ಕಳ್ಳತನದ ಆರೋಪ ಹೊರಿಸಿ ಯುವಕನಿಗೆ ಅಮಾನುಷವಾಗಿ ಥಳಿಸಿದ ಗುಂಪು: ಘಟನೆಯ ವೀಡಿಯೋ ವೈರಲ್

Update: 2022-12-05 13:21 GMT

ಪಾಲ್ಘರ್: ಕಳ್ಳತನದ ಆರೋಪ ಹೊರಿಸಿ 24 ವರ್ಷದ ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೆಲ್ಹರ್ ನಗರದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ವೀಡಿಯೋವನ್ನು ಆರೋಪಿಗಳು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ ಪರಿಣಾಮ ಅದು ವೈರಲ್ ಆಗಿತ್ತು.

ಸಂತ್ರಸ್ತ ಆದಮ್ ಶೇರ್ ಮೊಹಮ್ಮದ್ ಖಾನ್ ಎಂಬಾತನ ತಲೆಗೆ ತೀವ್ರ ಗಾಯಗಳಾಗಿದ್ದು, ಕಾಲಿನ ಮೂಳೆ ಕೂಡ ಮುರಿತಕ್ಕೊಳಗಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು scroll.in ವರದಿ ಮಾಡಿದೆ.

ನವೆಂಬರ್ 29ರ ಬೆಳಿಗ್ಗೆ ಘಟನೆ ನಡೆದಿದೆ. ಖಾನ್ ತನ್ನ ಅತ್ತಿಗೆಯ ಮನೆಯತ್ತ ಸಾಗುತ್ತಿದ್ದಾಗ ಯಾರೋ ಹಿಂದಿನಿಂದ  ಕಳ್ಳ, ಕಳ್ಳ ಎಂದು ಬೊಬ್ಬೆ ಹಾಕಿದಾಗ ಒಂದು ಗುಂಪು ಆತನತ್ತ ಧಾವಿಸಿ ಕಬ್ಬಿಣದ ರಾಡ್‍ನಿಂದ ಥಳಿಸಿದೆ. ಆತನ ತಲೆಗೆ ಹೊಡೆಯುವಂತೆಯೂ ಕೆಲವರು ಹಲ್ಲೆಕೋರರಿಗೆ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಪ್ರಮುಖ ಆರೋಪಿ ಮುಕೇಶ್ ದುಬೆ ಸಹಿತ ಐದು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಕೊಲೆಯತ್ನ ಪ್ರಕರಣ ಆಗದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ. "ಆರೋಪಿಗಳು ಆತನನ್ನು ಕಳ್ಳನೆಂದು ತಿಳಿದುಕೊಂಡಿದ್ದರು. ಯಾವುದೇ ದ್ವೇಷವಿರಲಿಲ್ಲ, ಮೇಲಾಗಿ ಖಾನ್ ವಿರುದ್ಧ ಹಲವಾರು ಪ್ರಕರಣಗಳೂ ಇವೆ,'' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತನ ತಂದೆ ಶೇರ್ ಮೊಹಮ್ಮದ್ ಖಾನ್ ಅವರು ಮಾಧ್ಯಮವೊಂದರ ಜೊತೆ ಮಾತನಾಡಿ ಆರೋಪಿಗಳೆಲ್ಲರೂ ತಮ್ಮ ಮನೆ ಅಸುಪಾಸಿನಲ್ಲಿಯೇ ವಾಸಿಸುವವರಾಗಿದ್ದಾರೆ ಹಾಗೂ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿದ್ದಾರೆ.

ನಿರ್ಮಾಣ ಸಾಮಗ್ರಿಗಳ ಮಳಿಗೆ ಹೊಂದಿರುವ ಶೇರ್ ಮೊಹಮ್ಮದ್, ತಮ್ಮ ಪುತ್ರನ ಕಾಲಿಗೆ ಶಸ್ತ್ರಕ್ರಿಯೆ ನಡೆಸಲಾಗಿದೆ ಹಾಗೂ ತಲೆಗೆ 11 ಹೊಲಿಗೆಗಳನ್ನು ಹಾಕಲಾಗಿದೆ ಎಂದಿದ್ದಾರಲ್ಲದೆ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

Similar News