ಕೇರಳ ವಿಧಾನಸಭಾ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳಾ ತ್ರಿಸದಸ್ಯ ಸಮಿತಿಯ ಸಭಾಧ್ಯಕ್ಷತೆ

Update: 2022-12-05 15:28 GMT

ತಿರುವನಂತಪುರ: ಕೇರಳ ವಿಧಾನಸಭಾ (Kerala Assembly) ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಮೂವರು ಮಹಿಳೆಯರ ತ್ರಿಸದಸ್ಯ ಸಮಿತಿಯು ಸಭಾಧ್ಯಕ್ಷತೆಯನ್ನು ವಹಿಸಲಿದೆ. ಎಂ.ಬಿ. ರಾಜೇಶ್ ನಂತರ ಸಭಾಧ್ಯಕ್ಷರಾಗಿರುವ ಎ.ಎನ್. ಶಂಶೀರ್ (AN Shamseer) ಈ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದು, ಸಂಪೂರ್ಣ ಮಹಿಳೆಯರೇ ಹೊಂದಿರುವ ಸಮಿತಿಯೊಂದನ್ನು ರಚಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಇದರ ಬೆನ್ನಿಗೇ ಆಡಳಿತಾರೂಢ ಎಡರಂಗ ಇಬ್ಬರ ಹೆಸರನ್ನು ಸಲಹೆ ಮಾಡಿದ್ದರೆ, ವಿರೋಧ ಪಕ್ಷವಾದ ಸಂಯುಕ್ತ ಪ್ರಜಾ ರಂಗ (UDF) ಒಬ್ಬರ ಹೆಸರನ್ನು ಸೂಚಿಸಿದೆ ಎಂದು thenewsminute.com ವರದಿ ಮಾಡಿದೆ. 

ಈ ತ್ರಿಸದಸ್ಯ ಸಮಿತಿಯು ಸಿಪಿಐನ ಆಶಾ ಸಿ.ಕೆ, ಸಿಪಿಐ(ಎಂ)ನ ಯು. ಪ್ರತಿಭಾ ಹಾಗೂ ಯುಡಿಎಫ್‍ನ ಮೈತ್ರಿ ಪಕ್ಷವಾದ ಭಾರತೀಯ ಕ್ರಾಂತಿಕಾರಿ ಮಾರ್ಕ್ಸ್ ವಾದ ಪಕ್ಷದ ಕೆ.ಕೆ. ರೇಮಾ ಅವರನ್ನು ಒಳಗೊಂಡಿದೆ. ಸಾಮಾನ್ಯವಾಗಿ ಈ ಸಮಿತಿಯಲ್ಲಿ ಓರ್ವ ಮಹಿಳಾ ಸದಸ್ಯೆ ಮಾತ್ರ ಇರುತ್ತಿದ್ದರು. ಪ್ರಥಮ ಕೇರಳ ವಿಧಾನಸಭೆಯಿಂದ ಈಗಿನ 15ನೇ ಅವಧಿಯ ವಿಧಾನಸಭೆಯ 7ನೇ ಅಧಿವೇಶನದವರೆಗೆ ಒಟ್ಟು 515 ಸದಸ್ಯರು ಈ ಸಮಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಕೇವಲ 32 ಮಹಿಳೆಯರು ಮಾತ್ರ ಈ ಸಮಿತಿಯ ಸದಸ್ಯರಾಗಿದ್ದರು. ಸದನದಲ್ಲಿ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಇದ್ದರೂ ಸಹ ಯುಡಿಎಫ್ ರೇಮಾ ಅವರ ಹೆಸರನ್ನು ಶಿಫಾರಸು ಮಾಡಿದೆ.

ಕೇರಳ ವಿಧಾನಸಭೆಯ 15ನೇ ಅವಧಿಯ 7ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಶಂಶೀರ್, ನನಗೆ ರಾಜ್ಯ ವಿಧಾನಸಭೆಯ ಅಧ್ಯಕ್ಷತೆ ಪಾತ್ರ ನಿರ್ವಹಿಸಿವ ಅವಕಾಶ ದೊರೆತಿರುವುದು ಒಂದು ಭಾಗ್ಯವಾಗಿದೆ. ಹೀಗಿದ್ದೂ ನಾನು ನನ್ನ ರಾಜಕೀಯ ಗುರು ಕೋಡಿಯೇರಿ ಬಾಲಕೃಷ್ಣನ್ ಅವರಿಗೆ ಸಂತಾಪ ಸೂಚಿಸುವ ಮೂಲಕ ಪ್ರಾರಂಭಿಸುತ್ತಿರುವುದು ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ವಿಝಿಂಜಂನಲ್ಲಿ ನಿರ್ಮಾಣಗೊಳ್ಳುತ್ತಿರುವ ಅದಾನಿ ಸಮೂಹದ ಬಂದರಿನ ವಿರುದ್ಧ ಪ್ರತಿಭಟನೆ ಬುಗಿಲೆದ್ದಿರುವ ನಡುವೆಯೇ ಪ್ರಸ್ತುತ ವಿಧಾನಸಭಾ ಅಧಿವೇಶನ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಎಲ್ ಡಿಎಫ್ ಶಾಸಕ ಕಡಂಕಂಪಳ್ಳಿ ಸುರೇಂದ್ರ ಈ ವಿಷಯದ ಕುರಿತು ಸದನ ಗಮನ ಹರಿಸಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: 2021ರ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ ಪ್ರಶಸ್ತಿ? ‍ಪಟ್ಟಿ ಇಲ್ಲಿದೆ...

Similar News