‘ಮತದಾನ ದಿನ ರೋಡ್ ಶೋ ನಡೆಸಿದ ಪ್ರಧಾನಿ’ : ಚುನಾವಣಾ ಆಯೋಗದ ವಿರುದ್ದ ಕಾಂಗ್ರೆಸ್ ಆಕ್ರೋಶ

Update: 2022-12-05 16:16 GMT

ಹೊಸದಿಲ್ಲಿ, ಡಿ. 5: ಮತ ಹಾಕಲು ಹೋಗುವಾಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ‘ರಾಜಕೀಯ ರೋಡ್ಶೋ’ ('Political Roadshow')ನಡೆಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ಕಾಂಗ್ರೆಸ್ ಸೋಮವಾರ ಆಕ್ರೋಶ ವ್ಯಕ್ತಪಡಿಸಿದೆ. ಭಾರತೀಯ ಚುನಾವಣಾ ಆಯೋಗದ ‘‘ಸಂಪೂರ್ಣ ಮೌನ ಮತ್ತು ಸಂಪೂರ್ಣ ನಿಷ್ಕ್ರಿಯತೆ’’ಯನ್ನೂ ಕಾಂಗ್ರೆಸ್ ಪ್ರಶ್ನಿಸಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ, ಮತ ಹಾಕಲು ಹೋಗುವಾಗ ಪ್ರಧಾನಿ ಮೋದಿ ಎರಡೂವರೆ ಗಂಟೆ ಅದ್ದೂರಿಯ ರೋಡ್ ನಡೆಸಿರುವುದು ಹಾಗೂ ಅದು ದೇಶಾದ್ಯಂತ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ನೇರಪ್ರಸಾರಗೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

‘‘ಗುಜರಾತ್ ನಲ್ಲಿ ಸರಕಾರ, ಪಕ್ಷ, ಆಡಳಿತ, ಚುನಾವಣಾ ಯಂತ್ರ, ಎಲ್ಲವೂ ಒಂದೇ ಆಗಿದೆ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera)ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

‘‘ನಮ್ಮ ಪಕ್ಷವು ವಿವಿಧ ಮಟ್ಟಗಳಲ್ಲಿ ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸುತ್ತಾ ಬಂದಿದೆ. ಆದರೆ, ಚುನಾವಣಾ ಆಯೋಗವು ಸ್ವಇಚ್ಛೆಯಿಂದಲೇ ಒತ್ತಡದಲ್ಲಿರುವಂತೆ ಕಾಣುತ್ತದೆ’’ ಎಂದು ಖೇರಾ ಹೇಳಿದರು.

ಪ್ರಧಾನಿ ಮೋದಿ ಜನರ ಕರತಾಡನಗಳ ಮಧ್ಯೆ ರೋಡ್ ಶೋ ಮಾಡುತ್ತಾ ಮತಗಟ್ಟೆ ಪ್ರವೇಶಿಸಿರುವುದಕ್ಕೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಂಥ ಇತರ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

‘‘ಮತದಾನ ಮಾಡಲು ಅಹ್ಮದಾಬಾದ್ಗೆ ತೆರಳಿದ ಪ್ರಧಾನಿಯವರು ಎರಡೂವರೆ ಗಂಟೆಗಳ ಕಾಲ ರೋಡ್ಶೋ ಮಾಡಲು ನಿರ್ಧರಿಸುತ್ತಾರೆ. ಅದನ್ನು ನಿಮ್ಮ ಎಲ್ಲಾ ಚಾನೆಲ್ ಗಳು ಉಚಿತವಾಗಿ ನೇರಪ್ರಸಾರ ಮಾಡುತ್ತವೆ. ಇದು ಜಾಹೀರಾತಲ್ಲವೇ? ಅದಕ್ಕಾಗಿ ನೀವು ಬಿಜೆಪಿಯಿಂದ ಶುಲ್ಕ ವಸೂಲು ಮಾಡಬೇಕಲ್ಲವೇ? ನೀವು ಅದನ್ನು ಉಚಿತವಾಗಿ ಯಾಕೆ ನೇರಪ್ರಸಾರ ಮಾಡುತ್ತೀರಿ?’’ ಎಂದು ಖೇರಾ ಕೇಳಿದರು. ಈ ವಿಷಯದಲ್ಲಿ ಕಾಂಗ್ರೆಸ್ ‘‘ಅಗತ್ಯ ಕ್ರಮಗಳನ್ನು’’ ತೆಗೆದುಕೊಳ್ಳುವುದು ಹಾಗೂ ಭಾರತೀಯ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವುದು ಎಂದು ಹೇಳಿದರು.

ಇಂಥ ಪ್ರಚಾರವು ಪಕ್ಷದ ಚುನಾವಣಾ ವೆಚ್ಚದ ವ್ಯಾಪ್ತಿಗೆ ಬರುವಂತೆ ಖಾತರಿಪಡಿಸಿಕೊಳ್ಳಲು ಕಾನೂನು ರೀತಿಯಲ್ಲಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವುದು ಎಂದು ಪವನ್ ಖೇರಾ ಹೇಳಿದರು.

'ಹಾಲಿ ಶಾಸಕನಿಗೇ ರಕ್ಷಣೆಯಿಲ್ಲ' : ರವಿವಾರ ಸಂಜೆ ನಾಪತ್ತೆಯಾದ ಕಾಂಗ್ರೆಸ್ ಶಾಸಕ ಕಾಂತಿ ಖರಾಡಿ ಪ್ರಕರಣವನ್ನೂ ಪವನ್ ಖೇರಾ ಪ್ರಸ್ತಾವಿಸಿದರು. ನನ್ನ ಬಿಜೆಪಿ ಎದುರಾಳಿಯ ನೇತೃತ್ವದ ಗುಂಪೊಂದು ನನ್ನ ಮೇಲೆ ತಲವಾರುಗಳಿಂದ ದಾಳಿ ನಡೆಸಿದ್ದು, ಪ್ರಾಣ ರಕ್ಷಣೆಗಾಗಿ ನಾನು ರಾತ್ರಿಯನ್ನು ಕಾಡಿನಲ್ಲಿ ಕಳೆದೆ ಎಂದು ದಾಂತ ಕ್ಷೇತ್ರದ ಹಾಲಿ ಶಾಸಕ ಖರಾಡಿ ಸೋಮವಾರ ಬೆಳಗ್ಗೆ ಆರೋಪಿಸಿದ್ದಾರೆ.

ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ಹೆಚ್ಚುವರಿ ಭದ್ರತೆ ಬೇಕು ಎಂದು ಕೋರಿ ಬುಡಕಟ್ಟು ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕಾಂತಿ ಖರಡಿ ರವಿವಾರ ಮಧ್ಯಾಹ್ನ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು ಎಂದು ಖೇರಾ ಹೇಳಿದರು. ಸಂಜೆಯ ವೇಳೆಗೆ, ಬಿಜೆಪಿಯ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿದರು ಎಂದರು.

ಅವರ ಮನವಿಗಳಿಗೆ ಚುನಾವಣಾ ಆಯೋಗವು ಸರಿಯಾದ ಸಮಯದಲ್ಲಿ ಗಮನ ಕೊಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

‘‘ರಾತ್ರಿ ಸುಮಾರು 9:30ರ ವೇಳೆಗೆ, ಬಿಜೆಪಿ ಅಭ್ಯರ್ಥಿ ಮತ್ತು ಅವರ 150 ಗೂಂಡಾಗಳು ತಲವಾರುಗಳಿಂದ ನನ್ನ ಮೇಲೆ ದಾಳಿ ನಡೆಸಿದರು. ಅವರು ನನ್ನನ್ನು ಕೊಲ್ಲುತ್ತಿದ್ದರು. ಹಾಗಾಗಿ, ನಾನು ಓಡಿದೆ ಹಾಗೂ 3-4 ಗಂಟೆಗಳ ಕಾಲ ಕಾಡಿನಲ್ಲಿ ಅಡಗಿದೆ. ಮೂರು - ನಾಲ್ಕು ಗಂಟೆಗಳ ಬಳಿಕ ಪೊಲೀಸರು ಬಂದರು’’ ಎಂದು ಖರಡಿ ಎನ್ಡಿಟಿವಿಗೆ ಹೇಳಿದರು.

ಗುಜರಾತ್ ನಲ್ಲಿ ಬಿಜೆಪಿ ಮದ್ಯ ವಿತರಿಸುವ ದೃಶ್ಯಗಳನ್ನು ಒಳಗೊಂಡ ವೀಡಿಯೊ ತುಣುಕುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿಯೂ ಪವನ್ ಖೇರಾ ಹೇಳಿದರು. ಗುಜರಾತ್ ನಲ್ಲಿ ಪಾನನಿಷೇಧ ಜಾರಿಯಲ್ಲಿದೆ.

‘‘ಅವರು ಬಹಿರಂಗವಾಗಿ ನಾಚಿಕೆಯಿಲ್ಲದೆ ಮದ್ಯ ವಿತರಿಸುತ್ತಿದ್ದಾರೆ. ಅವರ ವಾಹನಗಳಲ್ಲಿ ಬಿಜೆಪಿಯ ಚಿಹ್ನೆಗಳಿವೆ. ಅವರಿಗೆ ಯಾರ ಹೆದರಿಕೆಯೂ ಇಲ್ಲ. ಗುಜರಾತ್ ನಲ್ಲಿ ಸರಕಾರ, ಪಕ್ಷ, ಆಡಳಿತ, ಚುನಾವಣಾ ಯಂತ್ರ ಎಲ್ಲವೂ ಒಂದಾಗಿದೆ. ಗುಜರಾತ್ ಸರಕಾರದ ಲಾಂಛನ ಇನ್ನು ಕಮಲ ಆಗಬೇಕು. ಇದು ಗುಜರಾತ್ನಲ್ಲಿರುವ ಆಡಳಿತದ ಪರಿಸ್ಥಿತಿ. ಇದು ಗುಜರಾತ್ ನ  ಚುನಾವಣಾ ಯಂತ್ರದ ಪರಿಸ್ಥಿತಿ’’ ಎಂದು ಅವರು ಹೇಳಿದರು.

Similar News