ಕರಾವಳಿ ಲೇಖಕಿಯರ-ವಾಚಕಿಯರ ಸಂಘದಿಂದ ಮಹಿಳಾ ಸಾಹಿತ್ಯೋತ್ಸವ ಕಾರ್ಯಕ್ರಮ

Update: 2022-12-04 13:05 GMT

ಮಂಗಳೂರು, ಡಿ.4: ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ಸುಧೀಂದ್ರ ಅಡಿಟೋರಿಯಂನಲ್ಲಿ  ರವಿವಾರ ಮಹಿಳಾ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಪಂ ಸಿಇಒ ಡಾ. ಕುಮಾರ್, ಇಂದು ಟಿ.ವಿ. ಮೊಬೈಲ್ ಇತ್ಯಾದಿಗಳಿಂದ ಮನೆಯಲ್ಲಿ ಪುಸ್ತಕಕ್ಕೆ ಜಾಗ ಇಲ್ಲದಂತಾಗಿದೆ. ನಮ್ಮ ದುಃಖ ನೋವು ಮರೆಯಲು ಪುಸ್ತಕವೇ ಮದ್ದು. ಪುಸ್ತಕ ಒಡೆದ ಮನಸ್ಸನ್ನು ಕೂಡಿಸುತ್ತದೆ ಮಹಿಳೆ ಮನೆಯನ್ನು ಬೆಳಗುವ ಗೂಡುದೀಪ ಮಾತ್ರವಲ್ಲ, ಸಮಾಜವನ್ನು ಬೆಳಗುವ ದೀವಿಗೆ ಎಂದರು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರು ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ಇಂದಿನ ದೈನಂದಿನ ಒತ್ತಡದ ಬದುಕಿನ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಲೇಖಕಿ ಜಯಮ್ಮ ಚೆಟ್ಟಿಮಾಡರಿಗೆ ಮುಂಬೈಯ ಡಾ.ಸುನಿತಾ ಶೆಟ್ಟಿ ಪ್ರಾಯೋಜಿತ ‘ತೌಳವ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ಣಾಟಕ ಬ್ಯಾಂಕ್ ಡಿಜಿಎಂ ಸುಮನಾ ಘಾಟೆ, ಶ್ರೀಗುರು ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ, ಉದ್ಯಮಿ ಜಿತೇಂದ್ರ ಕುಮಾರ್ ಡಿ., ಸಂಘದ ಉಪಾಧ್ಯಕ್ಷೆ ವಿಜಯ ಲಕ್ಷ್ಮೀ ಬಿ.ಶೆಟ್ಟಿ, ಕಾರ್ಯದರ್ಶಿ ಸುಜಾತಾ ಕೊಡ್ಮಣ್, ಜತೆ ಕಾರ್ಯದರ್ಶಿ ಆಕೃತಿ ಐ.ಎಸ್.ಭಟ್, ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಕ್ಷೆ ಡಾ. ಜ್ಯೋತಿ ಚೇಳಾರು ಸ್ವಾಗತಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೂಪಶ್ರೀ ನಾಗರಾಜ್ ಆಶಯಗೀತೆ ಹಾಡಿದರು.

*ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ

ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಘದ ಸದಸ್ಯೆಯರಿಂದ ಭಾವಗಾನ ಪ್ರಸ್ತುತಗೊಂಡಿತು. ಬಳಿಕ ನಡೆದ ವಿಶೇಷ ಉಪನ್ಯಾಸದಲ್ಲಿ ಡಾ.ಮಹೇಶ್ವರಿ ಯು., ಸಿಹಾನ್ ಬಿ.ಎಂ. ‘ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಹಿಳಾ ಸ್ಮೃತಿ-ವಿಸ್ಮೃತಿ’ ವಿಚಾರವಾಗಿ ಮಾತನಾಡಿದರು. ಸಂಘದ ಸದಸ್ಯೆಯರಿಂದ ನ್ಯಾನೋ ಕವಿಗೋಷ್ಠಿ, ಪ್ರಹಸನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು,

ಪೂರ್ಣಿಮಾ ಸುರೇಶ್ ಅವರಿಂದ ಸತ್ಯನಾಪುರದ ಸಿರಿ ಏಕವ್ಯಕ್ತಿ ರೂಪಕ ಪ್ರಸ್ತುತಗೊಂಡಿತು. ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವೆ ಡಾ.ಆರ್.ಸುನಂದಮ್ಮ ಸಮಾರೋಪ ಭಾಷಣ ಮಾಡಿದರು.

Similar News