಅವಕಾಶಗಳಿದ್ದು, ಇವುಗಳ ಸದ್ಬಳಕೆ ಆಗಬೇಕು. ಕೃಷಿ, ಪ್ರವಾಸೋದ್ಯಮ ಮತ್ತು ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಮುಂದಿನ 25 ವರ್ಷಗಳಲ್ಲಿ ಜಿಲ್ಲೆಯನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿ, ಪ್ರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಅರ್ ನಾಯಕ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಕಲ್ಪನಾ ಉಪಸ್ಥಿತ ರಿದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Similar News