ಕನಕಪುರ ಕೋಟೆಯಲ್ಲಿ ಡಿ.ಕೆ.ಶಿವಕುಮಾರ್ ಎದುರು ಯಾರ ಆಟ?

Update: 2022-12-05 04:52 GMT

ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಈವರೆಗೆ ಡಿ.ಕೆ. ಶಿವಕುಮಾರ್ ಆಯ್ಕೆಯಾಗುತ್ತ ಬಂದಿದ್ದು, ಸತತ 7 ಬಾರಿ ಗೆಲುವು ಕಂಡವರು. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಮತ್ತೆಂದೂ ಮುಗ್ಗರಿಸಿದ್ದೇ ಇಲ್ಲ ಅವರು. ಹೀಗೆ ರಾಜಕೀಯವಾಗಿ ಅಂಥ ಎದುರಾಳಿಗಳಿಲ್ಲದ ಕ್ಷೇತ್ರದಲ್ಲಿ ಸಹೋದರ ಸುರೇಶ್ ಪ್ರಭಾವವೂ ಇರುವುದರಿಂದ ಜನರ ಒಲವು ಗಳಿಸುವುದು ಕೂಡ ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚು ಕಷ್ಟವಾಗುವಂತೆ ತೋರುವುದಿಲ್ಲ.

ಡಿ.ಕೆ.ಶಿವಕುಮಾರ್ ರಾಜಕೀಯ ಕೋಟೆಯಲ್ಲಿ ಎದುರಾಳಿ ಗಳೇ ಇಲ್ಲ. ಬಿಜೆಪಿಗೆ ನೆಲೆಯಿಲ್ಲದ ಕ್ಷೇತ್ರದಲ್ಲಿ ಜೆಡಿಎಸ್ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲ. ದೊಡ್ಡಗೌಡರನ್ನು ಎದುರು ಹಾಕಿಕೊಳ್ಳದ ಸಮರಸದ ರಾಜಕಾರಣ. ಏಳು ಗೆಲುವುಗಳ ನಂತರ ಹೇಗಿರಲಿದೆ ಪ್ರಭಾವಿಯ ಕನಕಪುರ ಅಖಾಡ? ಕನಕಪುರ ಕ್ಷೇತ್ರ

ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರಿರುವ ಡಿ.ಕೆ.ಶಿವಕುಮಾರ್ ಸತತ ಪ್ರತಿನಿಧಿಸುತ್ತಿರುವ ವಿಧಾನಸಭೆ ಕ್ಷೇತ್ರ ಇದು. ಒಂದು ಕಾಲದಲ್ಲಿ ಪ್ರಭಾವಿ ನಾಯಕರೆಂದು ಹೆಸರು ಮಾಡಿದ್ದ ಪಿ.ಜಿ.ಆರ್. ಸಿಂಧ್ಯಾ ಅವರನ್ನು ಮಣಿಸಿದ ಹೆಗ್ಗಳಿಕೆ. ನಾಲ್ಕು ಬಾರಿ ಶಿವಕುಮಾರ್ ಅವರನ್ನು ಗೆಲ್ಲಿಸಿದ್ದ ಸಾತನೂರು ವಿಧಾನಸಭಾ ಕ್ಷೇತ್ರ, ಕ್ಷೇತ್ರ ಪುರ್ನವಿಂಗಡಣೆ ಆದಾಗ ಕನಕಪುರಕ್ಕೂ ಚನ್ನಪಟ್ಟಣಕ್ಕೂ ಸೇರಿತು.ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ ಶಿವಕುಮಾರ್ ಎದುರಿಗೆ ಪ್ರಬಲ ಎದುರಾಳಿಗಳೇ ಇಲ್ಲ. ಬಿಜೆಪಿಗಂತೂ ಇಲ್ಲಿ ನೆಲೆಯೇ ಇಲ್ಲ. ಡಿ.ಕೆ. ಶಿವಕುಮಾರ್ ನಾಗಾಲೋಟಕ್ಕೆ ಏನಾದರೂ ತಡೆ ಹಾಕಬಹು ದಾದ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ. ಆದರೂ ಕುಮಾರ ಸ್ವಾಮಿ ಈ ಕ್ಷೇತ್ರದ ವಿಚಾರದಲ್ಲಿ ತಲೆಹಾಕಿದ್ದು ಕಡಿಮೆಯೇ.

ಇಷ್ಟು ದಿನಗಳ ಕಾಲ ಕೇವಲ ಕನಕಪುರ ಕ್ಷೇತ್ರದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದ ಡಿ.ಕೆ. ಶಿವಕುಮಾರ್ ಚನ್ನಪಟ್ಟಣ, ರಾಮನಗರ, ಮಾಗಡಿ ಕ್ಷೇತ್ರದ ಬಗ್ಗೆ ಅಷ್ಟಾಗಿ ಯೋಚಿಸಿದ್ದಿಲ್ಲ. ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷವೇ ಪ್ರಬಲ. ಆದರೆ ಈಗ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ, ಜಿಲ್ಲೆಯಲ್ಲಿ ನಿಧಾನವಾಗಿ ಕಾಂಗ್ರೆಸ್ ನೆಲೆಯನ್ನು ಗಟ್ಟಿಗೊಳಿಸುವತ್ತ ಅವರು ಲಕ್ಷ್ಯ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ದೇವೇಗೌಡರೆದುರೇ ಚುನಾವಣೆಗೆ ಇಳಿದು ಸೋತಿದ್ದವರು, ಕುಮಾರಸ್ವಾಮಿ ಅವರಿಗೆ ಸೋಲಿನ ರುಚಿ ತೋರಿಸಿದವರು ಡಿ.ಕೆ.ಶಿವಕುಮಾರ್. ಆದರೆ ರಾಜಕಾರಣದಲ್ಲಿ ಈಗ ಅವರು ಬಹಳ ದೂರ ನಡೆದುಬಂದಿದ್ದಾಗಿದೆ ಮತ್ತು ಈಗ ಸನ್ನಿವೇಶವೂ ಪೂರ್ತಿ ಬೇರೆಯೇ ಇದೆ. ದೇವೇಗೌಡರನ್ನಾಗಲೀ, ಕುಮಾರಸ್ವಾಮಿಯವರನ್ನಾಗಲೀ ಎದುರು ಹಾಕಿಕೊಂಡು ರಾಜಕಾರಣ ಮಾಡುವ ಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ಇಲ್ಲ ಮತ್ತು ಅಂಥ ಇರಾದೆಯೂ ಅವರಿಗೆ ಇದ್ದಂತಿಲ್ಲ.

ಇದೆಲ್ಲದರ ನಡುವೆಯೇ, ಚುನಾವಣೆ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಅನುಕೂಲವಾಗಲು ದುರ್ಬಲ ಅಭ್ಯರ್ಥಿಯನ್ನೇ ಹಾಕುತ್ತಾರೆ ಎಂದೂ ಹೇಳಲಾಗುತ್ತದೆ. ಇನ್ನೊಂದೆಡೆ, ಜೆಡಿಎಸ್‌ನಲ್ಲಿದ್ದ ಹೆಚ್ಚಿನವರು, ಡಿಕೆ ಸಹೋದರರಿಗೆ ವಿರುದ್ಧವಾಗಿದ್ದವರೇ ಕಾಂಗ್ರೆಸ್ ಸೇರಿಬಿಟ್ಟಿದ್ದಾರೆ. ಹಾಗಾಗಿ ಇಲ್ಲಿ ತೀರಾ ಎದುರಾಳಿಗಳೆನ್ನುವವರು ಯಾರೂ ಇಲ್ಲ. ಇದೆಲ್ಲವೂ ಸೇರಿಕೊಂಡು, ಒಳಗೊಳಗೇ ಸಮರಸದ ರಾಜಕೀಯವೂ ನಡೆಯುವ ಹಾಗೆ ಕಾಣಿಸುವುದುಂಟು.

ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಈವರೆಗೆ ಡಿ.ಕೆ. ಶಿವಕುಮಾರ್ ಆಯ್ಕೆಯಾಗುತ್ತ ಬಂದಿದ್ದು, ಸತತ 7 ಬಾರಿ ಗೆಲುವು ಕಂಡವರು. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಮತ್ತೆಂದೂ ಮುಗ್ಗರಿಸಿದ್ದೇ ಇಲ್ಲ ಅವರು. ಹೀಗೆ ರಾಜಕೀಯವಾಗಿ ಅಂಥ ಎದುರಾಳಿಗಳಿಲ್ಲದ ಕ್ಷೇತ್ರದಲ್ಲಿ ಸಹೋದರ ಸುರೇಶ್ ಪ್ರಭಾವವೂ ಇರುವುದರಿಂದ ಜನರ ಒಲವು ಗಳಿಸುವುದು ಕೂಡ ಡಿ.ಕೆ. ಶಿವಕುಮಾರ್ ಅವರಿಗೆ ಹೆಚ್ಚು ಕಷ್ಟವಾಗುವಂತೆ ತೋರುವುದಿಲ್ಲ.

ಇದೆಲ್ಲದರ ನಡುವೆ ಇರುವುದು ಡಿಕೆ ಶಿವಕುಮಾರ್ ಅವರ ಮೇಲಿರುವ ಬಿಜೆಪಿ ಕೆಂಗಣ್ಣು ದಿಲ್ಲಿಯಿಂದ ಸಕ್ರಿಯವಾಗು ತ್ತದೆಂಬ ವಿಚಾರ. ಈ.ಡಿ. ಕೊಕ್ಕೆಯೊಂದು ಅವರ ಮೇಲೆ ಇದ್ದೇ ಇದೆ. ಇದು ಬಿಟ್ಟರೆ ಕ್ಷೇತ್ರದ ಜನತೆ ಅವರ ಕೈಬಿಡಲಾರರು ಎಂದೇ ಹೇಳಲಾಗುತ್ತದೆ. ಸ್ವತಃ ಡಿ.ಕೆ. ಶಿವಕುಮಾರ್ ಕೂಡ ಇದೇ ವಿಶ್ವಾಸ ಹೊಂದಿದ್ದಾರೆ.

 ಡಿ.ಕೆ.ಶಿವಕುಮಾರ್.

ವಯಸ್ಸು 60 ವರ್ಷ. ಕಾಂಗ್ರೆಸ್ ನಾಯಕ. ಪ್ರಸಕ್ತ ಕೆಪಿಸಿಸಿ ಅಧ್ಯಕ್ಷ. 2018ರ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬರುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದವರು. ಕಾಂಗ್ರೆಸ್ ಬಿಕ್ಕಟ್ಟಿನ ಹೊತ್ತಿನಲ್ಲೆಲ್ಲ ತಮ್ಮ ರಾಜಕೀಯ ಚಾಕಚಕ್ಯತೆ ಮತ್ತು ಧಾಡಸೀತನದಿಂದ ಪರಿಸ್ಥಿತಿ ನಿಭಾಯಿಸಿದವರು. ಆ ಕಾರಣದಿಂದಾಗಿಯೇ ದಿಲ್ಲಿ ನಾಯಕರಿಗೂ ಹತ್ತಿರ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿಶ್ವಸನೀಯ ವಲಯದಲ್ಲಿ ಸ್ಥಾನ. ದೇಶದ ಅತಿ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರೆಂಬ ಹಗ್ಗಳಿಕೆ. ಇದರ ಜೊತೆಗೇ ಅಕ್ರಮ ಆಸ್ತಿ ಆರೋಪವೂ ಸುತ್ತಿಕೊಂಡಿದ್ದು, ಈ.ಡಿ. ವಿಚಾರಣೆಯನ್ನು ಎದುರಿಸುತ್ತಲೇ ಇದ್ದಾರೆ. ನೇರವಾಗಿ ಹೇಳಿಕೊಳ್ಳದಿದ್ದರೂ ಅವರು ಕಾಂಗ್ರೆಸ್ ಪಕ್ಷದ ಮುಂದಿನ ಸಿಎಂ ಅಭ್ಯರ್ಥಿ. ಇದೇ ವಿಚಾರವಾಗಿ ಸಿದ್ದರಾಮಯ್ಯ ಬೆಂಬಲಿಗರ ಜೊತೆಗಿನ ಗುದ್ದಾಟವೂ ಸುದ್ದಿಯಾಗುತ್ತಿರುತ್ತದೆ.

ಹಿಂದಿನ ಫಲಿತಾಂಶಗಳು

2008ರಲ್ಲಿ ಡಿ.ಕೆ.ಶಿವಕುಮಾರ್ ಜೆಡಿಎಸ್‌ನ ಡಿ.ಎಂ.ವಿಶ್ವನಾಥ್ ಎದುರು 7,179 ಮತಗಳ ಅಂತದಿಂದ ಗೆದ್ದರು. 2013ರಲ್ಲಿ ಪಿ.ಜಿ.ಆರ್ ಸಿಂಧ್ಯಾ ವಿರುದ್ಧ 31,424 ಮತಗಳ ಅಂತರದ ಗೆಲುವು. ಕಳೆದ ಬಾರಿ 2018ರಲ್ಲಿ ಜೆಡಿಎಸ್‌ನ ನಾರಾಯಣ ಗೌಡ ವಿರುದ್ಧ 79,909 ಮತಗಳ ಅಂತರದ ಜಯ.

ಚುನಾವಣಾ ವಿಷಯ

ಕಾವೇರಿ ನದಿ ತಮಿಳುನಾಡು ಸೇರುವುದು ಈ ಭಾಗದಿಂದಲೇ. ಕುಡಿಯುವ ನೀರಿನ ಮೇಕೆದಾಟು ಯೋಜನೆ ಇಲ್ಲಿ ರಾಜಕೀಯ ಮಹತ್ವ ಪಡೆದಿದೆ. ಅದಕ್ಕೆ ವಿರೋಧಗಳೂ ಇವೆ. ಈ ಕ್ಷೇತ್ರದಿಂದಲೇ ಆ ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿತ್ತು. ಇನ್ನು ಕಪಾಲ ಬೆಟ್ಟದ ಏಸು ಪ್ರತಿಮೆ ವಿಚಾರವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ನೋಡಿ ವಿವಾದವೆಬ್ಬಿಸಿದ್ದ ಬಿಜೆಪಿಯ ಆಟವೇನೂ ಕನಕಪುರದಲ್ಲಿ ನಡೆದಿಲ್ಲ.

ಮತದಾರರ ವಿವರ

   ಒಟ್ಟು ಮತದಾರರು - 2,20,391

   ಪುರುಷರು - 1,09,876

   ಮಹಿಳೆಯರು - 1,10,504

ತೃತೀಯ ಲಿಂಗಿಗಳು - 11

ಜಾತಿವಾರು ಪ್ರಾಬಲ್ಯ

  •    ಒಕ್ಕಲಿಗರು - 98,567 ಮತದಾರರು
  •    ದಲಿತರು - 44,344 ಮತದಾರರು
  •    ಮುಸ್ಲಿಮರು - 22,500 ಮತದಾರರು
  •    ಲಿಂಗಾಯತರು - 18,500 ಮತದಾರರು
  •    ಕುರುಬರು - 5,600 ಮತದಾರರು
  •    ತಿಗಳರು - 10,500 ಮತದಾರರು
  •    ಕ್ರೈಸ್ತರು - 2,507 ಮತದಾರರು
  •    ಬೆಸ್ತರು - 6,000 ಮತದಾರರು
  •    ಇತರ - 9,400 ಮತದಾರರು

Full View

Similar News