ವಿದ್ಯುತ್ ದರ ಇಳಿಕೆ; ಶೀಘ್ರವೇ ಅಂತಿಮ ತೀರ್ಮಾನ: ಸಚಿವ ಸುನಿಲ್ ಕುಮಾರ್

Update: 2022-12-03 14:13 GMT

ಉಡುಪಿ, ಡಿ.3: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ನಷ್ಟ ಸರಿದೂಗಿಸಿ ಇಂಧನ ಇಲಾಖೆಯು ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲು ಚಿಂತಿಸಲಾಗಿದೆ. ಈ ಕುರಿತ ಪ್ರಸ್ತಾಪವನ್ನು ಕೆಆರ್‌ಸಿ ಮುಂದೆ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನವನ್ನು ಕೆಆರ್‌ಸಿ ತೆಗೆದು ಕೊಳ್ಳಲಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮಾರ್ಗದರ್ಶನದಲ್ಲಿ ಎಲ್ಲ ಅಧಿಕಾರಿಗಳು ಇಲಾಖೆಯ ನಷ್ಟವನ್ನು ಕಡಿಮೆ ಮಾಡಲು ಸಹಕರಿಸಿದ್ದಾರೆ. ಸ್ಪಂದನಶೀಲ ಮುಖ್ಯಮಂತ್ರಿ ಯಿಂದಾಗಿ ಈ ಬಾರಿ ಇಂಧನ ಇಲಾಖೆ ಶುಲ್ಕವನ್ನು ಕಡಿಮೆ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ಕೆಆರ್‌ಸಿ ಮುಂದೆ ಪ್ರಸ್ತಾಪ ಸಲ್ಲಿಸಿದೆ. ಎಸ್ಕಾಂನವರು 70 ಪೈಸೆಯಿಂದ 2ರೂ.ವರೆಗೆ ಕಡಿಮೆ ಮಾಡುವ ಪ್ರಸ್ತಾಪ ಕೊಟ್ಟಿದ್ದಾರೆ ಎಂದು ಹೇಳಿದರು.

ನಮ್ಮ ಸರಕಾರ ಬೇರೆ ಬೇರೆ ಹಂತದಲ್ಲಿ ಜನಸ್ನೇಹಿ ಆಡಳಿತವನ್ನು ನೀಡುತ್ತಿದೆ. ಒಂದು ವರ್ಷದಲ್ಲಿ 100ಕ್ಕೂ ಅಧಿಕ ಸಬ್‌ಸ್ಟೇಷನ್‌ಗಳನ್ನು ಉನ್ನತಿಕರಣ ಹಾಗೂ 40ಕ್ಕೂ ಅಧಿಕ ಹೊಸ ಸ್ಟೇಷನ್ ಸ್ಥಾಪಿಸುವ ಪ್ರಯತ್ನ ಮಾಡಿದ್ದೇವೆ. ಇದರ  ಮುಂದುವರೆದ ಭಾಗವಾಗಿ ಎಲ್ಲ ನಷ್ಟವನ್ನು ಕಡಿಮೆ ಮಾಡಿಕೊಂಡು ಗ್ರಾಹಕ ಸ್ನೇಹಿ ಇಲಾಖೆಯನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಹೈಟೆನ್ಷನ್ ವೈಯರ್ ತಗುಲಿ ಇಬ್ಬರು ಬಾಲಕರು ಗಂಭೀರ ಗಾಯಗೊಂಡ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಈಗಾಗಲೇ ಎಫ್‌ಐಆರ್ ಆಗಿದೆ. ನಮ್ಮ ಇಲಾಖೆಯಿಂದ ತಪ್ಪು ಆಗಿದ್ದರೆ ಖಂಡಿತ ಪರಿಹಾರ ನೀಡುತ್ತೇವೆ. ಯಾವುದೇ ಅವಘಡ ಆಗಬಾರದು ಎಂಬ ಎಚ್ಚರಿಕೆ ಪದೇಪದೇ ತೆಗೆದುಕೊಳ್ಳುತ್ತಿದ್ದೇವೆ. ಅದನ್ನು ಮೀರಿ ಈ ರೀತಿಯ ಘಟನೆ ಆಗಬಾರದು ಎಂಬುದು ನಮ್ಮ ಅಪೇಕ್ಷೆ ಎಂದು ಅವರು ಹೇಳಿದರು.

"ಅಪರಾಧಿ ಚಟುವಟಿಕೆಯಲ್ಲಿ ಭಾಗವಹಿಸಿದವರನ್ನು ಸ್ವಾಗತಿಸುವುದು ಹಾಗೂ ವೈಭವಿಕರಿಸುದನ್ನು ಪಕ್ಷ ಸಹಿಸುವುದಿಲ್ಲ. ಎಲ್ಲೋ ಒಂದು ಕಡೆ ಆ ರೀತಿ ಆಗಿದೆ. ಅದನ್ನು ಸರಿಪಡಿಸಿಕೊಳ್ಳುವಂತೆ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈ ರೀತಿಯ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ".
-ಸುನೀಲ್ ಕುಮಾರ್, ಸಚಿವರು

Similar News