ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್‌ಗೆ ಸೋಲುಣಿಸಿದ ಕ್ರೊಯೇಶಿಯ ಕ್ವಾರ್ಟರ್ ಫೈನಲ್‌ಗೆ

Update: 2022-12-05 17:53 GMT

 ದೋಹಾ, ಡಿ.5: ತೀವ್ರ ಪೈಪೋಟಿಯಿಂದ ಕೂಡಿದ್ದ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊಯೇಶಿಯ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಜಪಾನ್ ತಂಡವನ್ನು 3-1 ಅಂತರದಿಂದ ಮಣಿಸಿತು. ಈ ಮೂಲಕ ಮೂರನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿತು.

ಖತರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಮೊದಲ ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. 2018ರ ವಿಶ್ವಕಪ್‌ನಲ್ಲಿ ಕ್ರೊಯೇಶಿಯ ಎರಡು ಬಾರಿ ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಸಾಧಿಸಿತ್ತು. ಜಪಾನ್ 2015ರ ಏಶ್ಯಕಪ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಯುಎಇಗೆ ಸೋಲುಂಡಿತ್ತು.

 ಅಲ್ ಜನಾಬ್ ಸ್ಟೇಡಿಯಮ್‌ನಲ್ಲಿ ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ದೈತ್ಯ ಸಂಹಾರಿ ಜಪಾನ್ ಹಾಗೂ 2018ರ ವಿಶ್ವಕಪ್‌ನ ರನ್ನರ್ಸ್ ಅಪ್ ಕ್ರೊಯೇಶಿಯ ನಿಗದಿತ 90 ನಿಮಿಷಗಳ ಆಟದ ಅಂತ್ಯದಲ್ಲಿ 1-1ರಿಂದ ಸಮಬಲ ಸಾಧಿಸಿದವು. ಆಗ ಫಲಿತಾಂಶ ನಿರ್ಧರಿಸಲು 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಹೆಚ್ಚುವರಿ ಸಮಯದಲ್ಲೂ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ ಕಾರಣ ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು.

 ಆರಂಭದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಕೆಲವು ಆರಂಭಿಕ ಅವಕಾಶವನ್ನು ಹಾಳು ಮಾಡಿಕೊಂಡವು. ಮೊದಲಾರ್ಧದ ಅಂತ್ಯವಾಗಲು ಕೆಲವೇ ನಿಮಿಷವಿರುವಾಗ ಜಪಾನ್ 1-0 ಮುನ್ನಡೆ ಸಾಧಿಸಿತು. ಮಾಯ್ದ ಡಾಯ್ಝನ್ 43ನೇ ನಿಮಿಷದಲ್ಲಿ ಗೋಲು ಗಳಿಸಿ ಜಪಾನ್‌ಗೆ ಮುನ್ನಡೆ ಒದಗಿಸಿದರು.
ಇವಾನ್ ಪೆರಿಸಿಕ್ ದ್ವಿತೀಯಾರ್ಧದ 55ನೇ ನಿಮಿಷದಲ್ಲಿ ಅದ್ಭುತ ಹೆಡ್ಡರ್ ಮೂಲಕ ಗೋಲು ದಾಖಲಿಸಿ ಕ್ರೊಯೇಶಿಯ 1-1ರಿಂದ ಸಮಬಲ ಸಾಧಿಸಲು ನೆರವಾದರು.

ಕ್ರೊಯೇಶಿಯ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಝಿಲ್-ದಕ್ಷಿಣ ಕೊರಿಯಾ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಕ್ರೊಯೇಶಿಯ ಕೀಪರ್ ಡೊಮಿನಿಕ್ ಲಿಯಾಕೋವಿಕ್ ಅವರು 57ನೇ ನಿಮಿಷದಲ್ಲಿ ಜಪಾನ್‌ನ ವಟಾರು ಎಂಟೊ ಅವರು ಹೊಡೆದ ಗೋಲನ್ನು ಮೇಲಕ್ಕೆ ಜಿಗಿದು ತಡೆಯುವ ಮೂಲಕ ಗೋಲು ನಿರಾಕರಿಸಿದರು.

ಕ್ರೊಯೇಶಿಯ ಮೂರನೇ ಬಾರಿ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ. 1998 ಹಾಗೂ 2018ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿತ್ತು.

Similar News