ಅಪಘಾತಗಳಿಗೆ ಕಾರಣವಾಗುವ ಬಸ್ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಉಡುಪಿ ಎಸ್ಪಿ ಎಚ್ಚರಿಕೆ

Update: 2022-12-05 14:47 GMT

ಉಡುಪಿ, ಡಿ.5: ಅಪಘಾತಗಳಿಗೆ ನೇರವಾಗಿ ಕಾರಣವಾಗುವ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.

ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.4ರಂದು ಬಸ್ ಚಾಲಕ ಒಮ್ಮೇಲೆ ಚಲಾಯಿಸಿದ ಪರಿಣಾಮ ಬಸ್ ಹತ್ತುತ್ತಿದ್ದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಅದೇ ರೀತಿ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.26ರಂದು ಬಸ್ ಚಾಲಕ ಒಮ್ಮೇಲೆ ಚಲಾಯಿಸಿದ ಪರಿಣಾಮ ಪಾರ್ಸೆಲ್ ನೀಡಿ ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದರು.

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ಬಸ್‌ಗಳಲ್ಲಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯದಿಂದ ಪ್ರಯಾಣಿಕರು ಇಳಿಯುವ ಮತ್ತು ಏರುವ ಮೊದಲೇ ಬಸ್ಸನ್ನು ಚಲಾಯಿಸುತ್ತಿದ್ದಾರೆ. ಅತಿಯಾದ ಪ್ರಯಾಣಿಕರನ್ನು ತುಂಬಿಸಿಕೊಂಡು, ಫುಟ್‌ಬೋರ್ಡ್ ಮೇಲೆ ನೇತಾಡಿಕೊಂಡು ಪ್ರಯಾಣಿಸುವಷ್ಟು ಪ್ರಯಾಣಿಕರನ್ನು ಸಾಗಿಸುತ್ತಿರು ವುದು ಕಂಡುಬಂದಿದೆ. ಇವು ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಈ ರೀತಿ ಅಪಘಾತಗಳಿಗೆ ಕಾರಣವಾಗುವ ಬಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News