ಇತಿಹಾಸಕಾರರೆದುರು ಕಾಲ್ಪನಿಕ ಗತಕಾಲ ಮತ್ತು ಅನಿಶ್ಚಿತ ಭವಿಷ್ಯತ್ತು

Update: 2022-12-04 03:47 GMT

ಈಗಾಗಲೇ ಶಾಸಕರ ಫ್ಲೆಕ್ಸ್-ಬ್ಯಾನರ್‌ಗಳು, ಪ್ರತಿಮೆಗಳು, ಬಹುದೊಡ್ಡ ಪ್ರಮಾಣದ ವಾಣಿಜ್ಯಿಕ ಗಲೀಜಿನಿಂದ ತುಂಬಿಹೋಗಿರುವ ಬೆಂಗಳೂರಿನಲ್ಲಿ ಈಚಿನ ಬೃಹದೆತ್ತರದ ಸೇರ್ಪಡೆ ಕೆಂಪೇಗೌಡರ ಪ್ರತಿಮೆ. 16ನೇ ಶತಮಾನದ, 1537ರಲ್ಲಿ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಎದ್ದುನಿಂತಿದೆ. ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅವರ ಹೆಸರನ್ನಿಟ್ಟು ವರ್ಷಗಳ ಬಳಿಕ ಇದಾಗುವುದರೊಂದಿಗೆ, ಮೊದಲು ಕರ್ನಾಟಕದ ಹೊರಗಿನ ಕೆಲವರಿಗಷ್ಟೇ ಗೊತ್ತಿದ್ದ ಕೆಂಪೇಗೌಡರು ಈಗ ಈ ಬೃಹದೆತ್ತರದ ಕಾಣಿಸುವಿಕೆಯಿಂದ ಪ್ರತಿಯೊಬ್ಬರಿಗೂ ತಿಳಿಯುವಂತಾಗಿದೆ.

ಕರ್ನಾಟಕದ ವೃತ್ತಿಪರ ಇತಿಹಾಸ ಕಾರರು ಇನ್ನು ಮುಂದೆ ರಾಜ್ಯ, ಅದರ ವೀರರು ಮತ್ತು ಅವರ ಗತಕಾಲದ ಬಗ್ಗೆ ಮಾತನಾಡುವವರ ಅಬ್ಬರ ಮತ್ತು ಗರ್ಜನೆಯನ್ನು ಕೇಳಬಹುದೇ? ಇತಿಹಾಸಕಾರ ಸಂಶೋಧನೆ, ಬರವಣಿಗೆ ಮತ್ತು ಬಹುಶಃ ಕೆಲವು ಅದೃಷ್ಟದ ಸಂದರ್ಭಗಳಲ್ಲಿ ಸಂಕೀರ್ಣ, ವಿವಾದಾತ್ಮಕ ಮತ್ತು ಸಂಘರ್ಷಿತ ಗತದ ಬಗೆಗೆ ಬೋಧಿಸುವುದಕ್ಕೆ ಸೀಮಿತನಾಗಿರುತ್ತಾನೆ. ಆದರೆ ಇವೆಲ್ಲವೂ ರಾಜ್ಯ, ಪಕ್ಷ ಅಥವಾ ಸಮುದಾಯದ ಬೆಂಬಲದೊಂದಿಗೆ, ಸಾಮಾಜಿಕ ಜಾಲತಾಣದಲ್ಲಿ ಆಕ್ರಮಣಕಾರಿ ಪ್ರಳಯ ಸೃಷ್ಟಿಸುವವರ, ಪ್ರತಿಮೆಗಳನ್ನು ನಿಲ್ಲಿಸುವವರ, ತಮ್ಮ ವೀರರ (ಸಾಮಾನ್ಯವಾಗಿ ಪುರುಷರು) ಸ್ಮರಣಾರ್ಥವಾಗಿ ಹೊಸ ಸ್ಥಾವರಗಳನ್ನು ಕಟ್ಟುವವರ ಅಥವಾ ಗತಕಾಲದ ವಿಲನ್‌ಗಳ (ಸಾಮಾನ್ಯವಾಗಿ ಮುಸ್ಲಿಮರು) ಅವಹೇಳನ ಮಾಡಲು ಸ್ಥಾಪಿತ ಧಾರ್ಮಿಕ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳುವ ಆಂದೋಲನಗಳನ್ನು ಯೋಜಿಸುವವರ ಮುಂದೆ ಅತ್ಯಲ್ಪ. ಮಂಕಾದ ಪ್ರತಿರೋಧದ ಕ್ರಮಕ್ಕಿಂತ, ವೀಡಿಯೊಗಳು ಮತ್ತು ನಾಟಕಗಳಲ್ಲಿನ ವರ್ಣರಂಜಿತ ಸಮರ್ಥನೆಗಳು ಹೆಚ್ಚಿನ ಆಕರ್ಷಣೆಯನ್ನು ಹೊಂದಿವೆ ಮತ್ತು ಅವರು ಐತಿಹಾಸಿಕ ವಸ್ತುನಿಷ್ಠತೆ ಅಥವಾ ತಾರ್ಕಿಕತೆಗೆ ಯಾವುದೇ ಬಾಧ್ಯತೆಯಿರದ ಆನಂದಪರವಶತೆಯಲ್ಲಿರುವವರು.

ಹೀಗಾಗಿ, ನಾಡಪ್ರಭುವಿನ (ನಾಡಪ್ರಭು ಕೆಂಪೇಗೌಡ) ಗಾತ್ರ, ಉಡುಗೆ ತೊಡುಗೆ ಅಥವಾ ವರ್ತನೆಯನ್ನು ನಿರ್ಧರಿಸುವಲ್ಲಿ ಇತಿಹಾಸಕಾರರ ಪಾತ್ರ ಇರಲೇ ಇಲ್ಲ. ಬೆಂಗಳೂರಿನ ಮಾಜಿ ಮೇಯರ್ ದಿ.ಜಿ. ನಾರಾಯಣ ಅವರು ಹೇಳುತ್ತಿದ್ದ ಪ್ರಕಾರ, ಕೆಂಪೇಗೌಡರ ಮೊದಲ ಪ್ರತಿಮೆಯನ್ನು ಬೆಂಗಳೂರು ಪಾಲಿಕೆಯೆದುರು 1964ರಲ್ಲಿ ಸ್ಥಾಪಿಸಲಾಯಿತು. ಅದಕ್ಕೂ ಮೊದಲು ಐದು ವರ್ಷಗಳ ಕಾಲ ಅವನು ಏನಾಗಿದ್ದಿರಬಹುದು, ಹೇಗೆ ಕಾಣಿಸುತ್ತಿದ್ದಿರಬಹುದು ಎಂಬ ಬಗ್ಗೆ ಕಾರ್ಪೊರೇಟರ್‌ಗಳ ನಡುವೆ ವಾದ ನಡೆದಿತ್ತು. ಇತಿಹಾಸಕಾರರೇನಾದರೂ ಈ ವಿಚಾರದಲ್ಲಿ ತಲೆಹಾಕಿದ್ದಿದ್ದರೆ ಹಲಸೂರಿನ ಸೋಮೇಶ್ವರ ದೇವಸ್ಥಾನ ಮತ್ತು ಶಿವಗಂಗೆಯ ಗಂಗಾಧರೇಶ್ವರ ದೇವಸ್ಥಾನದಲ್ಲಿನ, ಚಾಲ್ತಿಯಲ್ಲಿರುವ ಧಾರ್ಮಿಕ ಶ್ರದ್ಧಾವಂತ ಕೆಂಪೇಗೌಡರ ಎರಡು ರೂಪಗಳನ್ನು ಸಲಹೆ ಮಾಡಿರುತ್ತಿದ್ದರು. ಅವೆರಡರಲ್ಲೊಂದನ್ನು ಅನುಸರಿಸಿದ್ದರೆ, ಎರಡೂ ಕೈಗಳನ್ನು ಜೋಡಿಸಿಕೊಂಡು, ಪ್ರಾರ್ಥನೆಯ ಭಂಗಿಯಲ್ಲಿರುವಂತೆಯೂ, ಕತ್ತಿಯು ಒರೆಯಲ್ಲಿರುವಂತೆಯೂ ಕೆಂಪೇಗೌಡರನ್ನು ತೋರಿಸಬೇಕಿತ್ತು. ಆದರೆ ಮರಣಾನಂತರದಲ್ಲಿ ಪವಿತ್ರೀಕರಿಸಲ್ಪಟ್ಟ ಇಲ್ಲಿನ ವ್ಯಕ್ತಿಯು ಇಡೀ ಪ್ರದೇಶದ - ರಾಜ್ಯದ ವಿವಿಧೆಡೆಯಿಂದ ಸಂಗ್ರಹಿಸಲಾದ ಮಣ್ಣಿನ ಮೇಲೆ ನಿಂತಿರುವ - ಯುಗಪುರುಷನೆಂಬಂತೆ, ಕತ್ತಿಯನ್ನು ಹಿಡಿದ ಯೋಧನ ನಿಲುವಿನಲ್ಲಿದ್ದಾನೆ.

ಆದರೆ ಈ ಬೃಹತ್ ಗಾತ್ರದ ಪ್ರತಿಮೆಯಲ್ಲಿ ವಿಶಾಲವಾದ, ಕಸೂತಿಯ ನಿಲುವಂಗಿ, ರುಮಾಲು, ಅದಕ್ಕೆ ಅಳವಡಿಸಲಾದ ಆಭರಣ ಮತ್ತು ಮೇಲ್ಮುಖವಾಗಿ ತಿರುಗಿಕೊಂಡಿರುವ ಪಾದರಕ್ಷೆ ಕಣ್ಸೆಳೆಯುತ್ತವೆ. ಪ್ರಚಲಿತವಿರುವ ಎರಡು ಚಿತ್ರಣಗಳಲ್ಲಿ ಅವನು ತೆರೆದೆದೆಯಲ್ಲಿ, ಬರಿಗಾಲಿನಲ್ಲಿ, ಸುಕ್ಕಾಗಿರುವ ಪಂಚೆಯಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇನ್ನೂ ಕುತೂಹಲದ ಸಂಗತಿಯೆಂದರೆ, ಅವನ ಶಿರವಸ್ತ್ರವು ಇತಿಹಾಸಕಾರರು ಕುಲಾವಿ ಎಂದು ಉಲ್ಲೇಖಿಸುವ, ಕಸೂತಿಯಿಂದ ಕೂಡಿದ ರೇಶ್ಮೆ ವಸ್ತ್ರದಿಂದ ಮಾಡಿದ ಶಂಕುವಿನಾಕಾರದಲ್ಲಿದೆ. ಸಾಮಾನ್ಯವಾಗಿ ಬಿಳಿ ನಿಲುವಂಗಿಯೊಡನೆ ಇದನ್ನು ತೊಡಲಾಗುತ್ತಿತ್ತು. ಈ ಉಡುಪುಗಳ ಶೈಲಿಯು ವಿಜಯನಗರದ ಅರಸರು ತಮ್ಮ ಮುಸ್ಲಿಮ್ ನೆರೆಯವರಲ್ಲಿ ಕಂಡು ಅನುಸರಿಸಿದ್ದಾಗಿತ್ತು. ಮಧ್ಯಯುಗೀನ ಹಲವಾರು ಇತಿಹಾಸಕಾರರು ಹೇಳಿರುವಂತೆ, ಉಡುಗೆ, ಮಾತಿನ ಶೈಲಿ, ನ್ಯಾಯಪದ್ಧತಿ, ವಾಸ್ತುಶಿಲ್ಪಮೊದಲಾದ ರೂಪಗಳಲ್ಲಿರುತ್ತಿದ್ದ ಅಂತಹ ಸಾಂಸ್ಕೃತಿಕ ಅನುಸರಣೆಗಳು, ಹಿಂದೂ-ಮುಸ್ಲಿಮರ ಕಡು ಹಗೆತನದ ಕಾಲವೆಂದು ತೋರಿಸಲಾಗಿರುವ ಅವತ್ತಿನ ಸಂದರ್ಭದಲ್ಲಿ ಸಾಮಾನ್ಯ ಸಂಗತಿಗಳಾಗಿದ್ದವು.

17ನೇ ಶತಮಾನದ ಹೊತ್ತಿಗೆ ಮರಾಠಾ ಶೈಲಿಯ ಉಡುಪುಗಳೂ ಜನಪ್ರಿಯತೆ ಪಡೆದವು. ವಿಜಯನಗರದ ನಂತರದ ಇಕ್ಕೇರಿ, ಮಧುರೈ, ತಂಜಾವೂರುಗಳಲ್ಲಿಯಂತೆ ಮುಸ್ಲಿಮ್ ಆಸ್ಥಾನ ಸಂಪ್ರದಾಯದೊಂದಿಗೆ ಬೆಸೆದುಕೊಂಡಂತಿದ್ದವು. ವಾಸ್ತವವಾಗಿ, ಕೆಂಪೇಗೌಡರ ಉಡುಗೆಯು ಹೆಚ್ಚಾಗಿ 18ನೇ ಶತಮಾನದ ದೊರೆ ಟಿಪ್ಪುವಿನ ಉಡುಗೆಗೆ ಹತ್ತಿರವಾಗಿರುವಂಥದ್ದು. ಅದು ಬಹುಪಾಲು ಕನ್ನಡಿಗರಿಗೆ ಆಗಿಬರದ ಹೆಸರು. ವಿಮಾನ ನಿಲ್ದಾಣವಿರುವ ದೇವನಹಳ್ಳಿ ಟಿಪ್ಪುವಿನ ಜನ್ಮಸ್ಥಳ. ಕೆಂಪೇಗೌಡರ ಜನ್ಮಸ್ಥಳ ಅಲ್ಲಿಂದ ತುಸು ದೂರದಲ್ಲಿರುವ ಯಲಹಂಕ.

ಒಂದು ಕಾಲದಲ್ಲಿದ್ದ ಸಾಂಸ್ಕೃತಿಕ ಸಮನ್ವಯತೆಯನ್ನು ಮುಗಿಸಿಹಾಕುವ ರಾಜಕಾರಣದ ದಿನಗಳಿವು. ಮೈಸೂರಿನಲ್ಲಿನ ಮೂರು ಗುಮ್ಮಟಗಳಿದ್ದ ಹೊಸ ಬಸ್ ನಿಲ್ದಾಣದ ವಿನ್ಯಾಸದ ಕಾರಣಕ್ಕೆ ದೊಡ್ಡ ರಾದ್ಧಾಂತವೇ ಇತ್ತೀಚೆಗೆ ಆಗಿಹೋಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಕೆಡವಿ ಪುನಃ ಕಟ್ಟಬೇಕೆಂದು ಒತ್ತಾಯಿಸಿದರು. ಶಾಸಕ ರಾಮದಾಸ್, ತಮ್ಮ ಪ್ರಯತ್ನವು ಮೈಸೂರು ಅರಮನೆಯ ಗುಮ್ಮಟಗಳನ್ನು ಗೌರವಿಸುವುದಾಗಿತ್ತು ಎಂದು ವಿವರಣೆ ಕೊಟ್ಟರು. ಬಿಜೆಪಿಯೊಳಗಿನ ಈ ಒಳಜಗಳದಲ್ಲಿ, ಪ್ರತಾಪ್ ಸಿಂಹ ಸಿಟ್ಟಾದ ಕಾರಣಕ್ಕೆ ಬಸ್ ನಿಲ್ದಾಣದ ಗುಮ್ಮಟಗಳ ಮೇಲೆ ಗುತ್ತಿಗೆದಾರರು ರಾತ್ರೋರಾತ್ರಿ ಕಲಶಗಳ ಮಾದರಿಯನ್ನು ನಿರ್ಮಿಸಿದ್ದೂ ಆಯಿತು. ಆದರೂ ಅವರ ಕೋಪ ತಣ್ಣಗಾಗಲಿಲ್ಲವೆಂದು ಕಡೆಗೆ ಅವುಗಳಿಗೆ ಕಿತ್ತಳೆ ಬಣ್ಣ ಬಳಿಯಲಾಯಿತು.

ಈ ನಡುವೆ, ಟಿಪ್ಪು ಸುಲ್ತಾನ್ ವಿರುದ್ಧದ ಆಕ್ರೋಶ ಹಲವು ರಂಗದವರನ್ನು ಒಗ್ಗೂಡಿಸಿತು. ರಂಗಾಯಣದ ಮುಖ್ಯಸ್ಥರು ‘ಟಿಪ್ಪುನಿಜ ಕನಸುಗಳು’ ಎಂಬ, ಟಿಪ್ಪುವನ್ನು ನಿರಂಕುಶಾ ಧಿಕಾರಿಯಂತೆ ಚಿತ್ರಿಸಲಾಗಿರುವ ನಾಟಕವನ್ನು (250 ಪೊಲೀಸರ ಬಿಗಿಭದ್ರತೆಯಲ್ಲಿ ಪ್ರದರ್ಶಿಸಲಾಯಿತು) ಬರೆದರು. (ಇಂಥ ರೂಪದಲ್ಲಿ ಟಿಪ್ಪುವನ್ನು ತೋರಿಸುವುದು 18ನೇ ಶತಮಾನದಲ್ಲಿ ಬ್ರಿಟಿಷರಿಗೆ ಅಗತ್ಯವಿತ್ತು ಎಂದು ಇತಿಹಾಸಕಾರ ಮೈಕೆಲ್ ಸೊರೊಕೊ ಹೇಳಿದ್ದಾನೆ). ಹುಲಿಮನೆ ಸೀತಾರಾಮ ಶಾಸ್ತ್ರಿಗಳು 1940-1950ರ ಅವಧಿಯಲ್ಲಿ ಬರೆದು ಆಡಿದ್ದ ನಾಟಕದಲ್ಲಿನ ಟಿಪ್ಪುವಿನ ಚಿತ್ರದಲ್ಲಿ ವೀರ ಧೀರ ಶೂರನೆಂಬ ಬಣ್ಣನೆಯಿದೆ. ವಸಾಹತುಶಾಹಿಯ ವಿರುದ್ಧದ ಮೊದಲ ಹೋರಾಟಗಾರನೆಂದು ಮೈಸೂರು ಹುಲಿಯನ್ನು ಕೊಂಡಾಡಲಾಗಿದೆ. ಆದರೆ ನಾವು ಬಹಳ ದೂರ ಬಂದುಬಿಟ್ಟಿದ್ದೇವೆ.

ವೀಡಿಯೊದ ಮೂಲಕ ಮುನ್ನೆಲೆಗೆ ಬಂದಿರುವ ಇನ್ನೊಂದು ಕಥೆಯ ಪ್ರಕಾರ, ಉರಿಗೌಡ ಮತ್ತು ನಂಜೇಗೌಡ ಎಂಬಿಬ್ಬರು 1799ರಲ್ಲಿ ಟಿಪ್ಪುವಿನಿಂದ ಹತರಾದರು. ಆ ಶೂರರಿಬ್ಬರೂ ಈಸ್ಟ್ ಇಂಡಿಯಾ ಸೇನೆಯ ಯೋಧರಾಗಿದ್ದಲ್ಲಿ ಬ್ರಿಟಿಷರನ್ನು ಬಲವಾಗಿ ವಿರೋಧಿಸಿದ್ದ ಭಾರತದ ಪ್ರದೇಶವೊಂದರ ಮೇಲೆ ಅವರು ಹಿಡಿತ ಸಾಧಿಸುವುದಕ್ಕೆ ನೆರವಾದ ಅವರನ್ನು ಹೀರೋಗಳೆನ್ನಬೇಕೆ ಅಥವಾ ರಾಷ್ಟ್ರವಿರೋಧಿಗಳೆನ್ನಬೇಕೆ?

ಇಂದು ನಮ್ಮ ಸುತ್ತಲೂ ಅಸ್ತ್ರದಂತೆ ಬಳಕೆಯಾಗುತ್ತಿರುವ ಅತಿಯಾದ ಇತಿಹಾಸ ಸುಳ್ಳುಗಳ ವಿಚಾರದಲ್ಲಿ ನಾವು ದೂರ ಕಾಯ್ದುಕೊಳ್ಳಬೇಕಿದೆ. ಇಲ್ಲದೆ ಹೋದರೆ ಹಿಂದಿನ ಕಾಲದಲ್ಲಿ ಮನುಷ್ಯರು 35 ಅಡಿ ಎತ್ತರವಿದ್ದರು ಎಂದು ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲಿನ ಪ್ರವಾಸಿ ಗೈಡ್‌ಗಳು (ಸೀತೆಯ ನಿಗೂಢ ಹೆಜ್ಜೆಗುರುತು ಆರು ಅಡಿಗೂ ಹೆಚ್ಚು ಉದ್ದವೇಕಿತ್ತು ಎಂಬುದನ್ನು ವಿವರಿಸುತ್ತ ಲೇಪಾಕ್ಷಿಯ ಗೈಡ್ ಹೇಳುವಂತೆ) ಬಳಸುವ ಕಾಲ್ಪನಿಕತೆಯನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಕಡೇಪಕ್ಷ ನಾವಾದರೂ ಯಾರಿಗೂ ಯಾವ ಸ್ಮಾರಕಕ್ಕೂ ಹಾನಿ ಎಸಗದಿರೋಣ.

(ಕೃಪೆ: The Hindu)

Similar News