ಮೀನುಗಾರರಿಗೆ ಸೀಮೆಎಣ್ಣೆ ಬಿಡುಗಡೆಯಾಗದಿದ್ದರೆ ಹೋರಾಟ: ಶಾಸಕ ಯು.ಟಿ.ಖಾದರ್

Update: 2022-12-05 12:26 GMT

ಮಂಗಳೂರು, ಡಿ.5: ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ಇನ್ನು 10 ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಮೀನುಗಾರರ ಪರವಾಗಿ ಬೃಹತ್ ಹೋರಾಟ, ಹಕ್ಕೊತ್ತಾಯ ನಡೆಸುವುದಾಗಿ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.

ಮೀನುಗಾರ ಮುಖಂಡರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ತಿಂಗಳಿಗೆ 300 ಲೀಟರ್ ಸೀಮೆಎಣ್ಣೆಯನ್ನು ಉಚಿತವಾಗಿ ವಿತರಿಸಲು ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸೀಮೆಎಣ್ಣೆ ಸರಿಯಾಗಿ ವಿತರಣೆ ಆಗುತ್ತಿಲ್ಲ. ಕಳೆದ 10 ತಿಂಗಳಿನಿಂದ ಒಂದೇ ಒಂದು ಲೀಟರ್ ಸೀಮೆಎಣ್ಣೆ ಸಿಕ್ಕಿಲ್ಲ ಎಂದವರು ಹೇಳಿದರು.

ಇತ್ತೀಚೆಗೆ ಸೀಮೆಎಣ್ಣೆ ಬಿಡುಗಡೆಗಾಗಿ ಮೀನುಗಾರರು ಪ್ರತಿಭಟನೆಗೆ ಮುಂದಾದಾಗ ಮೀನುಗಾರ ಮುಖಂಡರು ಅವರ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡದಂತೆ ಭಯದ ವಾತಾವರಣ ಸೃಷ್ಟಿಸಲಾಗಿತ್ತು. ಜಿಲ್ಲೆಗೆ ಸ್ವತಃ ಮುಖ್ಯಮಂತ್ರಿ ಭೇಟಿ ನೀಡಿದಾಗಲೂ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಮೀನುಗಾರರ ಪರ ಧ್ವನಿ ಎತ್ತಿಲ್ಲ. ಈ ವರ್ಷ ಮೀನು ಯಥೇಚ್ಛವಾಗಿ ಸಿಗುತ್ತಿದ್ದರೂ ಸೀಮೆಎಣ್ಣೆ ನೀಡದೆ ಇರುವುದರಿಂದ ಸಣ್ಣ ಮೀನುಗಾರರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸರ್ಕಾರ ಒಂದು ದಿನದಲ್ಲಿ ಬಗೆಹರಿಸಬಹುದಾದ ಸಮಸ್ಯೆಯನ್ನು ತಿಂಗಳಾನುಗಟ್ಟಲೆ ವಿಸ್ತರಿಸಿ ಮೀನುಗಾರರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.

ಬೋಟ್‌ಗಳು ದಡಕ್ಕೆ ಬರುವಾಗ ಅಳಿವೆ ಬಾಗಿಲಿನಲ್ಲಿ ದಾರಿ ತಪ್ಪದಂತೆ ಸೇಫ್ ಗಾರ್ಡ್ ಲೈಟ್ ಅಳವಡಿಸುವಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಬೋಟುಗಳು ದಾರಿ ತಪ್ಪುವ ಸಾಧ್ಯತೆ ಹೆಚ್ಚಿದೆ. ಕಾರವಾರದಲ್ಲಿ ಈ ಬೆಳಕಿನ ವ್ಯವಸ್ಥೆ ಮಾಡಿರುವಾಗ ಮಂಗಳೂರಿನಲ್ಲೇಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.

ಬಡ ಮೀನುಗಾರರಿಗೆ ಮನೆ ಕಟ್ಟಲು ಪ್ರತಿವರ್ಷ ನೀಡಲಾಗುತ್ತಿದ್ದ ಅನುದಾನ ಬಿಜೆಪಿ ಸರಕಾರ ಬಂದ ಮೇಲೆ ನಿಂತಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಮನೆ ಫಲಾನುಭವಿಗಳ ಪಟ್ಟಿಯಲ್ಲಿ ಕೂಡ ತಾರತಮ್ಯ ಎಸಗಲಾಗಿದೆ. ಮೀನುಗಾರರು ಹೆಚ್ಚಿರುವ ಉಳ್ಳಾಲ ಕ್ಷೇತ್ರಕ್ಕೆ ಕೇವಲ 10 ಮನೆ ಹಂಚಿಕೆ ಮಾಡಿದ್ದರೆ, ಸಮುದ್ರವೇ ಇಲ್ಲದ ಸುಳ್ಯಕ್ಕೆ 60, ಬಂಟ್ವಾಳಕ್ಕೆ 50, ಮಂಗಳೂರು ದಕ್ಷಿಣಕ್ಕೆ 25 ಮನೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಮುಹಮ್ಮದ್ ಮೋನು, ಶುಭೋದಯ ಆಳ್ವ, ಟ್ರಾಲ್‌ ಬೋಟ್ ಮೀನುಗಾರರ ಸಂಘಟನೆ ಅಧ್ಯಕ್ಷ ಚೇತನ್ ಬೆಂಗ್ರೆ, ಸತೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. 

Similar News