ಬಿ.ಸಿ.ರೋಡ್ : ಯುನಿವೆಫ್ ವತಿಯಿಂದ ಸೀರತ್ ಸಮಾವೇಶ

Update: 2022-12-04 12:09 GMT

ಬಿ.ಸಿ.ರೋಡ್ : ಯುನಿವೆಫ್ ಕರ್ನಾಟಕದ 'ಮಾನವ ಸಮಾಜ, ಸಂಸ್ಕೃತಿ  ಮತ್ತು ಪ್ರವಾದಿ ಮುಹಮ್ಮದ್ (ಸ)' ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯುತ್ತಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ  ಬಿ.ಸಿ‌ ರೋಡ್ ಕೈಕಂಬದಲ್ಲಿ ಸೀರತ್ ಸಮಾವೇಶ ನಡೆಯಿತು.

"ನಮ್ಮ ಜೀವನ ಮತ್ತು ಪ್ರವಾದಿ (ಸ)ರ ಬೋಧನೆಗಳು" ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು "ಇಂದು ಸಮುದಾಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಂದರ್ಭದಲ್ಲಿ  ಪ್ರವಾದಿಯವರ ಜೀವನ ನಮಗೆ ಮಾದರಿಯಾಗಬೇಕು. ಜೀವನದ ಎಲ್ಲಾ ರಂಗಗಳಲ್ಲೂ ಕೈಯಾಡಿಸಿದ ಪ್ರವಾದಿ (ಸ) ಯ ಜೀವನದಿಂದ ಪ್ರೇರಿತರಾಗಿ ಸಮುದಾಯದ ಬಲವರ್ಧನೆಗೆ ಶ್ರಮಿಸಬೇಕು. ಓರ್ವ ಪರಿಪೂರ್ಣ ಮುಸ್ಲಿಮನಾಗಿ ಬದುಕಬೇಕಾದರೆ ಆತ ಕುರ್ ಆನ್ ನ ಹಾಗೂ ಪ್ರವಾದಿ (ಸ) ಯ ಆದೇಶ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಲು ಶ್ರಮಿಸಬೇಕಾಗಿದೆ. ಹಿಜಾಬ್ ನಂತಹ ಇಸ್ಲಾಮೀ ಆಚಾರಗಳ ಬಗ್ಗೆ ಅರಿವು ಮತ್ತು ಸಂಪೂರ್ಣ ಅನುಷ್ಟಾನ ನಮ್ಮಲ್ಲಿದ್ದರೆ ಯಾರೂ ಕೂಡಾ ಅವುಗಳ ಬಗ್ಗೆ ಆಕ್ಷೇಪ ಎತ್ತಲು ಅವಕಾಶವಿರಲಾರದು. ಆದರೆ ನಾವು ವಿಭಿನ್ನ ನಿಲುವುಗಳಿಂದ ನಮ್ಮದೇ ಆಚರಣೆಗಳನ್ನು ದುರ್ಬಲಗೊಳಿಸುತ್ತಿದ್ದೇವೆ" ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ ಮುಸ್ಲಿಮ್ ಜಸ್ಟಿಸ್ ಫೋರಂ (MJF) ಮಂಗಳೂರು ಇದರ ವಕ್ತಾರರಾದ ಮುಹಮ್ಮದ್ ಹನೀಫ್ ಖಾನ್ ಕೊಡಾಜೆ ಈ ಸಂದರ್ಭ ಮಾತನಾಡಿದರು.

ವೇದಿಕೆಯಲ್ಲಿ ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಮತ್ತು ಬಂಟ್ವಾಳ ಶಾಖಾಧ್ಯಕ್ಷ ಅಶ್ರಫ್ ಫರಂಗಿಪೇಟೆ ಉಪಸ್ಥಿತರಿದ್ದರು. ಮುಹಮ್ಮದ್ ಅರೀಝ್ ಕಿರ್ ಅತ್ ಪಠಿಸಿದರು. ಹುದೈಫ್ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಉಬೈದುಲ್ಲಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. 

Similar News