ಮತಾಂತರದ ಮದುವೆ ಕಾನೂನಿಗೆ ಹೈಕೋರ್ಟ್‌ ತಡೆಯಾಜ್ಞೆ; ತೆರವಿಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಗುಜರಾತ್‌ ಸರ್ಕಾರ

Update: 2022-12-04 11:18 GMT

ಹೊಸದಿಲ್ಲಿ: ಆಮಿಷ, ವಂಚನೆ ಅಥವಾ ಮೋಸದಿಂದ ಧಾರ್ಮಿಕ ಮತಾಂತರ ಮಾಡುವುದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟ ಬೆನ್ನಿಗೇ, ಗುಜರಾತ್ ನಲ್ಲಿ 2003ರಲ್ಲಿ ಜಾರಿಗೆ ತಂದಿರುವ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಸೆಕ್ಷನ್ 5ಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ. ಈ ಸೆಕ್ಷನ್ ಪ್ರಕಾರ, ವಿವಾಹದ ಮೂಲಕ ಮತಾಂತರವಾಗಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು timesofindia ವರದಿ ಮಾಡಿದೆ.

ಇದಕ್ಕೂ ಮುನ್ನ ನವೆಂಬರ್ 14ರಂದು ವಕೀಲ ಅಶ್ವಿನಿ ಉಪಾಧ‍್ಯಾಯ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಎಂ.ಆರ್. ಶಾ ನೇತೃತ್ವದ ಪೀಠವು, “ಬಲವಂತದ ಮತಾಂತರ ಆರೋಪವು ಗಂಭೀರ ಸ್ವರೂಪದ್ದಾಗಿದ್ದು, ಇದು ಕೊನೆಗೆ ರಾಷ್ಟ್ರೀಯ ಭದ್ರತೆಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ನಾಗರಿಕರ ಜಾಗೃತ ಪ್ರಜ್ಞೆ ಹಾಗೂ ಯಾವುದೇ ಧರ್ಮವನ್ನು ಮುಕ್ತವಾಗಿ ಸಮರ್ಥಿಸುವ, ಅನುಸರಿಸುವ ಮತ್ತು ಹರಡುವ ಸ್ವಾತಂತ್ರ್ಯವನ್ನು ಉಲ್ಲಂಘಿಸಲಿದೆ. ಹೀಗಾಗಿ ಬಲವಂತದ ಮತಾಂತರವನ್ನು ತಡೆಯಲು ಯಾವ ಬಗೆಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಕೇಂದ್ರ ಸರ್ಕಾರವು ಪ್ರತಿವಾದ ಮಂಡಿಸುವುದು ಒಳಿತು” ಎಂದು ಅಭಿಪ್ರಾಯ ಪಟ್ಟಿತ್ತು.

ಚುನಾವಣೆಯ ಮಧ‍್ಯಭಾಗದಲ್ಲಿ ಕೇಂದ್ರದ ನಿಲುವನ್ನೇ ಅಳವಡಿಸಿಕೊಂಡಿರುವ ಗುಜರಾತ್ ಸರ್ಕಾರ, ʼವಂಚನೆ, ಮೋಸ, ಬಲವಂತ, ಆಮಿಷ ಮೊದಲಾದ ಇತರೆ ವಿಧಾನಗಳಿಂದ ನಿರ್ದಿಷ್ಟ ಧರ್ಮವೊಂದಕ್ಕೆ ಧಾರ್ಮಿಕ ಸ್ವಾತಂತ್ರ್ಯದಡಿ ಮತಾಂತರ ಮಾಡುವುದು ಮೂಲಭೂತ ಹಕ್ಕಲ್ಲʼ ಎಂದು ವಾದಿಸಿದೆ. 

‘ಪ್ರಸರಣ’ ಪದದ ಅರ್ಥ ಮತ್ತು ವ್ಯಾಖ್ಯಾನವನ್ನು ಸಂವಿಧಾನದ 25ನೇ ವಿಧಿಯಲ್ಲಿ ನಿರ್ವಚಿಸಲಾಗಿದ್ದು, ಇದರ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆದು, 25ನೇ ವಿಧಿಯನ್ವಯ ಮತಾಂತರ ಮೂಲಭೂತ ಹಕ್ಕಲ್ಲ ಎಂದು ಸ್ಪಷ್ಟಪಡಿಸಿದ ನಂತರವೇ ಸದನದಲ್ಲಿ ಅಂಗೀಕಾರಗೊಂಡಿದೆ ಎಂದು ಗುಜರಾತ್‌ ಸರ್ಕಾರ ಹೇಳಿದೆ.

“ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಅಧಿನಿಯಮ 1967 ಹಾಗೂ ಒರಿಸ್ಸಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1967ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಈ ಮುನ್ನ ಎತ್ತಿ ಹಿಡಿದಿದ್ದು, ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003 ಕೂಡಾ ಅವನ್ನೇ ಹೋಲುತ್ತದೆ. ವಂಚನೆ ಅಥವಾ ಬಲವಂತದ ಮತಾಂತರವು ಕೇವಲ ಸಾರ್ವಜನಿಕ ಕಾಯ್ದೆಯನ್ನು ಮಾತ್ರ ಉಲ್ಲಂಘಿಸದೆ, ವ್ಯಕ್ತಿಯೋರ್ವನ ಜಾಗೃತ ಪ್ರಜ್ಞೆ ಸ್ವಾತಂತ್ರ್ಯವನ್ನೂ ಹರಣ ಮಾಡುತ್ತದೆ. ಹೀಗಾಗಿ ಅಂಥ ಪ್ರಕರಣಗಳನ್ನು ನಿಯಂತ್ರಿಸುವ/ನಿರ್ಬಂಧಿಸುವ ಸ್ವಾತಂತ್ರ್ಯವನ್ನು ಪ್ರಭುತ್ವ ಹೊಂದಿದೆ ಎಂದು ಗುಜರಾತ್ ಸರ್ಕಾರ ಪ್ರತಿಪಾದಿಸಿತು.

Similar News