ಫಿಫಾ ವಿಶ್ವಕಪ್ : ಆಸ್ಟ್ರೇಲಿಯಾಗೆ ಸೋಲು; 8ರ ಘಟ್ಟಕ್ಕೆ ಅರ್ಜೆಂಟೀನಾ

Update: 2022-12-04 01:56 GMT

ಹೊಸದಿಲ್ಲಿ: ಫುಟ್ಬಾಲ್ ಕ್ಷೇತ್ರದ ದಂತಕಥೆ ಎನಿಸಿದ ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಕ್ವಾರ್ಟರ್ ಫೈನಲ್ ತಲುಪಲು ಕೊಡುಗೆ ನೀಡುವ ಮೂಲಕ ತಮ್ಮ ವೃತ್ತಿಜೀವನದ 1000ನೇ ಪಂದ್ಯದಲ್ಲಿ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.

ರವಿವಾರ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ 16ರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ ಎರಡನೇ ತಂಡವಾಗಿ ಕ್ವಾರ್ಟರ್ ಫೈನಲ್ ತಲುಪಿತು.

ತಮ್ಮ ವೃತ್ತಿಜೀವನದ 789ನೇ ಗೋಲನ್ನು ಗಳಿಸಿದ ಅರ್ಜೆಂಟೀನಾ ನಾಯಕ, ತಂಡಕ್ಕೆ ಆರಂಭದಲ್ಲೇ ಮುನ್ನಡೆ ದೊರಕಿಸಿಕೊಟ್ಟರು. ಮೆಸ್ಸಿ ಪಡೆ ಎಂಟರ ಘಟ್ಟದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೆಣೆಸಲಿದೆ. ಇದಕ್ಕೂ ಮುನ್ನ ಶನಿವಾರ ನಡೆದ ಮೊದಲ ನಾಕೌಟ್‍ ಪಂದ್ಯದಲ್ಲಿ ಅಮೆರಿಕವನ್ನು 3-1 ಗೋಲುಗಳಿಂದ ಸೋಲಿಸಿದ ನೆದರ್ಲೆಂಡ್ಸ್ 8ರ ಘಟ್ಟ ತಲುಪಿತ್ತು.

ವಿರಾಮದ ವೇಳೆಗೆ ಅರ್ಜೆಂಟೀನಾ ತಂಡ 1-0 ಗೋಲುಗಳಿಂದ ಮುಂದಿತ್ತು. ಮೆಸ್ಸಿ 35ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಬಳಿಕ ಜ್ಯೂಲಿಯನ್ ಅಲ್ವೆರೆಝ್ ಉತ್ತರಾರ್ಧದಲ್ಲಿ ಗೋಲು ಗಳಿಸಿ ಮುನ್ನಡೆ ಹಿಗ್ಗಿಸಿದರು. ಪಂದ್ಯದುದ್ದಕ್ಕೂ ಬಿಗಿಹಿಡಿದ ಸಾಧಿಸಿದ್ದ ದಕ್ಷಿಣ ಅಮೆರಿಕ ತಂಡವನ್ನು 57ನೇ ನಿಮಿಷದಲ್ಲಿ ಬಂದ ಅಲ್ವೆರೆಝ್ ಗೋಲು ನಿರಾಳವಾಗಿಸಿತು. ಎರಡು ಬಾರಿಯ ಚಾಂಪಿಯನ್ ತಂಡಕ್ಕೆ 77ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಆಸ್ಟ್ರೇಲಿಯಾ ಎಚ್ಚರಿಕೆ ನೀಡಿತ್ತು.

ತೀರಾ ಕೆಳಮಟ್ಟದಲ್ಲಿ ಕಾರ್ನರ್ ಹೊಡೆತದ ಮೂಲಕ 94ನೇ ಅಂತರರಾಷ್ಟ್ರೀಯ ಗೋಲು ಗಳಿಸಿದ ಮೆಸ್ಸಿ, ಎಂಟು ವಿಶ್ವಕಪ್ ಗೋಲುಗಳ ಡಿಗೊ ಮರಡೋನಾ ದಾಖಲೆಯನ್ನು ಪುಡಿಗಟ್ಟಿದರು.

Similar News